ADVERTISEMENT

ಮೈಸೂರಿನ ‘ಚಿನ್ನದ ಮೀನು’ ತಾನ್ಯಾ

ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌: 3 ಚಿನ್ನ, 1 ಬೆಳ್ಳಿ ಪದಕ ಸಾಧನೆ

ಮೋಹನ್ ಕುಮಾರ ಸಿ.
Published 1 ಜನವರಿ 2023, 6:01 IST
Last Updated 1 ಜನವರಿ 2023, 6:01 IST
ಕೇರಳದ ತಿರುವನಂತಪುರದಲ್ಲಿ ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಸಂಭ್ರಮದಲ್ಲಿ ತಾನ್ಯಾ
ಕೇರಳದ ತಿರುವನಂತಪುರದಲ್ಲಿ ಇತ್ತೀಚೆಗೆ ಮುಕ್ತಾಯವಾದ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ ಪದಕ ಗೆದ್ದ ಸಂಭ್ರಮದಲ್ಲಿ ತಾನ್ಯಾ   

ಮೈಸೂರು: ‘ಈಜುಪಟುವಾಗುತ್ತೇನೆ ಅಂದುಕೊಂಡಿರಲಿಲ್ಲ. 6 ವರ್ಷದ ಹಿಂದೆ ಬೇಸಿಗೆ ಈಜು ಶಿಬಿರಕ್ಕೆ ಸೇರಿದೆ. 2017ರ ದಸರಾ ಕ್ರೀಡಾಕೂಟದಲ್ಲಿ ಸ್ಪರ್ಧಿಸಿದಾಗ ಬೆಳ್ಳಿ ಪದಕ ಸಿಕ್ಕಿದಾಗ ಅಪ್ಪ– ಅಮ್ಮ ಖುಷಿಪಟ್ಟರು. ಅಂದೇ ದೇಶ ಪ್ರತಿನಿಧಿಸಬೇಕೆನ್ನಿಸಿತು’.

ಡಿ.29ರಂದು ಕೇರಳದ ತಿರುವನಂತಪುರದಲ್ಲಿ ಮುಕ್ತಾಯವಾದ ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 3 ಚಿನ್ನ ಹಾಗೂ 1 ಬೆಳ್ಳಿ ಗೆದ್ದಿರುವ ಮೈಸೂರಿನ ‘ಚಿನ್ನದ ಮೀನು’ ಎಸ್‌.ತಾನ್ಯಾ ಮಾತುಗಳಿವು.

ದಟ್ಟಗಳ್ಳಿಯ ಶ್ರೀಶಾರದಾ ಪಬ್ಲಿಕ್‌ ಶಾಲೆಯಲ್ಲಿ 8ನೇ ತರಗತಿ ಓದುತ್ತಿರುವ ಎಸ್‌.ತಾನ್ಯಾ, ರಾಜ್ಯ ಮಟ್ಟದ ಈಜು ಸ್ಪರ್ಧೆಗಳಲ್ಲಿ 14 ಪದಕ, ದಕ್ಷಿಣ ವಲಯ ಮಟ್ಟದಲ್ಲಿ 5 ‍ಪದಕ ಗೆದ್ದು (4 ಚಿನ್ನ, 1 ಬೆಳ್ಳಿ), ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ADVERTISEMENT

ಕೂಟ ದಾಖಲೆ: ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನಲ್ಲಿ 400 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ 5.26.16 ನಿಮಿಷಗಳಲ್ಲಿ ಗುರಿ ಮುಟ್ಟಿದ ತಾನ್ಯಾ, ಕೂಟ ದಾಖಲೆ ಬರೆದರು. ಶ್ರದ್ಧಾ ಸುಧೀರ್‌ 2013ರಲ್ಲಿ (5.33.16 ನಿಮಿಷ) ನಿರ್ಮಿಸಿದ್ದ ದಾಖಲೆ ಮುರಿದರು.

50 ಮೀ. ಹಾಗೂ 100 ಮೀ ಬ್ರೆಸ್ಟ್‌ಸ್ಟ್ರೋಕ್‌ನಲ್ಲಿ ಚಿನ್ನ, 200 ಮೀ ಬ್ರೆಸ್ಟ್‌ ಸ್ಟ್ರೋಕ್‌ನಲ್ಲಿ ಬೆಳ್ಳಿ ಗೆಲ್ಲುವ ಮೂಲಕ 26 ಪಾಯಿಂಟ್‌ ಕಲೆಹಾಕಿ ವೈಯಕ್ತಿಕ ಚಾಂಪಿಯನ್‌ಷಿಪ್‌ ಅನ್ನು ತಮ್ಮದಾಗಿಸಿಕೊಂಡರು.

ನಿತ್ಯ 4 ಗಂಟೆ ಅಭ್ಯಾಸ: ಜೆ.ಪಿ.ನಗರದ ನಾಲ್ವಡಿ ಕೃಷ್ಣರಾಜ ಒಡೆಯರ್‌ ಈಜುಕೊಳದಲ್ಲಿ ಗ್ಲೋಬಲ್ ಸ್ಪೋರ್ಟ್ಸ್‌ ಅಸೋಸಿಯೇಷನ್‌ನಲ್ಲಿ ನಿತ್ಯ ಮುಂಜಾನೆ 5.45ರಿಂದ 7.45ರವರೆಗೆ ಹಾಗೂ ಸಂಜೆ 5ರಿಂದ 7ರವರೆಗೆ ಅಭ್ಯಾಸವನ್ನು ನಡೆಸುವ ಅವರಿಗೆ ಸಂಸ್ಥೆಯ ಮುಖ್ಯ ಕೋಚ್‌ ಪವನ್‌ ಕುಮಾರ್‌ ತರಬೇತಿ ನೀಡುತ್ತಿದ್ದಾರೆ.

ಜೀವಾಂಶ್‌ಗೂ ಚಿನ್ನ: ಕಳೆದ ಒಂದೂವರೆ ವರ್ಷದಿಂದ ಗ್ಲೋಬಲ್‌ ಸ್ಪೋರ್ಟ್ಸ್‌ ಅಸೋಸಿಯೇಷನ್‌ನಲ್ಲೇ ಅಭ್ಯಾಸ ನಡೆಸುತ್ತಿರುವ ಜೀವಾಂಶ್‌ ಕೂಡ ದಕ್ಷಿಣ ವಲಯ ಚಾಂಪಿಯನ್‌ಷಿಪ್‌ನ 100 ಮೀ ಬಟರ್‌ಫ್ಲೈನಲ್ಲಿ ಚಿನ್ನ
ಗೆದ್ದಿದ್ದಾರೆ.

ನಾರಾಯಣ ಪಬ್ಲಿಕ್‌ ಶಾಲೆಯಲ್ಲಿ ಓದುತ್ತಿರುವ ಜೀವಾಂಶ್‌ ಮಂಡ್ಯದಲ್ಲಿ ನಡೆದ ರಾಜ್ಯಮಟ್ಟದ ಈಜುಸ್ಪರ್ಧೆಯಲ್ಲಿ ‌6 ಪದಕ ಗೆದ್ದು ದಕ್ಷಿಣ ವಲಯಕ್ಕೆ ಆಯ್ಕೆಯಾಗಿದ್ದರು. ಎಸ್‌.ತಾನ್ಯಾ ಕೂಡ ಇದೇ ಕೂಟದಲ್ಲಿ 6 ಪದಕಗಳಿಗೆ ಕೊರಳೊಡ್ಡಿದ್ದರು.

ನಮಗಿನ್ನೇನು ಬೇಕು: ‘ನಮಗೆ ಈಜು ಬರುತ್ತಿರಲಿಲ್ಲ. ಮಗಳಾದರೂ ಕಲಿಯಲೆಂದು ಸೇರಿಸಿದೆ. ಅದರಲ್ಲೇ ಸಾಧನೆ ತೋರಿದ್ದಾಳೆ. ದಕ್ಷಿಣ ವಲಯ ಈಜು ಚಾಂಪಿಯನ್‌ಷಿಪ್‌ನಲ್ಲಿ 4 ಪದಕ ಗೆದ್ದಿದ್ದಾಳೆ. ನಮಗಿನ್ನೇನು ಬೇಕು’ ಎಂದು ತಾನ್ಯಾ ಪೋಷಕರಾದ ಎಸ್‌.ಪಿ.ಷಡಕ್ಷರಿ ಹಾಗೂ ಶ್ವೇತಾ ‘ಪ್ರಜಾವಾಣಿ’ ಜೊತೆ ಸಂತಸ ಹಂಚಿಕೊಂಡರು.

9 ತಿಂಗಳಲ್ಲಿ 183 ಪದಕ!

ನಾಲ್ವಡಿ ಕೃಷ್ಣರಾಜ ಒಡೆಯರ್‌ ಈಜುಕೊಳದಲ್ಲಿನ ‘ಗ್ಲೋಬಲ್‌ ಸ್ಪೋರ್ಟ್ಸ್‌ ಅಸೋಸಿಯೇಷನ್‌’ನಲ್ಲಿ ಅಭ್ಯಾಸ ನಡೆಸಿರುವ ಸ್ಪರ್ಧಿಗಳು 2022ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ವಿವಿಧ ಈಜು ಸ್ಪರ್ಧೆಗಳಲ್ಲಿ ಭಾಗವಹಿಸಿ 69 ಚಿನ್ನ, 62 ಬೆಳ್ಳಿ, 52 ಕಂಚು ಸೇರಿದಂತೆ 183 ಪದಕ ಗೆದ್ದಿದ್ದಾರೆ.

‘ಸಂಸ್ಥೆಯ ಮಕ್ಕಳ ಪರಿಶ್ರಮ ಹಾಗೂ ಪೋಷಕರ ಪ್ರೋತ್ಸಾಹ ದೊಡ್ಡದು. ಎಸ್‌.ತಾನ್ಯಾ, ಜೀವಾಂಶ್‌, ಎಚ್‌.ಎನ್‌.ನೇಹಸಿರಿ ಹಾಗೂ ನಿತೇಶ್‌ ಸಿಂಗ್‌ ರಾಜ್ಯವನ್ನು ಪ್ರತಿನಿಧಿಸಿದ್ದಾರೆ’ ಎಂದು ಮುಖ್ಯ ಕೋಚ್‌ ಪವನ್‌ ಕುಮಾರ್‌ ಹೇಳಿದರು.

‘ಮೈಸೂರಿನ ಸ್ಪರ್ಧಿಗಳು ಏಷ್ಯನ್‌ ಗೇಮ್ಸ್‌, ಕಾಮನ್‌ವೆಲ್ತ್‌ ಹಾಗೂ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸುವಂತಾಗಬೇಕು. ಅದೇ ಕನಸು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.