ADVERTISEMENT

St. Louis Rapid and Blitz: ರ್‍ಯಾ‍ಪಿಡ್‌ ವಿಭಾಗದಲ್ಲಿ ಗುಕೇಶ್‌ಗೆ 4ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 14 ಆಗಸ್ಟ್ 2025, 13:55 IST
Last Updated 14 ಆಗಸ್ಟ್ 2025, 13:55 IST
ಗುಕೇಶ್
ಗುಕೇಶ್   

ಸೇಂಟ್‌ ಲೂಯಿ (ಅಮೆರಿಕ): ಅಮೆರಿಕದ ಲೀನಿಯರ್ ಡೊಮಿಂಗೆಝ್‌ ಪೆರೆಝ್ ಎದುರು ಸೋಲನುಭವಿಸಿ ದಿನ ಆರಂಭಿಸಿದ ವಿಶ್ವ ಚಾಂಪಿಯನ್ ಡಿ.ಗುಕೇಶ್‌ ನಂತರ ಚೇತರಿಸಿಕೊಂಡು ಅದೇ ದೇಶದ ಇನ್ನಿಬ್ಬರು ಗ್ರ್ಯಾಂಡ್‌ಮಾಸ್ಟರ್‌ಗಳಾದ ವೆಸ್ಲಿ ಸೊ ಮತ್ತು ಫ್ಯಾಬಿಯಾನೊ ಕರುವಾನಾ ಅವರನ್ನು ಸೋಲಿಸಿದರು.

ಆ ಮೂಲಕ ಸೇಂಟ್‌ ಲೂಯಿ ರ್‍ಯಾಪಿಡ್‌  ಮತ್ತು ಬ್ಲಿಟ್ಝ್‌ ಟೂರ್ನಿಯಲ್ಲಿ ಬುಧವಾರ ಒಂಬತ್ತು ಸುತ್ತುಗಳ ನಂತರ ನಾಲ್ಕನೇ ಸ್ಥಾನಕ್ಕೇರಿದರು.

10 ಆಟಗಾರರು ಕಣದಲ್ಲಿರುವ ಈ ಟೂರ್ನಿಯ ರ‍್ಯಾಪಿಡ್‌ ಸುತ್ತುಗಳು ಮುಗಿದಿವೆ. ಬ್ಲಿಟ್ಝ್‌ ಟೂರ್ನಿಯ ಡಬಲ್‌ ರೌಂಡ್‌ರಾಬಿನ್ ಮಾದರಿಯಲ್ಲಿ (18 ಸುತ್ತು) ನಡೆಯಲಿವೆ. ಟೂರ್ನಿಯು ₹1.53 ಕೋಟಿ ಬಹುಮಾನ ಮೊತ್ತ ಹೊಂದಿದೆ.

ADVERTISEMENT

ಕೊನೆಯ ಸುತ್ತಿನಲ್ಲಿ ಗುಕೇಶ್‌ ಎದುರು ಸೋತರೂ ಕರುವಾನಾ ಒಟ್ಟು 14 ಅಂಕ ಗಳಿಸಿ ರ್‍ಯಾಪಿಡ್‌ ಸುತ್ತನ್ನು ಅಗ್ರಸ್ಥಾನದಲ್ಲಿ ಮುಗಿಸಿದರು. ಅರ್ಮೇನಿಯಾ ಮೂಲದ ಅಮೆರಿಕನ್ ಗ್ರ್ಯಾಂಡ್‌ಮಾಸ್ಟರ್ ಲೆವೊನ್ ಅರೋನಿಯನ್ (13 ಅಂಕ) ಎರಡನೇ ಸ್ಥಾನ ಪಡೆದಿದ್ದಾರೆ. ಫ್ರಾನ್ಸ್‌ನ ವೇಷಿಯಲ್ ಲಗ್ರಾವ್‌ (11) ಮೂರನೇ ಸ್ಥಾನ ಗಳಿಸಿದ್ದಾರೆ. ಟೂರ್ನಿಯಲ್ಲಿ ಇದುವರೆಗೆ ಮಿಶ್ರಫಲ ಅನುಭವಿಸಿರುವ ಗುಕೇಶ್ (10) ನಾಲ್ಕನೇ ಸ್ಥಾನದಲ್ಲಿದ್ದಾರೆ.

ಡೊಮಿಂಗೆಝ್‌, ವೆಸ್ಲಿ ಸೊ ಮತ್ತು ಉಜ್ಬೇಕಿಸ್ತಾನದ ನದಿರ್ಬೆಕ್‌ ಅಬ್ದುಸತ್ತಾರೋವ್ ತಲಾ 9 ಅಂಕ ಗಳಿಸಿದ್ದಾರೆ. ವಿಯೆಟ್ನಾಮಿನ ಲೀಮ್‌ ಲಿ ಕ್ವಾಂಗ್‌ (7) ಎಂಟನೇ, ಅಮೆರಿಕದ ಸ್ಯಾಮ್‌ ಶಂಕ್ಲಾಂಡ್‌ (5) ಮತ್ತು ಅಮೆರಿಕದ ಗ್ರಿಗೊರಿ ಒಪಾರಿನ್‌ (3) ಕ್ರಮವಾಗಿ 9 ಮತ್ತು ಕೊನೆಯ ಸ್ಥಾನ ಗಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.