ADVERTISEMENT

ಈಜು ಸಂಸ್ಥೆ ಅಧ್ಯಕ್ಷರಾಗಿದ್ದ ಜಗದಾಳೆ ಇನ್ನಿಲ್ಲ

​ಪ್ರಜಾವಾಣಿ ವಾರ್ತೆ
Published 9 ಮೇ 2019, 18:49 IST
Last Updated 9 ಮೇ 2019, 18:49 IST
ನೀಲಕಂಠ ರಾವ್‌ ಜಗದಾಳೆ
ನೀಲಕಂಠ ರಾವ್‌ ಜಗದಾಳೆ   

ಬೆಂಗಳೂರು: ರಾಜ್ಯ ಈಜು ಸಂಸ್ಥೆಯ ಅಧ್ಯಕ್ಷ ಮತ್ತು ರಾಜ್ಯ ಒಲಿಂಪಿಕ್ಸ್ ಸಂಸ್ಥೆಯ ಉಪಾಧ್ಯಕರಾಗಿದ್ದ ನೀಲಕಂಠರಾವ್ ರಾಧಾಕೃಷ್ಣ ಜಗದಾಳೆ (67) ಬುಧವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಪುತ್ರ ಮತ್ತು ಪುತ್ರಿ ಇದ್ದಾರೆ.

ಬಸವನಗುಡಿಯ ಶಂಕರ ಮಠ ಬಳಿ ನಿವಾಸಿಯಾಗಿದ್ದ ಅವರ ಅಂತ್ಯಕ್ರಿಯೆ ವಿಲ್ಸನ್ ಗಾರ್ಡನ್‌ ವಿದ್ಯುತ್ ಚಿತಾಗಾರದಲ್ಲಿ ಗುರುವಾರ ಸಂಜೆ ನಡೆಯಿತು.

ರಾಜ್ಯದಲ್ಲಿ ಈಜು ಕ್ರೀಡೆಗೆ ಹೊಸ ಆಯಾಮ ನೀಡಿದವರಲ್ಲಿ ಒಬ್ಬರಾಗಿರುವ ಜಗದಾಳೆ, ದೇಶದ ಪ್ರಸಿದ್ಧ ಕೇಂದ್ರಗಳಲ್ಲಿ ಒಂದಾದ ಬಸವನಗುಡಿ ಈಜು ಕೇಂದ್ರದ ಸ್ಥಾಪನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಈ ಕೇಂದ್ರದಲ್ಲಿ ವೃತ್ತಿಪರ ತರಬೇತಿ ಕೊಡಿಸುವುದಕ್ಕೆ ಆದ್ಯತೆ ನೀಡಿದ ಅವರು ಇದಕ್ಕಾಗಿ ಅನೇಕ ವಿದೇಶಿ ಕೋಚ್‌ಗಳನ್ನು ಉದ್ಯಾನ ನಗರಿಗೆ ಕರೆದುಕೊಂಡು ಬಂದಿದ್ದರು. ರಾಷ್ಟ್ರಮಟ್ಟದ ಅನೇಕ ಚಾಂಪಿಯನ್‌ಷಿಪ್‌ಗಳನ್ನು ಆಯೋಜಿಸಿ ಯುವ ಈಜುಪಟುಗಳು ಬೆಳಕಿಗೆ ಬರಲು ಕಾರಣರಾಗಿದ್ದರು.

ADVERTISEMENT

ಪುತ್ರನ ಕಂಡು ‘ಬೆಳೆದ’ ಈಜುಪಟು: ಉದ್ಯಮಿಯಾಗಿದ್ದ ನೀಲಕಂಠರಾವ್ ಅವರು ಈಜು ಕ್ಷೇತ್ರಕ್ಕೆ ಕಾಲಿಟ್ಟದ್ದು ತಡವಾಗಿ. ಪುತ್ರ ರಕ್ಷಿತ್ ಎನ್‌.ಜಗದಾಳೆ ಅಂತರರಾಷ್ಟ್ರೀಯ ಈಜುಪಟು ಆಗಿದ್ದರು. ಅವರನ್ನು ಕಂಡು ಈಜು ಸಂಸ್ಥೆಗೆ ಪದಾರ್ಪಣೆ ಮಾಡಿದ ಅವರು 1986ರಿಂದ ಮೂರು ದಶಕ ಸಂಸ್ಥೆಯ ಅಧ್ಯಕ್ಷರಾಗಿದ್ದರು ಎಂದು ಗೌರವ ಕಾರ್ಯದರ್ಶಿ ಸತೀಶ್‌ ಕುಮಾರ್ ತಿಳಿಸಿದರು.

‘ಅವರಿಗೆ ಈಜು ಎಂದರೆ ಪ್ರಾಣವಾಗಿತ್ತು. ಮಾಸ್ಟರ್ಸ್‌ ಈಜುಪಟು ಕೂಡ ಆಗಿದ್ದರು. ಭಾರತದಿಂದ ಒಬ್ಬರಾದರೂ ಒಲಿಂಪಿಕ್ಸ್‌ನ ಈಜಿನಲ್ಲಿ ಪದಕ ಗೆಲ್ಲಬೇಕು, ಕನಿಷ್ಠ ಫೈನಲ್‌ಗಾದರೂ ತಲುಪಬೇಕು ಎಂಬುದು ಅವರ ಮಹದಾಸೆ ಆಗಿತ್ತು’ ಎಂದು ಸತೀಶ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.