ADVERTISEMENT

ಒಲಿಂಪಿಕ್ಸ್: ಕೋವಿಡ್‌ ಮಾರ್ಗಸೂಚಿಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ಆಕ್ಷೇಪ

ಭಾರತ ಅಥ್ಲೀಟ್‌ಗಳ ತಂಡಕ್ಕೆ ಕಠಿಣ ನಿಯಮಗಳು

ಪಿಟಿಐ
Published 19 ಜೂನ್ 2021, 10:51 IST
Last Updated 19 ಜೂನ್ 2021, 10:51 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ನವದೆಹಲಿ: ಟೋಕಿಯೋ ಒಲಿಂಪಿಕ್ಸ್‌ಗೆ ತೆರಳಲಿರುವ ಭಾರತೀಯ ಕ್ರೀಡಾಪಟುಗಳು ಮತ್ತು ಅಧಿಕಾರಿಗಳನ್ನು, ದೇಶದಿಂದ ನಿರ್ಗಮಿಸುವ ಮೊದಲು ಒಂದು ವಾರದವರೆಗೆ ಪ್ರತಿದಿನ ಕೋವಿಡ್‌ ಪರೀಕ್ಷೆಗೆ ಒಳಪಡಿಸಲು ಮತ್ತು ಜಪಾನ್‌ ತಲುಪಿದ ಬಳಿಕ ಮೂರು ದಿನಗಳವರೆಗೆ ಅನ್ಯ ದೇಶದ ಯಾರೊಂದಿಗೂ ಸಂವಹನ ನಡೆಸದಂತೆ ಜಪಾನ್‌ ಸರ್ಕಾರವು ಸೂಚಿಸಿದೆ. ಆದರೆ ಈ ಮಾರ್ಗಸೂಚಿಗಳಿಗೆ ಭಾರತ ಒಲಿಂಪಿಕ್ ಸಂಸ್ಥೆ ಆಕ್ಷೇಪ ವ್ಯಕ್ತಪಡಿಸಿದೆ.

ಕೋವಿಡ್ -19ರ ವಿವಿಧ ರೂಪಾಂತರಗಳನ್ನು ಗುರುತಿಸಲಾಗಿರುವ ಭಾರತ ಸೇರಿದಂತೆ 11 ದೇಶಗಳ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಹಾಯಕ ಸಿಬ್ಬಂದಿ ಸೇರಿದಂತೆ ಎಲ್ಲ ಪ್ರಯಾಣಿಕರು ಟೋಕಿಯೊಗೆ ಆಗಮಿಸಿದ 14 ದಿನಗಳೊಳಗೆ ಕಠಿಣ ನಿಯಮಗಳನ್ನು ಜಾರಿ ಮಾಡಲಾಗುತ್ತದೆ.

‘ಇದು ಅನ್ಯಾಯ ಮತ್ತು ತಾರತಮ್ಯ ನೀತಿ‘ ಎಂದು ಈ ನಿಯಮಗಳ ವಿರುದ್ಧ ಭಾರತ ಒಲಿಂಪಿಕ್ ಸಂಸ್ಥೆ (ಐಒಎ) ಕಿಡಿ ಕಾರಿದೆ. ಕೋವಿಡ್ ಎರಡನೇ ಅಲೆಯ ಬಳಿಕ ಭಾರತದಲ್ಲಿ ಪ‍ರಿಸ್ಥಿತಿ ಗಣನೀಯವಾಗಿ ಸುಧಾರಿಸಿದೆ. ಕೆಲವು ವಾರಗಳ ಹಿಂದೆ ಪ್ರತಿದಿನ ದಾಖಲಾಗುತ್ತಿದ್ದ ಸೋಂಕು ಪ್ರಕರಣಗಳು ಗಣನೀಯ ಕುಸಿತ ಕಂಡು ಈಗ 60 ಸಾವಿರಕ್ಕೆ ತಲುಪಿದೆ.

ADVERTISEMENT

ಭಾರತ ತಂಡದ ಅಥ್ಲೀಟ್‌ಗಳು, ಅಫ್ಗಾನಿಸ್ತಾನ, ಮಾಲ್ಡೀವ್ಸ್, ನೇಪಾಳ, ಪಾಕಿಸ್ತಾನ ಹಾಗೂ ಶ್ರೀಲಂಕಾ ತಂಡಗಳ ಅಥ್ಲೀಟ್‌ಗಳೊಂದಿಗೆ ಗುಂಪು ಒಂದರಲ್ಲಿ ಸ್ಥಾನ ಪಡೆದಿದ್ದಾರೆ. ಈ ಎಲ್ಲ ದೇಶಗಳಿಗೆ ಜಪಾನ್ ಸರ್ಕಾರ ಮಾರ್ಗಸೂಚಿಗಳನ್ನು ರೂಪಿಸಿದೆ.

ಈ ಕುರಿತು ಐಒಎ ಅಧ್ಯಕ್ಷ ನರಿಂದರ್ ಬಾತ್ರಾ ಮತ್ತು ಪ್ರಧಾನ ಕಾರ್ಯದರ್ಶಿ ರಾಜೀವ್ ಮೆಹ್ತಾ ಅವರು ಜಂಟಿ ಹೇಳಿಕೆ ಪ್ರಕಟಿಸಿದ್ದಾರೆ.

‘ಸ್ಪರ್ಧೆಗಳು ಆರಂಭವಾಗುವ ಐದು ದಿನಗಳ ಮೊದಲು ಅಥ್ಲೀಟ್‌ಗಳಿಗೆ ಕ್ರೀಡಾ ಗ್ರಾಮ ಪ್ರವೇಶಿಸಲು ಅನುಮತಿ ನೀಡಲಾಗಿದೆ. ಈಗ ಮೂರು ದಿನಗಳು ವ್ಯರ್ಥವಾಗುತ್ತವೆ. ಕ್ರೀಡಾಪಟುಗಳು ಸಜ್ಜುಗೊಳ್ಳಲು ಇದು ಸೂಕ್ತ ಸಮಯವಾಗಿತ್ತು. ಈ ನಿಯಮಗಳಿಂದ ಭಾರತದ ಕ್ರೀಡಾಪಟುಗಳಿಗೆ ಹೆಚ್ಚು ಅನ್ಯಾಯವಾಗಿದೆ‘ ಎಂದು ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ.

‘ಈ ಮೂರು ದಿನಗಳಲ್ಲಿ ಕ್ರೀಡಾಪಟುಗಳು ತಮ್ಮ ತಿಂಡಿ, ಭೋಜನ ಮತ್ತಿತರ ಅಗತ್ಯತೆಗಳನ್ನು ಎಲ್ಲಿ ಮತ್ತು ಯಾವಾಗ ಪಡೆಯುತ್ತಾರೆ. ಏಕೆಂದರೆ ಪ್ರತಿಯೊಬ್ಬರಿಗೂ ಕ್ರೀಡಾ ಗ್ರಾಮದ ಭೋಜನ ಆವರಣದಲ್ಲಿ ಊಟ ದೊರೆಯುತ್ತದೆ. ಅಲ್ಲಿ ಎಲ್ಲಾ ಕ್ರೀಡಾಪಟುಗಳು ಮತ್ತು ಇತರ ಅಧಿಕಾರಿಗಳು ಯಾವಾಗಲೂ ಇರುತ್ತಾರೆಯೇ? ಎಂದು ಹೇಳಿಕೆಯಲ್ಲಿ ಪ್ರಶ್ನಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.