ADVERTISEMENT

ಈಜು ಪ್ರತಿಭೆ ಶ್ರೀಹರಿ ನಟರಾಜ್‌

ಜಿ.ಶಿವಕುಮಾರ
Published 8 ಸೆಪ್ಟೆಂಬರ್ 2019, 19:45 IST
Last Updated 8 ಸೆಪ್ಟೆಂಬರ್ 2019, 19:45 IST
ಶ್ರೀಹರಿ ನಟರಾಜ್‌
ಶ್ರೀಹರಿ ನಟರಾಜ್‌   

ರೆಹಾನ್‌ ಪೂಂಚಾ, ಸಂದೀಪ್ ಸೇಜ್ವಾಲ್‌, ವೀರಧವಳ್‌ ಖಾಡೆ ಅವರಂತಹ ಚಿನ್ನದ ‘ಮೀನು’ಗಳು ಈಜುಕೊಳದಲ್ಲಿ ಮಿಂಚಿನ ಗತಿಯಲ್ಲಿ ಈಜುವುದನ್ನು ನೋಡುತ್ತಾ ಬೆಳೆದ ಶ್ರೀಹರಿ ನಟರಾಜ್‌, ಈ‌ಗ ಭಾರತದ ಈಜು ಲೋಕದಲ್ಲಿ ಸಂಚಲನ ಸೃಷ್ಟಿಸುತ್ತಿದ್ದಾರೆ.

ಎಳವೆಯಿಂದಲೇ ಈಜು ಕ್ರೀಡೆಯಲ್ಲಿ ಅಪರಿಮಿತ ಆಸಕ್ತಿ ಹೊಂದಿದ್ದ ಶ್ರೀಹರಿ, 2007ರಿಂದ 2009ರ ಅವಧಿಯಲ್ಲಿ ನಡೆದಿದ್ದ ಕ್ಲಬ್‌ ಮತ್ತು ಶಾಲಾ ಮಟ್ಟದ ಸ್ಪರ್ಧೆಗಳಲ್ಲಿ ಪದಕಗಳ ಬೇಟೆಯಾಡಿದ್ದರು. 2010ರಲ್ಲಿ ಮೊದಲ ಸಲ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಪಾಲ್ಗೊಳ್ಳುವ ಅವಕಾಶ ಪಡೆದಿದ್ದ ಬೆಂಗಳೂರಿನ ಈ ಈಜುಪಟು, 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಐದನೇ ಸ್ಥಾನ ಪಡೆದು ಎಲ್ಲರ ಹುಬ್ಬೇರುವಂತೆ ಮಾಡಿದ್ದರು. ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಿದ್ದ ಅತೀ ಕಿರಿಯ ಸ್ಪರ್ಧಿ ಎಂಬ ಹಿರಿಮೆಗೂ ಭಾಜನರಾಗಿದ್ದರು. ಆಗ ಅವರಿಗೆ ಹತ್ತರ ಹರೆಯ.

ಶ್ರೀಹರಿ ಬದುಕಿಗೆ ಮಹತ್ವದ ತಿರುವು ಲಭಿಸಿದ್ದು 2011ರಲ್ಲಿ. ಆ ವರ್ಷ ರಾಷ್ಟ್ರೀಯ ಸಬ್‌ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದರು. ಎ.ಸಿ.ಜಯರಾಜನ್‌ ಅವರ ಮಾರ್ಗದರ್ಶನದಲ್ಲಿ ತರಬೇತುಗೊಂಡಿದ್ದ ಅವರು ರಾಷ್ಟ್ರೀಯ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲೂ ಮೋಡಿ ಮಾಡಿದ್ದರು. ಎಂಟು ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡಿದ್ದರಲ್ಲದೆ, ನಾಲ್ಕು ರಾಷ್ಟ್ರೀಯ ದಾಖಲೆಗಳನ್ನೂ ನಿರ್ಮಿಸಿದ್ದರು.

ADVERTISEMENT

2016ರಲ್ಲಿ ಶ್ರೀಹರಿ ಮತ್ತೊಂದು ಮೈಲುಗಲ್ಲು ಸ್ಥಾಪಿಸಿದ್ದರು. ಶ್ರೀಲಂಕಾದ ಕೊಲಂಬೊದಲ್ಲಿ ನಡೆದಿದ್ದ ದಕ್ಷಿಣ ಏಷ್ಯನ್‌ ಈಜು ಚಾಂಪಿಯನ್‌ಷಿಪ್‌ನಲ್ಲಿ ಒಟ್ಟು ನಾಲ್ಕು ಪದಕಗಳನ್ನು ಜಯಿಸಿದ್ದರು. 100 ಮತ್ತು 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ಹಾಗೂ 4X100 ಮೀಟರ್ಸ್‌ ಮೆಡ್ಲೆ ರಿಲೆ ಸ್ಪರ್ಧೆಗಳಲ್ಲಿ ಅವರಿಂದ ಚಿನ್ನದ ಸಾಧನೆ ಅರಳಿತ್ತು. 50 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಬೆಳ್ಳಿಯ ಪದಕ ಗೆದ್ದಿದ್ದರು.

2018, ಶ್ರೀಹರಿ ಪಾಲಿಗೆ ಸ್ಮರಣೀಯ ವರ್ಷ. ಏಷ್ಯನ್‌ ಮತ್ತು ಕಾಮನ್‌ವೆಲ್ತ್‌ ಕ್ರೀಡಾಕೂಟಗಳಿಗೆ ಪಾದಾರ್ಪಣೆ ಮಾಡಿದ್ದ ಅವರು ಗೋಲ್ಡ್‌ ಕೋಸ್ಟ್‌ನಲ್ಲಿ ಜರುಗಿದ್ದ ಕಾಮನ್‌ವೆಲ್ತ್‌ ಕೂಟದಲ್ಲಿ 50 ಮತ್ತು 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗಗಳಲ್ಲಿ ಸೆಮಿಫೈನಲ್‌ ಪ್ರವೇಶಿಸಿ ಗಮನ ಸೆಳೆದಿದ್ದರು.

ಅದೇ ವರ್ಷದ ಅಕ್ಟೋಬರ್‌ನಲ್ಲಿ ಅರ್ಜೆಂಟೀನಾದ ಬ್ಯೂನಸ್‌ ಐರಿಸ್‌ನಲ್ಲಿ ಆಯೋಜನೆಯಾಗಿದ್ದ ಯೂತ್ ಒಲಿಂಪಿಕ್ಸ್‌ನಲ್ಲೂ ಶ್ರೀಹರಿ ಜಾದೂ ಮಾಡಿದ್ದರು. 100 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ನಲ್ಲಿ ಫೈನಲ್‌ ಪ್ರವೇಶಿಸಿ, ಈ ಸಾಧನೆ ಮಾಡಿದ ಭಾರತದ ಮೊದಲ ಈಜುಪಟು ಎಂಬ ಶ್ರೇಯಕ್ಕೆ ಪಾತ್ರರಾಗಿದ್ದರು.

2019ರ ಋತುವಿನಲ್ಲೂ ಶ್ರೀಹರಿ ‘ಮ್ಯಾಜಿಕ್‌’ ಮುಂದುವರಿದಿದೆ. ಹೋದ ತಿಂಗಳು ಹಂಗರಿಯಲ್ಲಿ ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿ ತಮ್ಮದೇ ಹೆಸರಿನಲ್ಲಿದ್ದ ರಾಷ್ಟ್ರೀಯ ದಾಖಲೆಗಳನ್ನು ಉತ್ತಮ ಪಡಿಸಿಕೊಂಡಿದ್ದರು.

ಹೋದ ವಾರ ಭೋಪಾಲ್‌ನಲ್ಲಿ ನಡೆದಿದ್ದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲೂ ನಾಲ್ಕು ಚಿನ್ನದ ಪದಕ ಜಯಿಸಿದ್ದ ಅವರು ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡಿದ್ದಾರೆ.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಬೇಟೆ ಮುಂದುವರಿಸಿದ್ದೀರಿ. ಈ ಸಾಧನೆ ಬಗ್ಗೆ ಹೇಳಿ?

ಹೋದ ತಿಂಗಳು ನಡೆದಿದ್ದ ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಿದ್ದ ರಿಂದ ವಿಶ್ವಾಸ ಇಮ್ಮಡಿಸಿತ್ತು. ಹೀಗಾಗಿ ರಾಷ್ಟ್ರೀಯ ಚಾಂಪಿ ಯನ್‌ಷಿಪ್‌ನಲ್ಲಿ ದಾಖಲೆಯೊಂದಿಗೆ ಚಿನ್ನದ ಪದಕಗಳನ್ನು ಜಯಿಸಲು ಸಾಧ್ಯವಾಯಿತು.

ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗೂ ಮುನ್ನ ಏನೆಲ್ಲಾ ಸಿದ್ಧತೆಗಳನ್ನು ಮಾಡಿಕೊಂಡಿದ್ದಿರಿ?

ವಿಶ್ವ ಜೂನಿಯರ್‌ ಚಾಂಪಿಯನ್‌ಷಿಪ್‌ ಮುಗಿದ ಕೂಡಲೇ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಭಾಗವಹಿಸಬೇಕಿತ್ತು. ಹೀಗಾಗಿ ಸಿದ್ಧತೆ ಮಾಡಿಕೊಳ್ಳಲು ಸಮಯವೇ ಸಿಗಲಿಲ್ಲ. ಹೀಗಿದ್ದರೂ ಚಿನ್ನದ ಪದಕ ಗೆದ್ದಿದ್ದು ಖುಷಿ ನೀಡಿದೆ. ಚಾಂಪಿಯನ್‌ಷಿಪ್‌ನ ಶ್ರೇಷ್ಠ ಈಜುಪಟು ಗೌರವ ಸಿಕ್ಕಿದ್ದು ಹೆಮ್ಮೆಯಿಂದ ಬೀಗುವಂತೆ ಮಾಡಿದೆ.

ಮುಂದಿನ ಕೂಟಗಳ ಬಗ್ಗೆ ಹೇಳಿ?

ಈ ತಿಂಗಳ ಅಂತ್ಯದಲ್ಲಿ ಏಷ್ಯನ್‌ ಏಜ್‌ಗ್ರೂಪ್‌ ಚಾಂಪಿಯನ್‌ಷಿಪ್‌ ನಡೆಯಲಿದೆ. ಇದರಲ್ಲಿ ಪದಕ ಗೆಲ್ಲುವುದು ಸದ್ಯದ ಗುರಿ. ಇದಕ್ಕಾಗಿ ಪ್ರತಿನಿತ್ಯವೂ ಕಠಿಣ ತಾಲೀಮು ನಡೆಸುತ್ತಿದ್ದೇನೆ.

ರಾಜ್ಯ, ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳಲ್ಲಿ ನಿಮ್ಮಿಂದ ಸತತವಾಗಿ ಪದಕಗಳ ಸಾಧನೆ ಮೂಡಿಬರುತ್ತಿದೆ. ಈ ಯಶಸ್ಸಿನ ಹಿಂದಿನ ಗುಟ್ಟೇನು?

ಭಾಗವಹಿಸುವ ಎಲ್ಲಾ ಚಾಂಪಿಯನ್‌ಷಿಪ್‌ಗಳಲ್ಲೂ ಶ್ರೇಷ್ಠ ಸಾಮರ್ಥ್ಯ ತೋರುವತ್ತ ಮಾತ್ರ ಚಿತ್ತ ಹರಿಸುತ್ತೇನೆ. ಪ್ರತಿಸ್ಪರ್ಧಿಗಳ ಸಾಮರ್ಥ್ಯದ ಬಗ್ಗೆ ಯಾವತ್ತೂ ತಲೆಕೆಡಿಸಿಕೊಳ್ಳುವುದಿಲ್ಲ. ಜೊತೆಗೆ ಫಿಟ್‌ನೆಸ್‌ ಕಾಪಾಡಿಕೊಳ್ಳಲು ಹೆಚ್ಚಿನ ಒತ್ತು ನೀಡುತ್ತೇನೆ. ನಿತ್ಯ ನಾಲ್ಕು ಗಂಟೆ ಅಭ್ಯಾಸ ನಡೆಸುತ್ತೇನೆ. ಹೀಗಾಗಿ ಯಶಸ್ಸಿನ ಪಥದಲ್ಲಿ ಸಾಗಲು ಸಾಧ್ಯವಾಗುತ್ತಿದೆ.

2020ರ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸುವ ವಿಶ್ವಾಸ ಇದೆಯೇ?

ಖಂಡಿತವಾಗಿಯೂ ಇದೆ. 100 ಮತ್ತು 200 ಮೀಟರ್ಸ್‌ ಬ್ಯಾಕ್‌ಸ್ಟ್ರೋಕ್‌ ವಿಭಾಗಗಳಲ್ಲಿ ಉತ್ತಮ ಸಾಮರ್ಥ್ಯ ತೋರಿ ಟೋಕಿಯೊಗೆ ರಹದಾರಿ ಪಡೆಯಬೇಕು. ಆ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿದ್ದೇನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.