ADVERTISEMENT

ಫೆಲ್ಪ್ಸ್ ವಿಶ್ವದಾಖಲೆ ಮುರಿದ ಮಿಲಾಕ್‌

ವಿಶ್ವ ಈಜು ಚಾಂಪಿಯನ್‌ಷಿಪ್‌ನ 200 ಮೀ.ಟರ್ಸ್‌ ಬಟರ್‌ಫ್ಲೈ ಸ್ಪರ್ಧೆ

ರಾಯಿಟರ್ಸ್
Published 24 ಜುಲೈ 2019, 19:46 IST
Last Updated 24 ಜುಲೈ 2019, 19:46 IST
ವಿಶ್ವದಾಖಲೆ ಮುರಿದ ಕ್ರಿಸ್ಟೋಫ್ ಮಿಲಾಕ್ ಸಂಭ್ರಮಿಸಿದರು –ಪಿಟಿಐ ಚಿತ್ರ
ವಿಶ್ವದಾಖಲೆ ಮುರಿದ ಕ್ರಿಸ್ಟೋಫ್ ಮಿಲಾಕ್ ಸಂಭ್ರಮಿಸಿದರು –ಪಿಟಿಐ ಚಿತ್ರ   

ಗ್ವಾಂಗ್ಜು, ದಕ್ಷಿಣ ಕೊರಿಯಾ: ಹಂಗೆರಿಯ ಹದಿಹರೆಯದ ಈಜುಪಟು ಕ್ರಿಸ್ಟೋಫ್‌ ಮಿಲಾಕ್‌, ವಿಶ್ವ ಈಜು ಚಾಂಪಿಯನ್‌ಷಿಪ್ಸ್‌ನ ಪುರುಷರ 200 ಮೀಟರ್ಸ್‌ ಬಟರ್‌ಫ್ಲೈ ವಿಭಾಗದ ಸ್ಪರ್ಧೆಯಲ್ಲಿ ಬುಧವಾರ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದುಕೊಂಡರು.

19 ವರ್ಷದ ಮಿಲಾಕ್‌ 1ನಿ.50.73 ಸೆ.ಗಳಲ್ಲಿ ಗುರಿತಲುಪಿ 10 ವರ್ಷಗಳ ಹಿಂದೆ ಅಮೆರಿಕದ ದಂತಕತೆ ಮೈಕೆಲ್ ಫೆಲ್ಪ್ಸ್‌ ಸ್ಥಾಪಿಸಿದ್ದ 1ನಿ.51.51 ಸೆ.ಗಳ ದಾಖಲೆಯನ್ನು ಮುಳುಗಿಸಿದರು. ಜಪಾನ್‌ನ ದೈಯಾ ಸೆಟೊ (1ನಿ.53.86 ಸೆ.) ಮತ್ತು ದಕ್ಷಿಣ ಆಫ್ರಿಕದ ಚಾದ್‌ ಲೆ ಕ್ಲೊಸ್‌ (1ನಿ.54.15ಸೆ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

ಇನ್ನೂ ಆರಿಲ್ಲ ವಿವಾದದ ಬಿಸಿ: 100 ಮೀ. ಫ್ರೀಸ್ಟೈಲ್‌ ಈಜು ಸ್ಪರ್ಧೆಯ ಹೀಟ್ಸ್‌ನಲ್ಲಿ ಹಾಲಿ ಚಾಂಪಿಯನ್‌ ಕೇಲೆಬ್‌ ಡ್ರೆಸೆಲ್‌ ಉತ್ತಮ ಸಾಧನೆ ತೋರಿದರು. ಆದರೆ ಚೀನಾದ ಅಗ್ರಮಾನ್ಯ ಸನ್‌ ಯಾಂಗ್‌ ಮತ್ತು ಬ್ರಿಟನ್‌ನ ಡಂಕನ್‌ ಸ್ಕಾಟ್‌ ನಡುವಣ ಮಂಗಳವಾರ ಉಂಟಾದ ವಿವಾದದ ಬಿಸಿ ಇನ್ನೂ ಆರುತ್ತಿಲ್ಲ.

ADVERTISEMENT

ಎರಡು ವರ್ಷಗಳ ಹಿಂದೆ ಬುಡಾಪೆಸ್ಟ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಡ್ರೆಸೆಲ್‌ ಏಳು ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದರು. ಈಗಾಗಲೇ ಗುವಾಂಗ್ಜು ಕೊಳದಿಂದ ಎರಡು ಚಿನ್ನ ಎತ್ತಿರುವ ಡ್ರೆಸೆಲ್‌, ಹೀಟ್ಸ್‌ನಲ್ಲಿ ಸುಲಭವಾಗಿ ಅಗ್ರಸ್ಥಾನ ಪಡೆದು ಸೆಮಿಫೈನಲ್‌ಗೆ ಮುನ್ನಡೆದರು.

ರಿಯೊ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದುಕೊಂಡಿದ್ದ ಆಸ್ಟ್ರೇಲಿಯಾದ ಕೈಲ್‌ ಚಾಮರ್ಸ್‌ 13ನೇ ಸ್ಥಾನ ಗಳಿಸಿ ಸೆಮಿಗೆ ಅರ್ಹತೆ ಪಡೆದರು.

ಆದರೆ ಕೊಳದಲ್ಲಿನ ಸಾಧನೆಗಿಂತ ಹೊರಗಿನ ವಿವಾದಗಳೇ ಚರ್ಚೆ ಯಾದವು. ಸನ್‌ ಯಾಂಗ್‌ ವಿರುದ್ಧ ಫಿನಾದ ಉದ್ದೀಪನ ಮದ್ದು ಪರಿಶೀಲನಾ ಆಯೋಗವು ಕಳೆದ ಸೆಪ್ಟೆಂಬರ್‌ನಲ್ಲಿ ರಕ್ತದ ಮಾದರಿ ಪರೀಕ್ಷೆ ನಡೆಸಿತ್ತು. ಆ ಸಂದರ್ಭದಲ್ಲಿ ಅವರು ಮಾದರಿಯಿದ್ದ ಗಾಜಿನ ನಾಳ ಒಡೆದುಹಾಕಿದರೆನ್ನಲಾದ ಪ್ರಕರಣದ ಫಿನಾ ವರದಿ ಸೋರಿಕೆಯಾಗಿದ್ದು, ಈ ಕೂಟದಲ್ಲಿ ಸದ್ದು ಮಾಡುತ್ತಿದೆ.

‘ನಾನು ಅಂದುಕೊಂಡ ರೀತಿಯಲ್ಲೇ ಈಜಿದೆ’ ಎಂದು ಹೇಳಿದ ಡ್ರಸೆಲ್‌, ಮಾಧ್ಯಮವರು ಡೋಪಿಂಗ್‌ (ಮದ್ದುಸೇವನೆ) ವಿಷಯ ಕೇಳುವ ಮೊದಲೇ ‘ಜಾಗ ಖಾಲಿ’ ಮಾಡಿದರು.

200 ಮೀ. ಫೈನಲ್‌ ಪದಕ ಪ್ರದಾನ ವೇಳೆ, ಚಿನ್ನ ಗೆದ್ದ ಸನ್‌ ಜೊತೆ ಹಸ್ತಲಾಘವಕ್ಕೆ ನಿರಾಕರಿಸಿ ಬ್ರಿಟನ್‌ನ ಡಂಕನ್‌ ಸ್ಕಾಟ್‌ ಒರಟು ನಡವಳಿಕೆ ತೋರಿದ್ದರು. ಫಿನಾ, ಸ್ಕಾಟ್‌ ವರ್ತನೆಗೆ ಮತ್ತು ಪ್ರತಿಕ್ರಿಯೆ ರೂಪದಲ್ಲಿ ಕೂಗಾಡಿದ ಸನ್‌ – ಇಬ್ಬರಿಗೂ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.