ADVERTISEMENT

ಈಜು: ಕರ್ನಾಟಕಕ್ಕೆ 7 ಚಿನ್ನ

​ಪ್ರಜಾವಾಣಿ ವಾರ್ತೆ
Published 28 ಜೂನ್ 2019, 18:17 IST
Last Updated 28 ಜೂನ್ 2019, 18:17 IST

ಬೆಂಗಳೂರು: ರಾಜ್ಯದ ಈಜು ಸ್ಪರ್ಧಿ ಗಳು, ರಾಜಕೋಟ್‌ನಲ್ಲಿ ನಡೆಯುತ್ತಿರುವ 36ನೇ ಸಬ್‌ ಜೂನಿಯರ್‌ ಹಾಗೂ 46ನೇ ಜೂನಿಯರ್‌ ಈಜು ಚಾಂಪಿಯನ್‌ಷಿಪ್‌ನ ಮೂರನೇ ದಿನ ಏಳು ಚಿನ್ನದ ಪದಕಗಳನ್ನು ಗೆದ್ದುಕೊಂಡರು. ಮೂರನೇ ದಿನ ಐದು ಕೂಟ ದಾಖಲೆಗಳಾದವು.

ರಾಜ್ಯದ ಖುಷಿ ದಿನೇಶ್‌ ಉತ್ತಮ ಸಾಧನೆ ಮುಂದುವರಿಸಿ ಬಾಲಕಿಯರ 1,500 ಮೀ. ಫ್ರೀಸ್ಟೈಲ್‌ (ಗುಂಪು 1) ಸ್ಪರ್ಧೆಯನ್ನು 18ನಿ.18.45 ಸೆ.ಗಳಲ್ಲಿ ಕ್ರಮಿಸಿ ಚಿನ್ನ ಗೆದ್ದರು.

ದಿವ್ಯಾ ಘೋಷ್‌ (18:45.48) ಮೂರನೇ ಸ್ಥಾನ ಪಡೆದರು.‌ ಬಾಲಕರ ವಿಭಾಗದ ಇದೇ ಸ್ಪರ್ಧೆಯಲ್ಲಿ ಕರ್ನಾಟಕದ ಅನೀಶ್‌ ಎಸ್‌.ಗೌಡ ಎರಡನೇ ಸ್ಥಾನ ಪಡೆದರು.

ADVERTISEMENT

ಬಾಲಕರ 200 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ (ಗುಂಪು 1) ಕರ್ನಾಟಕದ ತನಿಶ್‌ ಜಾರ್ಜ್‌ ಮ್ಯಾಥ್ಯೂ 2ನಿ.04.07 ಸೆ. ಸಾಧನೆಯೊಡನೆ ಚಿನ್ನದ ಪದಕ ಗೆದ್ದುಕೊಂಡರು.

ಇದೇ ವಿಭಾಗದ ಬಾಲಕಿಯರ ಸ್ಪರ್ಧೆಯಲ್ಲಿ ಸಾಚಿ ಜಿ. ಎರಡನೇ ಸ್ಥಾನ ಪಡೆದರು.

ಬಾಲಕರ 200 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ (2ನೇ ಗುಂಪು) ವಿಧಿತ್‌ ಎಸ್‌.ಶಂಕರ್‌ 2ನಿ.32.65 ಸೆ.ಗಳೊಡನೆ ಮೊದಲ ಸ್ಥಾನ ಪಡೆದರೆ, ಅದಿತ್‌ ಸ್ಮರಣ್‌ ಒಲೆಟ್ಟಿ ಮೂರನೇ ಸ್ಥಾನ ಪಡೆದರು. ಇದೇ ವಿಭಾಗದ ಬಾಲಕಿಯರ ಸ್ಪರ್ಧೆಯಲ್ಲಿ ಸಾನ್ವಿ ಎಸ್‌.ರಾವ್‌ ಬೆಳ್ಳಿಯ ಪದಕ ಪಡೆದರು.

ಬಾಲಕಿಯರ 50 ಮೀ. ಬ್ಯಾಕ್‌ಸ್ಟ್ರೋಕ್‌ (1ನೇ ಗುಂಪು) ಸ್ಪರ್ಧೆಯಲ್ಲಿ ಸುವರ್ಣಾ ಸಿ.ಭಾಸ್ಕರ್‌ (31.06ಸೆ.) ಅಗ್ರಸ್ಥಾನ ಪಡೆದರು. ಎರಡನೇ ಗುಂಪಿನ ಇದೇ ಸ್ಪರ್ಧೆಯಲ್ಲಿ ರಿಧಿಮಾ ವಿರೇಂದ್ರಕುಮಾರ್‌ 31.43 ಸೆ. ಅವಧಿಯೊಡನೆ ಮೊದಲ ಸ್ಥಾನ, ನೀನಾ ವೆಂಕಟೇಶ್ 31.84 ಸೆ. ಅವಧಿಯೊಡನೆ ಎರಡನೇ ಸ್ಥಾನ ಪಡೆದರು.

50 ಮೀ. ಬ್ರೆಸ್ಟ್‌ ಸ್ಟ್ರೋಕ್‌ ಸ್ಪರ್ಧೆಯಲ್ಲಿ (1ನೇ ಗುಂಪು) ಆರುಷಿ ಮಂಜುನಾಥ್ (35.59) ಚಿನ್ನದ ಪದಕ ಪಡೆದರು.

ಕೂಟ ದಾಖಲೆ: ಕರ್ನಾಟಕದ 4x100 ಮೀ. ಫ್ರೀಸ್ಟೈಲ್‌ ರಿಲೇ ತಂಡ ಜೂನಿಯರ್‌ ಬಾಲಕರ ವಿಭಾಗದಲ್ಲಿ ಕೂಟ ದಾಖಲೆ ಸ್ಥಾಪಿಸಿತು. ಸಂಜಯ್‌ ಸಿ.ಜೆ, ಸಂಭವ್‌ ಆರ್‌., ಎಸ್‌.ಹಿತೇಜ್‌ ಮಿತ್ತಲ್‌, ತನಿಶ್‌ ಜಾರ್ಜ್‌ ಮ್ಯಾಥ್ಯೂ ಅವರಿದ್ದ ತಂಡ 3ನಿ.37.69 ಸೆ.ಗಳಲ್ಲಿ ಅಂತರ ಕ್ರಮಿಸಿ 3.37.88 ಸೆ.ಗಳ ಹಳೆಯ ದಾಖಲೆ (ಮಹಾರಾಷ್ಟ್ರ, 2017) ದಾಖಲೆ ಮುಳುಗಿಸಿತು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡ ಎರಡನೇ ಸ್ಥಾನ (ಸ್ಮೃತಿ, ದಿವ್ಯಾ, ಇಂಚರಾ, ಖುಷಿ) ಪಡೆಯಿತು.

ಸಬ್‌ ಜೂನಿಯರ್‌ ವಿಭಾಗ: ಸಬ್‌ ಜೂನಿಯರ್‌ ವಿಭಾಗದ ಏಕೈಕ ಚಿನ್ನವನ್ನು 50 ಮೀ. ಫ್ರೀಸ್ಟೈಲ್‌ ಸ್ಪರ್ಧೆಯಲ್ಲಿ (4ನೇ ಗುಂಪು) ಕರ್ನಾಟಕದ ಧಿನಿಧಿ ಡಿ. 32.22 ಸೆ. ಸಾಧನೆಯೊಡನೆ ಮೊದಲಿಗರಾದರು.

100 ಮೀ. ಬಟರ್‌ಫ್ಲೈ (ಗುಂಪು 3) ವಿಭಾಗದಲ್ಲಿ ರೇಣುಕಾಚಾರ್ಯ ಎಚ್‌. ಎರಡನೇ, ಸ್ವರೂಪ್‌ ಎಸ್‌.ಧನುಚೆ ಮೂರನೇ ಸ್ಥಾನ ಪಡೆದರು. ಬಾಲಕಿಯರ ವಿಭಾಗದಲ್ಲಿ ಹಶಿಕಾ ಆರ್‌. ಎರಡನೇ, ಸಬಾ ಸುಹಾನಾ ಮೂರನೇ ಸ್ಥಾನ ಗಳಿಸಿದರು. ಬಾಲಕರ 50 ಮೀ. ಫ್ರೀಸ್ಟೈಲ್‌ (4ನೇ ಗುಂಪು) ಸ್ಪರ್ಧೆಯಲ್ಲಿ ಮೋನಿಷ್‌ ಪಿ.ವಿ. ಎರಡನೇ ಸ್ಥಾನ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.