ಬೆಂಗಳೂರು: ಕರ್ನಾಟಕದ ಬಾಲಕರ ಮತ್ತು ಬಾಲಕಿಯರ ತಂಡವು ಬಿಹಾರದ ಗಯಾದಲ್ಲಿ ಶುಕ್ರವಾರ ಮುಕ್ತಾಯಗೊಂಡ ಖೇಲೊ ಇಂಡಿಯಾ ಯೂತ್ ಗೇಮ್ಸ್‌ನ ಈಜು ಸ್ಪರ್ಧೆಯಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಿದವು.
ರಾಜ್ಯ ತಂಡವು ಈಜು ಸ್ಪರ್ಧೆಯಲ್ಲಿ 13 ಚಿನ್ನ, 17 ಬೆಳ್ಳಿ ಮತ್ತು 3 ಕಂಚಿನ ಪದಕ ಸೇರಿದಂತೆ ಒಟ್ಟು 33 ಪದಕಗಳನ್ನು ಗೆದ್ದುಕೊಂಡಿತು. ಮಹಾರಾಷ್ಟ್ರ ತಂಡ 7 ಚಿನ್ನ ಸೇರಿದಂತೆ 29 ಪದಕಗಳೊಂದಿಗೆ ಎರಡನೇ ಸ್ಥಾನ ಪಡೆಯಿತು.
ಬಾಲಕರ ವಿಭಾಗದಲ್ಲಿ ಕರ್ನಾಟಕ 136 ಅಂಕ ಗಳಿಸಿದರೆ, ಮಹಾರಾಷ್ಟ್ರ (65 ಅಂಕ) ಮತ್ತು ಆಂಧ್ರಪ್ರದೇಶ (64) ನಂತರ ಸ್ಥಾನ ಪಡೆಯಿತು. ಬಾಲಕಿಯರ ವಿಭಾಗದಲ್ಲಿ ಕರ್ನಾಟಕ ತಂಡವು 156 ಅಂಕಗಳೊಂದಿಗೆ ಅಗ್ರಸ್ಥಾನವನ್ನು ಮಹಾರಾಷ್ಟ್ರದೊಂದಿಗೆ ಹಂಚಿಕೊಂಡಿತು. ತಮಿಳುನಾಡು (60) ನಂತರದ ಸ್ಥಾನ ಗಳಿಸಿತು.
ಕರ್ನಾಟಕಕ್ಕೆ ರಿಲೆ ಚಿನ್ನ: ಕೂಟದ ಕೊನೆಯ ದಿನ ನಡೆದ ಬಾಲಕರ 4x100 ಫ್ರೀಸ್ಟೈಲ್ ರಿಲೆ ಸ್ಪರ್ಧೆಯಲ್ಲಿ ಕರ್ನಾಟಕ ತಂಡವು ಚಿನ್ನದ ಸಾಧನೆ ಮಾಡಿತು. ಅಲೆಸ್ಟರ್ ಸ್ಯಾಮ್ಯುಯೆಲ್ ರೇಗೊ, ಸೋಹಂ ಮೆಂಡಲ್, ಮೊನೀಶ್ ಪಿ.ವಿ, ಚಿಂತನ್ ಎಸ್. ಶೆಟ್ಟಿ ಅವರನ್ನು ಒಳಗೊಂಡ ತಂಡವು 3 ನಿಮಿಷ 37.21 ಸೆಕೆಂಡ್‌ಗಳಲ್ಲಿ ಗುರಿ ತಲುಪಿತು. ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರ ತಂಡಗಳು ಕ್ರಮವಾಗಿ ನಂತರದ ಸ್ಥಾನ ಪಡೆದರು.
ಅದಿತಿಗೆ ಸ್ವರ್ಣ: ರಾಜ್ಯದ ಅದಿತಿ ಎನ್. ಮುಲೈ ಬಾಲಕಿಯರ (18 ವರ್ಷದೊಳಗಿನವರ) 1500 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ 18 ನಿಮಿಷ 04.39 ಸೆಕೆಂಡ್‌ಗಳಲ್ಲಿ ಗುರಿ ಮುಟ್ಟಿ ಚಿನ್ನ ಗೆದ್ದರು. ಕರ್ನಾಟಕದ ಮತ್ತೊಬ್ಬ ಸ್ಪರ್ಧಿ ಶ್ರೀಚರಣಿ ತುಮು (18 ನಿ.19.29ಸೆ) ಬೆಳ್ಳಿ ಪದಕ ಗೆದ್ದರೆ, ಮಹಾರಾಷ್ಟ್ರದ ಅದಿತಿ ಸತೀಶ್ ಹೆಗ್ಡೆ (18 ನಿ.22.97ಸೆ) ಕಂಚಿನ ಪದಕ ತಮ್ಮದಾಗಿಸಿಕೊಂಡರು. ಅದಿತಿ ಸತೀಶ್ ಅವರಿಗೆ ಕೂಟದಲ್ಲಿ ಇದು ಏಳನೇ ಪದಕವಾಗಿದೆ.
ಬಾಲಕಿಯರ 50 ಮೀಟರ್ ಫ್ರೀಸ್ಟೈಲ್‌ನಲ್ಲಿ ಕರ್ನಾಟಕದ ರುತುಜಾ ಎಸ್. (27.12ಸೆ) ಚಿನ್ನದ ಸಾಧನೆ ಮಾಡಿದರು. ಮಹಾರಾಷ್ಟ್ರದ ಶ್ರೀಲೇಖಾ ಪರೀಕ್ ಮತ್ತು ಅಲೆಫಿಯಾ ಸಲೇಹ್ ಧನ್ಸುರ ಕ್ರಮವಾಗಿ ನಂತರದ ಸ್ಥಾನ ಪಡೆದರು. ಬಾಲಕರ 50 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಕರ್ನಾಟಕದ ಚಿಂತನ್ ಎಸ್. ಶೆಟ್ಟಿ (24.24ಸೆ) ಬೆಳ್ಳಿ ಪದಕ ಗೆದ್ದರು. ಹರಿಯಾಣದ ಅರ್ಜುನ್ ಸಿಂಗ್ (23.91ಸೆ) ಮತ್ತು ಹೀರ್ ಸುನಿಲ್ ಪಿತ್ರೋಡಾ (ಗುಜರಾತ್) ಕ್ರಮವಾಗಿ ಚಿನ್ನ ಮತ್ತು ಕಂಚು ಜಯಿಸಿದರು.
ಬಾಲಕಿಯರ 50 ಮೀಟರ್ ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ಕರ್ನಾಟಕದ ಮಾನವಿ ವರ್ಮಾ (35.23ಸೆ) ಮತ್ತು ವಿಹಿತಾ ನಯನಾ ಲೋಕನಾಥನ್ (35.48) ಕ್ರಮವಾಗಿ ಬೆಳ್ಳಿ ಮತ್ತು ಕಂಚು ಗೆದ್ದರು. ಮಹಾರಾಷ್ಟ್ರದ ಸನಯಾ ರೋಷನ್ ಶೆಟ್ಟಿ (34.67ಸೆ) ಸ್ವರ್ಣ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.