ನವದೆಹಲಿ: ಎರಡು ಬಾರಿಯ ಒಲಿಂಪಿಕ್ ಪದಕ ವಿಜೇತೆ ಪಿ.ವಿ.ಸಿಂಧು ಹಾಗೂ ವಿಶ್ವದ 9ನೇ ಕ್ರಮಾಂಕದ ಆಟಗಾರ ಎಚ್.ಎಸ್. ಪ್ರಣಯ್ ಅವರು ಸುದೀರ್‌ಮನ್ ಕಪ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಚೀನಾದ ಸುಜೊನಲ್ಲಿ ಮೇ 14ರಿಂದ 21ರವರೆಗೆ ಟೂರ್ನಿ ನಡೆಯಲಿದೆ.
ಸುದೀರ್‌ಮನ್ ಕಪ್ ಮಿಶ್ರ ತಂಡ ಚಾಂಪಿಯನ್‌ಷಿಪ್ ಆಗಿದ್ದು, ಮೊದಲ ಬಾರಿ ಚಿನ್ನದ ಪದಕ ಗೆಲ್ಲುವ ಗುರಿಯಿಟ್ಟುಕೊಂಡು ರಾಷ್ಟ್ರೀಯ ಆಯ್ಕೆ ಸಮಿತಿಯು ‘ಸಮತೋಲಿತ ತಂಡ’ವನ್ನು ಆಯ್ಕೆ ಮಾಡಿದೆ.
ಭಾರತ ತಂಡವು ಕಳೆದ ವರ್ಷ ಪ್ರತಿಷ್ಠಿತ ಥಾಮಸ್ ಕಪ್ ಟೂರ್ನಿಯಲ್ಲಿ ಪ್ರಶಸ್ತಿ ಜಯಿಸಿತ್ತು. ಈ ವರ್ಷದ ಆರಂಭದಲ್ಲಿ ಏಷ್ಯನ್ ಮಿಶ್ರ ತಂಡ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ತನ್ನದಾಗಿಸಿಕೊಂಡಿತ್ತು. ಅದೇ ರೀತಿಯ ಸಾಮರ್ಥ್ಯ ತೋರುವ ವಿಶ್ವಾಸ ಹೊಂದಿದೆ.
ಸುಧೀರ್‌ಮನ್ ಕಪ್ ಟೂರ್ನಿಯಲ್ಲಿ ಭಾರತ ತಂಡವು ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಚೀನಾ ತೈಪೆ, ಆಸ್ಟ್ರೇಲಿಯಾ ಮತ್ತು ಮಲೇಷ್ಯಾ ತಂಡಗಳು ಇದೇ ಗುಂಪಿನಲ್ಲಿವೆ.
ಭಾರತ ತಂಡ: ಪುರುಷರ ಸಿಂಗಲ್ಸ್: ಎಚ್.ಎಸ್. ಪ್ರಣಯ್, ಕಿದಂಬಿ ಶ್ರೀಕಾಂತ್ (ಕಾಯ್ದಿರಿಸಿದ ಆಟಗಾರ: ಲಕ್ಷ್ಯ ಸೇನ್). ಮಹಿಳಾ ಸಿಂಗಲ್ಸ್: ಪಿ.ವಿ.ಸಿಂಧು, ಅನುಪಮಾ ಉಪಾಧ್ಯಾಯ (ಕಾಯ್ದಿರಿಸಿದ ಆಟಗಾರ್ತಿ: ಆಕರ್ಷಿ ಕಶ್ಯಪ್). ಪುರುಷರ ಡಬಲ್ಸ್: ಸಾತ್ವಿಕ್ ಸಾಯಿರಾಜ್ ರಣಕಿರೆಡ್ಡಿ–ಚಿರಾಗ್ ಶೆಟ್ಟಿ, ಎಂ.ಆರ್.ಅರ್ಜುನ್–ಧ್ರುವ ಕಪಿಲ. ಮಹಿಳಾ ಡಬಲ್ಸ್: ಗಾಯತ್ರಿ ಗೋಪಿಚಂದ್–ತ್ರಿಶಾ ಜೋಲಿ, ಅಶ್ವಿನಿ ಪೊನ್ನಪ್ಪ–ತನಿಶಾ ಕ್ರಾಸ್ತೊ. ಮಿಶ್ರ ಡಬಲ್ಸ್: ತನಿಶಾ–ಸಾಯಿ ಪ್ರತೀಕ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.