ADVERTISEMENT

ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ಗೆ ಆದಿಲ್‌ ಅಧ್ಯಕ್ಷ

ಸುಮರಿವಾಲಾಗೆ ಮೂರನೇ ಬಾರಿ ಗದ್ದುಗೆ; ಅಂಜು ಬಾಬಿ ಜಾರ್ಜ್‌ ಹಿರಿಯ ಉಪಾಧ್ಯಕ್ಷೆ

ಪಿಟಿಐ
Published 31 ಅಕ್ಟೋಬರ್ 2020, 13:39 IST
Last Updated 31 ಅಕ್ಟೋಬರ್ 2020, 13:39 IST
ಅಂಜು ಬಾಬಿ ಜಾರ್ಜ್‌
ಅಂಜು ಬಾಬಿ ಜಾರ್ಜ್‌   

ಗುರುಗ್ರಾಮ: ಭಾರತ ಅಥ್ಲೆಟಿಕ್ಸ್ ಫೆಡರೇಷನ್‌ನ (ಎಎಫ್‌ಐ) ಅಧ್ಯಕ್ಷರಾಗಿ ಆದಿಲ್‌ ಸುಮರಿವಾಲಾ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.ಸತತ ಮೂರನೇ ಬಾರಿ ಅವರು ಈ ಹುದ್ದೆ ನಿಭಾಯಿಸಲಿದ್ದಾರೆ. ಲಾಂಗ್‌ ಜಂಪ್‌ ತಾರೆ ಅಂಜು ಬಾಬಿ ಜಾರ್ಜ್‌ ಅವರು ಹಿರಿಯ ಉಪಾಧ್ಯಕ್ಷೆ ಸ್ಥಾನ ಅಲಂಕರಿಸಿದರು. ಶನಿವಾರ ನಡೆದ ಮಂಡಳಿಯ ವಾರ್ಷಿಕ ಸಾಮಾನ್ಯ ಸಭೆಯಲ್ಲಿ (ಎಜಿಎಂ) ಪದಾಧಿಕಾರಿಗಳ ಆಯ್ಕೆ ನಡೆಯಿತು.

ಸುಮರಿವಾಲಾ ಅವರಿಗೆ ಅಧ್ಯಕ್ಷರಾಗಿ ಇದು ಕೊನೆಯ ಅವಧಿ (2020–24). ರಾಷ್ಟ್ರೀಯ ಕ್ರೀಡಾ ಸಂಹಿತೆಯ ಅನ್ವಯ ಸತತ ಮೂರು ಅವಧಿಗೆ ಮಾತ್ರ ರಾಷ್ಟ್ರೀಯ ಫೆಡರೇಷನ್‌ನ ಮುಖ್ಯಸ್ಥರಾಗಬಹುದು. 2012ರಲ್ಲಿ ಅವರು ಮೊದಲ ಬಾರಿ ಅಧ್ಯಕ್ಷರಾಗಿದ್ದರು.

2003ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿರುವ ಅಂಜು, ಎಎಫ್‌ಐ ಕಾರ್ಯಕಾರಿ ಸಮಿತಿಯಲ್ಲಿ ಮೊದಲ ಬಾರಿ ಪ್ರಮುಖ ಹುದ್ದೆ ಅಲಂಕರಿಸಿದ್ದಾರೆ. ಎಎಫ್‌ಐ ಇತಿಹಾಸದಲ್ಲೇ ಮಹಿಳೆಯೊಬ್ಬರು ಹಿರಿಯ ಉಪಾಧ್ಯಕ್ಷೆಯಾಗಿರುವುದು ಇದೇ ಮೊದಲು.

ADVERTISEMENT

ಹಿರಿಯ ಉಪಾಧ್ಯಕ್ಷರ ಸ್ಥಾನಕ್ಕೆ ಕರ್ನಾಟಕದಿಂದ ಅಂಜು ಹೆಸರು ಶಿಫಾರಸು ಮಾಡಿದ್ದಕ್ಕೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಕರ್ನಾಟಕ ಅಥ್ಲೆಟಿಕ್ ಸಂಸ್ಥೆಯಲ್ಲಿ (ಕೆಎಎ) ಲೀನವಾಗಿರುವ ರಾಜ್ಯದ 10ಕ್ಕೂ ಹೆಚ್ಚು ಘಟಕಗಳ ಪದಾಧಿಕಾರಿಗಳು ಈ ಸಂಬಂಧ ಎಎಫ್‌ಐಗೆ ಪತ್ರ ಬರೆದು, ಅಂಜು ಅವರ ಹೆಸರನ್ನು ಪರಿಗಣಿಸಬಾರದು ಎಂದು ಒತ್ತಾಯಿಸಿದ್ದರು.

ಎಎಫ್‌ಐ ಹಲವು ವರ್ಷಗಳ ಕಾಲ ವಿವಿಧ ಹುದ್ದೆಗಳನ್ನು ನಿರ್ವಹಿಸಿರುವ ರವೀಂದ್ರ ಚೌಧರಿ ಕಾರ್ಯದರ್ಶಿಯಾಗಿ, ಸಂದೀಪ್ ಮೆಹ್ತಾ ಹಿರಿಯ ಜಂಟಿ ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ.

ಖಜಾಂಚಿಯಾಗಿ ಮಧುಕಾಂತ್‌ ಪಟ್ನಾಯಕ್‌, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಲಲಿತ್‌ ಭಾನೋಟ್‌, ಐದು ಮಂದಿ ಜಂಟಿ ಕಾರ್ಯದರ್ಶಿಗಳು ಹಾಗೂ ಎಂಟು ಮಂದಿ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಇದೇ ವೇಳೆ ಆಯ್ಕೆ ಮಾಡಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.