ADVERTISEMENT

ಸೈನಾ, ಸಿಂಧು, ಶ್ರೀಕಾಂತ್‌ಗೆ ಸ್ಥಾನ

ಸುದೀರ್‌ಮನ್‌ ಕಪ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ಗೆ ಭಾರತ ತಂಡ

ಪಿಟಿಐ
Published 30 ಏಪ್ರಿಲ್ 2019, 16:10 IST
Last Updated 30 ಏಪ್ರಿಲ್ 2019, 16:10 IST
ಸೈನಾ ನೆಹ್ವಾಲ್‌
ಸೈನಾ ನೆಹ್ವಾಲ್‌   

ನವದೆಹಲಿ: ಸೈನಾ ನೆಹ್ವಾಲ್‌, ಪಿ.ವಿ.ಸಿಂಧು ಮತ್ತು ಕಿದಂಬಿ ಶ್ರೀಕಾಂತ್‌ ಅವರು ಮುಂಬರುವ ಸುದೀರ್‌ಮನ್‌ ಕಪ್‌ ಮಿಶ್ರ ತಂಡ ಬ್ಯಾಡ್ಮಿಂಟನ್‌ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಸವಾಲು ಎತ್ತಿಹಿಡಿಯಲಿದ್ದಾರೆ.

ಭಾರತ ಬ್ಯಾಡ್ಮಿಂಟನ್‌ ಸಂಸ್ಥೆಯು (ಬಿಎಐ) ಮಂಗಳವಾರ 13 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಸುದೀರ್‌ಮನ್‌ ಕಪ್‌ ಮೇ 19ರಿಂದ 26ರವರೆಗೆ ಚೀನಾದ ನ್ಯಾನಿಂಗ್‌ನಲ್ಲಿ ನಿಗದಿಯಾಗಿದೆ.

ADVERTISEMENT

ಸಿಂಧು, ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ನಾಲ್ಕು ಪದಕಗಳನ್ನು ಗೆದ್ದಿದ್ದಾರೆ. ರಿಯೊ ಒಲಿಂಪಿಕ್ಸ್‌ನಲ್ಲಿ ಬೆಳ್ಳಿಯ ಪದಕ ಜಯಿಸಿದ ಹಿರಿಮೆಯನ್ನೂ ಹೊಂದಿದ್ದಾರೆ. ಸೈನಾ ಅವರು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸಾಧನೆ ಮಾಡಿದ್ದರು.

ಶ್ರೀಕಾಂತ್‌ ಅವರು ವಿಶ್ವ ಕ್ರಮಾಂಕ ಪಟ್ಟಿಯಲ್ಲಿ ಪ್ರಸ್ತುತ ಎಂಟನೇ ಸ್ಥಾನ ಹೊಂದಿದ್ದಾರೆ.

ಭಾರತ ತಂಡವು ಈ ಬಾರಿಯ ಚಾಂಪಿಯನ್‌ಷಿಪ್‌ನಲ್ಲಿ ಎಂಟನೇ ಶ್ರೇಯಾಂಕ ಹೊಂದಿದ್ದು, ‘ಡಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಆತಿಥೇಯ ಚೀನಾ ಮತ್ತು ಮಲೇಷ್ಯಾ ತಂಡಗಳೂ ಇದೇ ಗುಂಪಿನಲ್ಲಿವೆ. ಹೀಗಾಗಿ ಭಾರತದ ನಾಕೌಟ್‌ ಹಾದಿ ಕಠಿಣ ಎನಿಸಿದೆ.

ನಾಕೌಟ್‌ ಪ್ರವೇಶಿಸಬೇಕಾದರೆ ತಂಡವು ಗುಂಪಿನಲ್ಲಿ ಅಗ್ರ ಎರಡರೊಳಗೆ ಸ್ಥಾನ ಗಳಿಸಬೇಕು. ಭಾರತವು ಕಾಮನ್‌ವೆಲ್ತ್‌ ಕ್ರೀಡಾಕೂಟದ ಮಿಶ್ರ ತಂಡ ವಿಭಾಗದ ಫೈನಲ್‌ನಲ್ಲಿ ಮಲೇಷ್ಯಾವನ್ನು ಮಣಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತ್ತು. ಮಲೇಷ್ಯಾದ ಸಿಂಗಲ್ಸ್‌ ವಿಭಾಗದ ಪ್ರಮುಖ ಆಟಗಾರ ಲೀ ಚೊಂಗ್‌ ವೀ ಈ ಸಲದ ಚಾಂಪಿಯನ್‌ಷಿಪ್‌ನಲ್ಲಿ ಆಡುತ್ತಿಲ್ಲ. ಇದು ಭಾರತಕ್ಕೆ ವರವಾಗಿ ಪರಿಣಮಿಸುವ ಸಾಧ್ಯತೆ ಇದೆ.

ತಂಡ ಇಂತಿದೆ: ಪುರುಷರು: ಕಿದಂಬಿ ಶ್ರೀಕಾಂತ್‌, ಸಮೀರ್‌ ವರ್ಮಾ, ಸಾತ್ವಿಕ್‌ ಸಾಯಿರಾಜ್‌ ರಣಕಿರೆಡ್ಡಿ, ಚಿರಾಗ್‌ ಶೆಟ್ಟಿ, ಮನು ಅತ್ರಿ, ಬಿ.ಸುಮೀತ್‌ ರೆಡ್ಡಿ ಮತ್ತು ಪ್ರಣವ್‌ ಜೆರಿ ಚೋಪ್ರಾ.

ಮಹಿಳೆಯರು: ಪಿ.ವಿ.ಸಿಂಧು, ಸೈನಾ ನೆಹ್ವಾಲ್‌, ಅಶ್ವಿನಿ ಪೊನ್ನಪ್ಪ, ಎನ್‌.ಸಿಕ್ಕಿ ರೆಡ್ಡಿ, ಪೂರ್ವಿಶಾ ಎಸ್‌.ರಾಮ್‌ ಮತ್ತು ಜೆ.ಮೇಘನಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.