ADVERTISEMENT

ದೇಶ ಸೇವೆಗೆ ಸೈ ಎಂದ ಜಿತು ರಾಯ್‌

ಪಿಟಿಐ
Published 12 ಜುಲೈ 2020, 11:19 IST
Last Updated 12 ಜುಲೈ 2020, 11:19 IST
ಜಿತು ರಾಯ್‌ 
ಜಿತು ರಾಯ್‌    

ನವದೆಹಲಿ: ಪ್ರತಿಷ್ಠಿತ ಪದ್ಮಶ್ರೀ ಹಾಗೂ ರಾಜೀವ್‌ ಗಾಂಧಿ ಖೇಲ್ ರತ್ನ ಪ್ರಶಸ್ತಿ ಪುರಷ್ಕೃತರಾಗಿರುವ ಶೂಟರ್‌ ಜಿತು ರಾಯ್‌ ಅವರು ಕೊರೊನಾ ಬಿಕ್ಕಟ್ಟಿನಿಂದಾಗಿ ಸಿಕ್ಕಿರುವ ಬಿಡುವಿನಲ್ಲಿ ದೇಶ ಸೇವೆ ಮಾಡುತ್ತಿದ್ದಾರೆ.

ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಜಿತು ಅವರಿಗೆ ಸುಬೇದಾರ್‌ ಮೇಜರ್‌ ಹುದ್ದೆಗೆ ಬಡ್ತಿ ನೀಡಲಾಗಿದೆ.

11 ಗೂರ್ಖಾ ರೈಫಲ್‌ ರೆಜಿಮೆಂಟ್‌ನಲ್ಲಿರುವ ಅವರು ಮಣಿಪುರದಲ್ಲಿ ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದಾರೆ.

ADVERTISEMENT

‘ಈಶಾನ್ಯ ಭಾಗದಲ್ಲಿ ಈಗ ಪರಿಸ್ಥಿತಿ ಬಿಗಡಾಯಿಸಿದೆ. ಇಂತಹ ಸಮಯದಲ್ಲಿ ಗಡಿ ಕಾಯುವುದು ನಮ್ಮ ಕರ್ತವ್ಯ. ದೇಶ ಸೇವೆ ಮಾಡುವ ಅವಕಾಶ ಎಲ್ಲರಿಗೂ ಸಿಗುವುದಿಲ್ಲ. ನನಗೆ ಆ ಸೌಭಾಗ್ಯ ಸಿಕ್ಕಿದೆ. ಇದು ಬಹುದೊಡ್ಡ ಗೌರವ’ ಎಂದು ಅವರು ತಿಳಿಸಿದ್ದಾರೆ.

‘ಭಾರತ ಮತ್ತು ಚೀನಾ ಗಡಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇನೆ. ಅವಶ್ಯ ಬಿದ್ದರೆ ಅಲ್ಲಿಗೂ ಹೋಗಿ ಕೆಲಸ ಮಾಡಲು ಸಿದ್ಧನಿದ್ದೇನೆ. ಸುಬೇದಾರ್‌ ಮೇಜರ್‌ ಆದವರು ಎಂತಹುದೇ ಪರಿಸ್ಥಿತಿಯಲ್ಲೂ ಎದೆಗುಂದದೆ ತಮ್ಮ ಬೆಟಾಲಿಯನ್‌ ಅನ್ನು ಮುನ್ನಡೆಸಬೇಕು. ಆ ಕೆಲಸವನ್ನು ನಾನು ನಿಷ್ಠೆಯಿಂದ ಮಾಡುತ್ತೇನೆ’ ಎಂದು 33 ವರ್ಷ ವಯಸ್ಸಿನ ಶೂಟರ್‌ ತಿಳಿಸಿದ್ದಾರೆ.

‘ಮಣಿಪುರಕ್ಕೆ ಬರುವ ಮುನ್ನ ಇಂದೋರ್‌ನಲ್ಲಿ ಕೆಲಸ ಮಾಡುತ್ತಿದ್ದೆ. ಪತ್ನಿ ಮತ್ತು 14 ತಿಂಗಳ ಮಗನೊಂದಿಗೆ ಅಲ್ಲೇ ವಾಸವಿದ್ದೆ. ಈಗ ಅವರಿಂದ ದೂರವಿರುವುದು ಅನಿವಾರ್ಯ. ದೇಶಕ್ಕಿಂತಲೂ ಕುಟುಂಬ ದೊಡ್ಡದಲ್ಲ. ದೂರವಾಣಿ ಕರೆ ಮಾಡಿ ಆಗಾಗ ಅವರೊಂದಿಗೆ ಮಾತನಾಡುತ್ತಿರುತ್ತೇನೆ. ರಜೆ ಸಿಕ್ಕಾಗ ಹೋಗಿ ಅವರೊಂದಿಗೆ ಕಾಲ ಕಳೆಯುತ್ತೇನೆ’ ಎಂದಿದ್ದಾರೆ.

‘ಈ ಹಿಂದೆ ಅನೇಕ ಬಾರಿ ಈಶಾನ್ಯ ರಾಜ್ಯಗಳಿಗೆ ಭೇಟಿ ನೀಡಿದ್ದೇನೆ. ಈ ಭಾಗದಲ್ಲಿ ಕೆಲಸ ಮಾಡುವುದಕ್ಕೆ ಖುಷಿಯಾಗುತ್ತದೆ. ಇತ್ತೀಚಿನ ವರ್ಷಗಳಲ್ಲಿ ಶೂಟಿಂಗ್‌ನಲ್ಲಿ ನನ್ನಿಂದ ನಿರೀಕ್ಷಿತ ಸಾಮರ್ಥ್ಯ ಮೂಡಿಬಂದಿಲ್ಲ. ಹಾಗಂತ ವಿಶ್ವಾಸ ಕಳೆದುಕೊಂಡಿಲ್ಲ. ಏರ್‌ ಪಿಸ್ತೂಲ್‌ನ ರಾಷ್ಟ್ರೀಯ ರ‍್ಯಾಂಕಿಂಗ್‌ ಪಟ್ಟಿಯಲ್ಲಿ ಈಗಲೂ ನನ್ನ ಹೆಸರಿದೆ. ಸಮಯ ಸಿಕ್ಕಾಗಲೆಲ್ಲಾ ಕರ್ತವ್ಯದ ನಡುವೆಯೂ ಅಭ್ಯಾಸ ನಡೆಸುತ್ತಿದ್ದೇನೆ. ಮತ್ತೆ ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ಪದಕ ಗೆಲ್ಲುತ್ತೇನೆ. ಟೋಕಿಯೊ ಒಲಿಂಪಿಕ್ಸ್‌ಗೂ ಅರ್ಹತೆ ಗಳಿಸುತ್ತೇನೆ’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

2006ರಲ್ಲಿ ಸೇನೆಗೆ ಸೇರಿದ್ದ ಜಿತು ವಿಶ್ವಕಪ್, ವಿಶ್ವ ಚಾಂಪಿಯನ್‌ಷಿಪ್‌, ಏಷ್ಯನ್‌ ಹಾಗೂ ಕಾಮನ್‌ವೆಲ್ತ್‌ ಕ್ರೀಡಾಕೂಟ ಸೇರಿದಂತೆ ಅನೇಕ ಚಾಂಪಿಯನ್‌ಷಿಪ್‌ಗಳಲ್ಲಿ ಪದಕಗಳನ್ನು ಗೆದ್ದಿದ್ದಾರೆ. 2016ರ ರಿಯೊ ಒಲಿಂಪಿಕ್ಸ್‌ನ 10 ಮೀಟರ್ಸ್‌ ಏರ್‌ ಪಿಸ್ತೂಲ್‌ ವಿಭಾಗದಲ್ಲಿ ಅವರು ಫೈನಲ್‌ ಪ್ರವೇಶಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.