ADVERTISEMENT

ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌: ಪದಕ ಖಚಿತಪಡಿಸಿಕೊಂಡ ತನ್ವಿ

ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌: ಉನ್ನತಿ ಹೂಡಾಗೆ ನಿರಾಸೆ

ಪಿಟಿಐ
Published 17 ಅಕ್ಟೋಬರ್ 2025, 19:28 IST
Last Updated 17 ಅಕ್ಟೋಬರ್ 2025, 19:28 IST
ಭಾರತದ ತನ್ವಿ ಶರ್ಮಾ –ಪಿಟಿಐ ಚಿತ್ರ
ಭಾರತದ ತನ್ವಿ ಶರ್ಮಾ –ಪಿಟಿಐ ಚಿತ್ರ   

ಗುವಾಹಟಿ: ಉದಯೋನ್ಮುಖ ಆಟಗಾರ್ತಿ ತನ್ವಿ ಶರ್ಮಾ ಅವರು ಸೆಮಿಫೈನಲ್‌ ಪ್ರವೇಶಿಸುವ ಮೂಲಕ ಬಿಡಬ್ಲ್ಯುಎಫ್ ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಪದಕ ಖಚಿತಪಡಿಸಿ ಕೊಂಡರು. ಈ ಮೂಲಕ ಬಾಲಕಿಯರ ಸಿಂಗಲ್ಸ್‌ನಲ್ಲಿ 17 ವರ್ಷಗಳಲ್ಲಿ ಪದಕ ಜಯಿಸಿದ ಭಾರತದ ಮೊದಲ ಆಟಗಾರ್ತಿ ಎಂಬ ಹಿರಿಮೆಗೆ ಅವರು ಪಾತ್ರವಾದರು.

ಮೊದಲ ಗೇಮ್‌ನ ಹಿನ್ನಡೆಯಿಂದ ಅಮೋಘವಾಗಿ ಚೇತರಿಸಿಕೊಂಡ 16 ವರ್ಷದ ತನ್ವಿ ಕ್ವಾರ್ಟರ್‌ಫೈನಲ್‌ ಹಣಾಹಣಿಯಲ್ಲಿ 13-15, 15-9, 15-10ರಿಂದ ಜಪಾನ್‌ನ ಸಾಕಿ ಮಾಟ್ಸುಮೊಟೊ ಅವರನ್ನು ಸೋಲಿಸಿ ನಾಲ್ಕರ ಘಟ್ಟಕ್ಕೆ ಮುನ್ನಡೆದರು. ಈ ಟೂರ್ನಿಯಲ್ಲಿ ಸೆಮಿಫೈನಲ್‌ನಲ್ಲಿ ಸೋತವರಿಗೂ ಕಂಚಿನ ಪದಕ ಲಭಿಸುತ್ತದೆ. 

ರಾಷ್ಟ್ರೀಯ ಶ್ರೇಷ್ಠತಾ ಕೇಂದ್ರದಲ್ಲಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದ ಈ ಪಂದ್ಯವನ್ನು ಆತಿಥೇಯ ದೇಶದ ಆಟಗಾರ್ತಿ 47 ನಿಮಿಷದಲ್ಲಿ ಗೆದ್ದುಕೊಂಡರು. ಒತ್ತಡವನ್ನು ಮೆಟ್ಟಿನಿಂತ ಅಗ್ರ ಶ್ರೇಯಾಂಕದ ತನ್ವಿ ಕ್ರಾಸ್ ಕೋರ್ಟ್ ಸ್ಲೈಸ್ ಹಿಟ್‌ಗಳ ಮೂಲಕ ಎದುರಾಳಿಯನ್ನು ತಬ್ಬಿಬ್ಬುಗೊಳಿಸಿದರು. ಮುಂದಿನ ಸುತ್ತಿನಲ್ಲಿ ಅವರಿಗೆ ಚೀನಾದ ಲಿಯು ಸಿ ಯಾ ಎದುರಾಳಿಯಾಗಿದ್ದಾರೆ.

ADVERTISEMENT

2008ರ ಟೂರ್ನಿಯಲ್ಲಿ ಸೈನಾ ನೆಹ್ವಾಲ್ ಅವರು ಬಾಲಕಿಯರ ಸಿಂಗಲ್ಸ್‌ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ನಂತರ ಈ ವಿಭಾಗದಲ್ಲಿ ಯಾರೂ ಪದಕ ಗೆದ್ದಿರಲಿಲ್ಲ. ಸೈನಾ 2006ರಲ್ಲೂ ಬೆಳ್ಳಿ ಗೆದ್ದಿದ್ದರು. ಅದಕ್ಕೂ ಮುನ್ನ ಅಪರ್ಣಾ ಪೊಪಟ್ (1996ರಲ್ಲಿ ಬೆಳ್ಳಿ) ಭಾರತದ ಪರ ಮೊದಲ ಪದಕ ಜಯಿಸಿದ್ದರು. 

ಈ ವರ್ಷದ ಆರಂಭದಲ್ಲಿ ಬ್ಯಾಡ್ಮಿಂಟನ್ ಏಷ್ಯಾ ಜೂನಿಯರ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ತನ್ವಿ ಇಲ್ಲಿ ಉತ್ತಮ ಆರಂಭ ಪಡೆದರು. ಮೊದಲ ಗೇಮ್‌ನಲ್ಲಿ 10–6 ಮುನ್ನಡೆ ಹೊಂದಿದ್ದ ಅವರು ‌‌ಸುಲಭ ಗೆಲುವಿನ ಹಾದಿಯಲ್ಲಿದ್ದರು. ಆದರೆ, ಅವರು ಎಸಗಿದ ತಪ್ಪುಗಳ ಲಾಭ ಪಡೆದ ಜಪಾನ್‌ ಆಟಗಾರ್ತಿ ಮೊದಲ ಗೇಮ್‌ನಲ್ಲಿ ಮೇಲುಗೈ ಸಾಧಿಸಿದರು.

ಎರಡನೇ ಗೇಮ್‌ನಲ್ಲಿ ಪುಟಿದೆದ್ದ ತನ್ವಿ, ಸಮಬಲ ಸಾಧಿಸುವಲ್ಲಿ ಯಶಸ್ವಿಯಾದರು. ರೋಚಕವಾಗಿದ್ದ ನಿರ್ಣಾಯಕ ಗೇಮ್‌ನಲ್ಲಿ ತನ್ವಿ ಒಂದು ಹಂತದಲ್ಲಿ 5–8 ಹಿನ್ನಡೆಯಲ್ಲಿದ್ದರು. ಅಮೋಘವಾಗಿ ಚೇತರಿಸಿಕೊಂಡು ಗೆಲುವು ಸಾಧಿಸಿದರು. 

‘ಮಾಟ್ಸುಮೊಟೊ ಅವರ ರ‍್ಯಾಲಿಯಲ್ಲಿ ವೇಗ ಮತ್ತು ಮಂದಗತಿ ಇದ್ದುದರಿಂದ ಅದನ್ನು ಎದುರಿಸುವುದು ಕಷ್ಟ. ಆದ್ದರಿಂದ, ನಾನು ಆಕ್ರಮಣಕಾರಿಯಾಗಿ ಆಡಿ ಯಶಸ್ವಿಯಾದೆ. ಪದಕ ಖಚಿತವಾಗಿರುವುದಕ್ಕೆ ಸಂತೋಷವಾಗಿದೆ’ ಎಂದು ತನ್ವಿ ಹೇಳಿದರು.

ಹೂಡಾಗೆ ನಿರಾಸೆ: ಭಾರತದ ಭರವಸೆಯ ಮತ್ತೊಬ್ಬ ಆಟಗಾರ್ತಿ, ಎಂಟನೇ ಶ್ರೇಯಾಂಕದ ಉನ್ನತಿ ಹೂಡಾ ನಿರಾಸೆ ಮೂಡಿಸಿದರು. 2022ರ ಒಡಿಶಾ ಓಪನ್‌ನಲ್ಲಿ ಸೂಪರ್ 100 ಪ್ರಶಸ್ತಿ ಗೆದ್ದಿದ್ದ ಭಾರತದ ಅತಿ ಕಿರಿಯ ಆಟಗಾರ್ತಿ ಹೂಡಾ ಎಂಟರ ಘಟ್ಟದಲ್ಲಿ ಹೊರಬಿದ್ದರು. 32 ನಿಮಿಷಗಳ ಹಣಾಹಣಿಯಲ್ಲಿ ಅವರು 12-15 13-15ರಲ್ಲಿ ನೇರ ಗೇಮ್‌ಗಳಿಂದ ಥಾಯ್ಲೆಂಡ್‌ನ ಅನ್ಯಪತ್ ಫಿಚಿಟ್‌ಫೋನ್ ಅವರಿಗೆ ಮಣಿದರು. 

ಬಾಲಕರ ಸಿಂಗಲ್ಸ್ ಕ್ವಾರ್ಟರ್ ಫೈನಲ್‌ನಲ್ಲಿ ಜ್ಞಾನ ದತ್ತು 15-11, 15-13ರಿಂದ ಮೂರನೇ ಶ್ರೇಯಾಂಕದ ಲಿಯು ಯಾಂಗ್ ಮಿಂಗ್ (ಚೀನಾ) ಅವರಿಗೆ ಸೋತರು. ಮಿಶ್ರ ಡಬಲ್ಸ್‌ನಲ್ಲಿ ಭಾರತದ ಭವ್ಯಾ ಛಾಬ್ರಾ ಮತ್ತು ವಿಶಾಖ ಟೊಪ್ಪೊ ಜೋಡಿಯು ಕ್ವಾರ್ಟರ್‌ ಫೈನಲ್‌ನಲ್ಲಿ 9-15, 7-15ರಿಂದ ತೈವಾನ್‌ನ ಜೋಡಿಯಾದ ಹಂಗ್ ಬಿಂಗ್ ಫೂ ಮತ್ತು ಚೌ ಯುನ್ ಆನ್ ವಿರುದ್ಧ ಸೋತು, ಅಭಿಯಾನ ಮುಗಿಸಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.