ಜಕಾರ್ತ: ಭಾರತದ ಸುಂದರ್ ಸಿಂಗ್ ಗುರ್ಜರ್ ಅವರು ಏಷ್ಯನ್ ಪ್ಯಾರಾ ಕ್ರೀಡಾಕೂಟದಲ್ಲಿ ಗುರುವಾರ ಮಿಂಚಿದರು. ಪುರುಷರ ಜಾವೆಲಿನ್ ಥ್ರೋದ ಎಫ್ 46 ವಿಭಾಗದಲ್ಲಿ ಅವರು ಬೆಳ್ಳಿಯ ಪದಕ ತಮ್ಮದಾಗಿಸಿಕೊಂಡರು.
ಇದೇ ವಿಭಾಗದ ಕಂಚಿನ ಪದಕ ಭಾರತದ ರಿಂಕು ಅವರ ಪಾಲಾಯಿತು. ಆದರೆ ಪ್ಯಾರಾಲಿಂಪಿಕ್‌ನಲ್ಲಿ ಎರಡು ಬಾರಿ ಚಿನ್ನ ಗೆದ್ದಿದ್ದ ದೇವೇಂದ್ರ ಜಜಾರಿಯಾ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು.
ಕೂಟ ಆರಂಭಕ್ಕೆ ಮೊದಲು ಫಿನ್‌ಲೆಂಡ್‌ನಲ್ಲಿ 22 ದಿನ ತರಬೇತಿ ಪಡೆದುಕೊಂಡಿದ್ದ ಗುರ್ಜರ್ ಅವರಿಗೆ ಭಾರತೀಯ ಕ್ರೀಡಾ ಪ್ರಾಧಿಕಾರವೂ ನೆರವು ನೀಡಿದೆ. ಬುಧವಾರ ರಾತ್ರಿ ನಡೆದ ಸ್ಪರ್ಧೆಯಲ್ಲಿ 61.33 ಮೀಟರ್ಸ್ ದೂರ ಎಸೆದು ಅವರು ಗಮನ ಸೆಳೆದರು. ರಿಂಕು 60.92 ಮೀಟರ್ಸ್ ದೂರ ಎಸೆದರು. ಇದು ಅವರ ವೈಯಕ್ತಿಕ ಗರಿಷ್ಠ ಸಾಧನೆಯಾಗಿದೆ. ಶ್ರೀಲಂಕಾದ ದಿನೇಶ್ ಹೆರಾತ್ ಕೂಟ ದಾಖಲೆಯೊಂದಿಗೆ (61.84 ಮೀಟರ್ಸ್) ಚಿನ್ನ ಗಳಿಸಿದರು.
ಓಟದಲ್ಲಿ ಕಂಚು: ಪುರುಷರ 400 ಮೀಟರ್ಸ್ ಓಟದ ಟಿ 13 ವಿಭಾಗದಲ್ಲಿ ಭಾರತದ ಅವನಿಲ್ ಕುಮಾರ್ ಕಂಚು ಗೆದ್ದರು. 52 ಸೆಕೆಂಡುಗಳಲ್ಲಿ ಅವರು ಗುರಿ ಮುಟ್ಟಿದರು. ಇರಾನ್‌ನ ಒಮಿದ್ ಜರಿಫ್ಸನಾಯ್ (51.41 ಸೆಕೆಂಡು) ಚಿನ್ನ ಮತ್ತು ಥಾಯ್ಲೆಂಡ್‌ನ ಸಾಂಗ್‌ವುಟ್ ಲಮ್ಸನ್ ಬೆಳ್ಳಿ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.