ADVERTISEMENT

ಸುಲ್ತಾನ್ ಆಫ್ ಜೋಹರ್ ಕಪ್ ಹಾಕಿ: ಭಾರತದ ಗೆಲುವಿನ ಓಟ ಮುಂದುವರಿಕೆ

ಪಿಟಿಐ
Published 12 ಅಕ್ಟೋಬರ್ 2025, 13:23 IST
Last Updated 12 ಅಕ್ಟೋಬರ್ 2025, 13:23 IST
ಅರ್ಷದೀಪ್ ಸಿಂಗ್ 
ಅರ್ಷದೀಪ್ ಸಿಂಗ್    

ಜೊಹೊರ್, ಮಲೇಷ್ಯಾ: ಭಾರತ ಜೂನಿಯರ್ ಪುರುಷರ ಹಾಕಿ ತಂಡವು ಸುಲ್ತಾನ್ ಆಫ್ ಜೊಹರ್ ಕಪ್ ಟೂರ್ನಿಯಲ್ಲಿ ಗೆಲುವಿನ ಓಟವನ್ನು ಮುಂದುವರಿಸಿತು. 

ಭಾನುವಾರ  ಇಲ್ಲಿ ನಡೆದ ಪಂದ್ಯದಲ್ಲಿ ಭಾರತ ತಂಡವು 4–2ರಿಂದ ನ್ಯೂಜಿಲೆಂಡ್ ಎದುರು ಗೆದ್ದಿತು.

ಭಾರತದ ಅರ್ಷದೀಪ್ ಸಿಂಗ್ (2ನೇ ನಿಮಿಷ), ಪಿ.ಬಿ. ಸುನಿಲ್ (15ನಿ), ಅರೈಜೀತ್ ಸಿಂಗ್ ಹುಂಡಾಲ್ (25ನಿ)ಮತ್ತು ರೋಶನ್ ಕುಮಾರ್ (47ನಿ) ಅವರು ಗೋಲು ಗಳಿಸಿದರು. ಇದರಿಂದಾಗಿ ತಂಡವು ಗೆಲುವಿನತ್ತ ಸಾಗಿತು. 

ADVERTISEMENT

ಕಿವೀಸ್ ತಂಡದ ಗಸ್ ನೆಲ್ಸನ್ (41ನೇ ನಿ) ಮತ್ತು ಏಡನ್ ಮ್ಯಾಕ್ಸ್‌ (52ನಿ) ಗೋಲು ಗಳಿಸಿದರು. 

ಭಾರತ ತಂಡವು ತನ್ನ ಮೊದಲ ಪಂದ್ಯದಲ್ಲಿ 3–2ರಿಂದ ಗ್ರೇಟ್ ಬ್ರಿಟನ್ ವಿರುದ್ಧ ಜಯಿಸಿತ್ತು. 

ಈ ಪಂದ್ಯದಲ್ಲಿ ಭಾರತದ ಆಟಗಾರರು ಆರಂಭದಿಂದಲೇ ಆಕ್ರಮಣಶೀಲ ಆಟವಾಡಿದರು.  ಎರಡನೇ ನಿಮಿಷದಲ್ಲಿಯೇ ಅರ್ಷದೀಪ್ ಅವರು ಸರಾಗವಾಗಿ ಗೋಲು ಗಳಿಸಿದರು. ನ್ಯೂಜಿಲೆಂಡ್ ತಂಡದ ರಕ್ಷಣಾ ವಿಭಾಗವು ಈ ಸಂದರ್ಭದಲ್ಲಿ ಚುರುಕುತನ ತೋರಲಿಲ್ಲ. ಅದರ ಲಾಭ ಪಡೆದ ಅರ್ಷದೀಪ್ ಚುರುಕಾಗಿ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು.

ಮೊದಲ ಕ್ವಾರ್ಟರ್‌ನ ಕೊನೆಯ ಕ್ಷಣದಲ್ಲಿ ಸುನಿಲ್ ಅವರು ಪೆನಾಲ್ಟಿ ಕಾರ್ನರ್‌ನಲ್ಲಿ ಗೋಲು ಹೊಡೆದರು. ಡ್ರ್ಯಾಗ್‌ಫ್ಲಿಕರ್ ಸುನೀಲ್ ಅವರು ನಾಯಕ ರೋಹಿತ್ ಪಾಸ್ ಕೊಟ್ಟ ಚೆಂಡನ್ನು ಗೋಲುಪೆಟ್ಟಿಗೆ ಸೇರಿಸಿದರು. ಇದಕ್ಕೂ ಮುನ್ನ ಮೂರು ಪೆನಾಲ್ಟಿ ಕಾರ್ನರ್‌ಗಳಲ್ಲಿ ಗೋಲು ಹೊಡೆಯಲು ಭಾರತದ ಆಟಗಾರರಿಗೆ ಸಾಧ್ಯವಾಗಿರಲಿಲ್ಲ. 

2–0 ಮುನ್ನಡೆಯೊಂದಿಗೆ ಎರಡನೇ ಕ್ವಾರ್ಟರ್‌ನಲ್ಲಿ ತಂಡವು ಕಣಕ್ಕಿಳಿಯಿತು. ಆಟಗಾರರು ಹಲವು ಬಾರಿ ಎದುರಾಳಿ ಗೋಲ್‌ ವೃತ್ತಕ್ಕೆ ಲಗ್ಗೆ ಹಾಕುವಲ್ಲಿ ಯಶಸ್ವಿಯಾದರು. ಅರೈಜಿತ್ ಹುಂಡಾಲ್ ಕಡೆಗೂ ಅವಕಾಶ ಗಿಟ್ಟಿಸಿದರು. ನಿಖರವಾದ ಶಾಟ್ ಪ್ರಯೋಗಿಸಿದ ಅವರು ತಂಡದ ಮುನ್ನಡೆಯನ್ನು 3–0ಗೆ ಹೆಚ್ಚಿಸಿದರು. 

ಮೂರನೇ ಕ್ವಾರ್ಟರ್‌ನಲ್ಲಿ ಕಿವೀಸ್ ತಂಡವು ಕಡೆಗೂ ಗೋಲು ಗಳಿಸುವಲ್ಲಿ ಸಫಲವಾಯಿತು. 41ನೇ ನಿಮಿಷದಲ್ಲಿ ನೆಲ್ಸನ್ ಗೋಲು ಹೊಡೆದರು. ಆದರೆ ಅವರ ಸಂತಸ ಕೆಲವೇ ನಿಮಿಷಗಳ ಕಾಲ ಇತ್ತು. ಏಕೆಂದರೆ ಆರು ನಿಮಿಷಗಳ ನಂತರ ಭಾರತದ ರೋಶನ್ ಕುಮಾರ್ ಅವರು ಪೆನಾಲ್ಟಿ ಕಾರ್ನರ್‌ ಅವಕಾಶದಲ್ಲಿ ಗೋಲು ಗಳಿಸಿದರು. ಇದರಿಂದಾಗಿ ತಂಡವು 4–1ರ ಮುನ್ನಡೆ ಸಾಧಿಸಿತು. 

ಕೊನೆಯ ಕ್ವಾರ್ಟರ್‌ನಲ್ಲಿ ನ್ಯೂಜಿಲೆಂಡ್ ಬಹಳಷ್ಟು ಪ್ರಯತ್ನಗಳನ್ನು ಮಾಡಿತು. ಪಂದ್ಯದಲ್ಲಿ ಕೊನೆಯ ಕೆಲವು ನಿಮಿಷಗಳು ಬಾಕಿ ಇದ್ದಾಗ ಏಡನ್ ಮ್ಯಾಕ್ಸ್ ಗೋಲು ಹೊಡೆಯುವಲ್ಲಿ ಸಫಲರಾದರು. 

ಭಾರತ ತಂಡವು ಮಂಗಳವಾರ ಪಾಕಿಸ್ತಾನ ಎದುರು ಆಡಲಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.