ADVERTISEMENT

ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ: ಜಯದ ಅವಕಾಶ ಕೈಚೆಲ್ಲಿದ ಭಾರತ

ದಕ್ಷಿಣ ಕೊರಿಯಾ ಎದುರಿನ ಪಂದ್ಯ ಡ್ರಾ

ಪಿಟಿಐ
Published 24 ಮಾರ್ಚ್ 2019, 19:47 IST
Last Updated 24 ಮಾರ್ಚ್ 2019, 19:47 IST
ಗೋಲು ಗಳಿಸಿದ ನಂತರ ಭಾರತ ತಂಡದ ಆಟಗಾರರು ಸಂಭ್ರಮಿಸಿದರು –ಪಿಟಿಐ ಚಿತ್ರ
ಗೋಲು ಗಳಿಸಿದ ನಂತರ ಭಾರತ ತಂಡದ ಆಟಗಾರರು ಸಂಭ್ರಮಿಸಿದರು –ಪಿಟಿಐ ಚಿತ್ರ   

ಇಫೊ, ಮಲೇಷ್ಯಾ: ಅಂತಿಮ ನಿಮಿಷದಲ್ಲಿ ಎದುರಾಳಿಗಳಿಗೆ ಗೋಲು ಬಿಟ್ಟುಕೊಟ್ಟ ಭಾರತ ತಂಡದವರು ಸುಲ್ತಾನ್‌ ಅಜ್ಲಾನ್‌ ಶಾ ಕಪ್‌ ಹಾಕಿ ಟೂರ್ನಿಯಲ್ಲಿ ಸತತ ಎರಡನೇ ಪಂದ್ಯದಲ್ಲಿ ಗೆಲ್ಲುವ ಅವಕಾಶ ಕೈಚೆಲ್ಲಿದ್ದಾರೆ.

ಭಾನುವಾರ ನಡೆದ ದಕ್ಷಿಣ ಕೊರಿಯಾ ವಿರುದ್ಧದ ಹಣಾಹಣಿಯಲ್ಲಿ ಮನಪ್ರೀತ್‌ ಸಿಂಗ್‌ ಬಳಗ 1–1 ಗೋಲುಗಳಿಂದ ಡ್ರಾ ಮಾಡಿಕೊಂಡಿತು.

ಶನಿವಾರದ ಹೋರಾಟದಲ್ಲಿ ಜಪಾನ್‌ ಎದುರು 2–0 ಗೋಲುಗಳಿಂದ ಗೆದ್ದು ವಿಶ್ವಾಸದಿಂದ ಬೀಗುತ್ತಿದ್ದ ಭಾರತ, ದಕ್ಷಿಣ ಕೊರಿಯಾ ವಿರುದ್ಧ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು.

ADVERTISEMENT

ಮಿಡ್‌ಫೀಲ್ಡರ್‌ ವಿವೇಕ್‌ ಸಾಗರ್‌ ಪ್ರಸಾದ್‌, ಮೊದಲ ನಿಮಿಷದಲ್ಲೇ ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿ ಭರವಸೆ ಮೂಡಿಸಿದ್ದರು. ಆದರೆ ದಕ್ಷಿಣ ಕೊರಿಯಾ ತಂಡದ ರಕ್ಷಣಾ ವಿಭಾಗದ ಆಟಗಾರರು ವಿವೇಕ್‌ ಅವರ ಗೋಲು ಗಳಿಸುವ ಪ್ರಯತ್ನಕ್ಕೆ ಅಡ್ಡಿಯಾದರು.

ಇದರ ಬೆನ್ನಲ್ಲೇ ದಕ್ಷಿಣ ಕೊರಿಯಾದ ಆಟಗಾರ ಚೆಂಡಿನೊಂದಿಗೆ ಭಾರತದ ರಕ್ಷಣಾ ಕೋಟೆ ಭೇದಿಸಿ ಒಳನುಗ್ಗಿದ್ದಾಗ ಆತಂಕ ಮನೆಮಾಡಿತ್ತು. ಆದರೆ ಡಿಫೆಂಡರ್‌ ಸುರೇಂದರ್‌ ಕುಮಾರ್‌ ಎದುರಾಳಿ ಆಟಗಾರ ಪ್ರಯತ್ನವನ್ನು ವಿಫಲಗೊಳಿಸಿದರು.

ನಂತರ ಆಟದ ವೇಗ ಹೆಚ್ಚಿಸಿಕೊಂಡ ಮನಪ್ರೀತ್‌ ಬಳಗಕ್ಕೆ ಗೋಲು ಗಳಿಸುವ ಎರಡು ಅವಕಾಶಗಳು ಲಭ್ಯವಾಗಿದ್ದವು. ಭಾರತದ ಆಟಗಾರರು ಇವುಗಳನ್ನು ಸದುಪಯೋಗಪಡಿಸಿಕೊಳ್ಳಲಿಲ್ಲ.

ಹತ್ತನೇ ನಿಮಿಷದಲ್ಲಿ ಭಾರತಕ್ಕೆ ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ಮನದೀಪ್‌ ಸಿಂಗ್‌ ಕೈಚೆಲ್ಲಿದರು. ಎರಡನೇ ಕ್ವಾರ್ಟರ್‌ನಲ್ಲಿ ಸಿಕ್ಕ ಪೆನಾಲ್ಟಿ ಕಾರ್ನರ್‌ ಅವಕಾಶವನ್ನೂ ಭಾರತದ ಆಟಗಾರರು ಹಾಳು ಮಾಡಿದರು.

ಮೂರನೇ ಕ್ವಾರ್ಟರ್‌ನಲ್ಲಿ ಕೊರಿಯಾ ತಂಡ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಈ ತಂಡದ ಕಿಮ್‌ ಹೈಯೊಂಜಿನ್‌, ಜಿಹುನ್‌ ಯಾಂಗ್‌ ಮತ್ತು ಲೀ ನಮ್‌ಯೊಂಗ್‌ ಅವರು ಒರಟು ಆಟ ಆಡಿದ್ದರಿಂದ ಪಂದ್ಯದ ರೆಫರಿ ಮೂವರನ್ನೂ ಅಂಗಳದಿಂದ ಹೊರ ಕಳುಹಿಸಿದರು. ಹೀಗಾಗಿ ಕೊರಿಯಾ ಕೇವಲ ಎಂಟು ಮಂದಿಯೊಂದಿಗೆ ಆಡುವ ಅನಿವಾರ್ಯತೆಗೆ ಸಿಲುಕಿತು.

ಈ ಅವಕಾಶವನ್ನು ಭಾರತದ ಆಟಗಾರರು ಸದುಪಯೋಗಪಡಿಸಿಕೊಂಡರು. 28ನೇ ನಿಮಿಷದಲ್ಲಿ ಮನದೀಪ್‌ ಸಿಂಗ್‌ ಕೈಚಳಕ ತೋರಿದರು. ಚೆಂಡಿನೊಂದಿಗೆ ಎದುರಾಳಿ ಆವರಣ ಪ್ರವೇಶಿಸಿದ ಅವರು ಅದನ್ನು ಕಣ್ಣೆವೆ ಮುಚ್ಚಿ ತೆರೆಯುವುದರೊಳಗೆ ಗುರಿ ಸೇರಿಸಿ ಸಂಭ್ರಮಿಸಿದರು.

ನಾಲ್ಕನೇ ಕ್ವಾರ್ಟರ್‌ನ ಶುರುವಿನಲ್ಲಿ ಕೊರಿಯಾ ತಂಡಕ್ಕೆ ಪೆನಾಲ್ಟಿ ಕಾರ್ನರ್‌ ಲಭ್ಯವಾಗಿತ್ತು. ಈ ಅವಕಾಶದಲ್ಲಿ ಎದುರಾಳಿ ಆಟಗಾರ ಬಾರಿಸಿದ ಚೆಂಡನ್ನು ಭಾರತದ ಅಮಿತ್‌ ರೋಹಿದಾಸ್‌ ತಡೆದರು. ನಂತರ ಧಾರಾಕಾರ ಮಳೆ ಸುರಿಯಿತು. ಹೀಗಾಗಿ ಕೆಲ ಸಮಯ ಪಂದ್ಯವನ್ನು ಸ್ಥಗಿತಗೊಳಿಸಲಾಯಿತು.

ಮಳೆ ನಿಂತ ನಂತರ ಮತ್ತೆ ಆಟ ಶುರುವಾಯಿತು. ಪಂದ್ಯ ಮುಗಿಯಲು 53 ಸೆಕೆಂಡುಗಳು ಬಾಕಿ ಇದ್ದಾಗ ಕೊರಿಯಾಕ್ಕೆ ಪೆನಾಲ್ಟಿ ಕಾರ್ನರ್‌ ಲಭಿಸಿತು. ಜಾಂಗ್‌ಹ್ಯೂನ್‌ ಜಾಂಗ್‌ ಅವರ ಡ್ರ್ಯಾಗ್‌ಫ್ಲಿಕ್‌ ಅವಕಾಶವನ್ನು ಭಾರತದ ಗೋಲ್‌ಕೀಪರ್‌ ಪಿ.ಆರ್‌.ಶ್ರೀಜೇಶ್‌ ವಿಫಲಗೊಳಿಸಿದರು. ಇದರ ಬೆನ್ನಲ್ಲೇ ಕೊರಿಯಾಕ್ಕೆ ಮತ್ತೊಂದು ಪೆನಾಲ್ಟಿ ಕಾರ್ನರ್‌ ಸಿಕ್ಕಿತ್ತು. ಈ ಅವಕಾಶವನ್ನು ಗೋಲಾಗಿ ಪರಿವರ್ತಿಸಿದ ಜಾಂಗ್‌, ಕೊರಿಯಾ ತಂಡವನ್ನು ಸೋಲಿನಿಂದ ಪಾರು ಮಾಡಿದರು.

ಮಾರ್ಚ್‌ 26ರಂದು ನಡೆಯುವ ತನ್ನ ಮೂರನೇ ಪಂದ್ಯದಲ್ಲಿ ಮನಪ್ರೀತ್‌ ಸಿಂಗ್‌ ಬಳಗ, ಮಲೇಷ್ಯಾ ಎದುರು ಸೆಣಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.