ADVERTISEMENT

ಸೈಯ್ಯದ್ ಮೋದಿ ಬ್ಯಾಡ್ಮಿಂಟನ್: ಒಕುಹಾರಾಗೆ ಆಘಾತ ನೀಡಿದ ತನ್ವಿ

ಮನರಾಜ್‌ಗೆ ಮಣಿದ ಪ್ರಣಯ್

ಪಿಟಿಐ
Published 27 ನವೆಂಬರ್ 2025, 15:41 IST
Last Updated 27 ನವೆಂಬರ್ 2025, 15:41 IST
<div class="paragraphs"><p>ತನ್ವಿ ಶರ್ಮಾ ಅವರು ಶರ್ಟ್ ಹಿಂತಿರುಗಿಸಲು ಯತ್ನಿಸಿದರು. </p></div>

ತನ್ವಿ ಶರ್ಮಾ ಅವರು ಶರ್ಟ್ ಹಿಂತಿರುಗಿಸಲು ಯತ್ನಿಸಿದರು.

   

ಪಿಟಿಐ ಚಿತ್ರ

ಲಖನೌ: ವಿಶ್ವ ಜೂನಿಯರ್ ಚಾಂಪಿಯನ್‌ಷಿಪ್‌ ಬೆಳ್ಳಿ ವಿಜೇತೆ ತನ್ವಿ ಶರ್ಮಾ ಅವರು ಸೈಯ್ಯದ್ ಮೋದಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನ ಎರಡನೇ ಸುತ್ತಿನಲ್ಲಿ ಮಾಜಿ ವಿಶ್ವ ಚಾಂಪಿಯನ್‌ ನೊಝೊಮಿ ಒಕುಹಾರ ಅವರಿಗೆ ಸೋಲಿನ ಆಘಾತ ನೀಡಿ ಗುರುವಾರ ಕ್ವಾರ್ಟರ್‌ಫೈನಲ್‌ಗೆ ಮುನ್ನಡೆದರು.

ADVERTISEMENT

ಪುರುಷರ ಸಿಂಗಲ್ಸ್‌ ಪ್ರಿಕ್ವಾರ್ಟರ್‌ಫೈನಲ್‌ನಲ್ಲಿ ಮನರಾಜ್ ಸಿಂಗ್ ಅವರು ಅನುಭವಿ ಎಚ್‌.ಎಸ್‌. ಪ್ರಣಯ್‌ ಅವರ ನಿರ್ಗಮನಕ್ಕೆ ಕಾರಣರಾದರು.

16 ವರ್ಷ ವಯಸ್ಸಿನ ತನ್ವಿ 13–21, 21–16, 21–19 ರಿಂದ ಎರಡನೇ ಶ್ರೇಯಾಂಕದ ಒಕುಹಾರ ಅವರನ್ನು 59 ನಿಮಿಷಗಳ ಹೋರಾಟದಲ್ಲಿ ಹಿಮ್ಮೆಟ್ಟಿಸಿ ಗಮನ ಸೆಳೆದರು. 

ಅಗ್ರ ಶ್ರೇಯಾಂಕದ ಉನ್ನತಿ ಹೂಡ ಕೂಡ ಎಂಟರ ಘಟ್ಟಕ್ಕೆ ಮುನ್ನಡೆದರು. ಅವರು 21–15, 21–10 ರಿಂದ ಸ್ವದೇಶದ ತಸ್ನಿಮ್ ಮೀರ್ ಅವರನ್ನು ಸೋಲಿಸಿದರು. ಉನ್ನತಿ ಕ್ವಾರ್ಟರ್‌ಫೈನಲ್‌ನಲ್ಲಿ ಏಳನೇ ಶ್ರೇಯಾಂಕದ ರಕ್ಷಿತಾಶ್ರೀ ಸಂತೋಷ್ ರಾಮರಾಜ್ ಅವರನ್ನು ಎದುರಿಸಲಿದ್ದಾರೆ.

19 ವರ್ಷದ ಮನರಾಜ್ ಅತ್ಯಮೋಘ ಆಟವಾಡಿ, 2023ರ ವಿಶ್ವ ಚಾಂಪಿಯನ್‌ಷಿಪ್‌ನ ಕಂಚಿನ ಪದಕ ವಿಜೇತ ಪ್ರಣಯ್ ಅವರಿಗೆ 21–15, 21–18 ರಿಂದ ಆಘಾತ ನೀಡಿದರು. ಅದೂ ಕೇವಲ 43 ನಿಮಿಷಗಳಲ್ಲಿ. ಮನ್‌ರಾಜ್ ಈ ವರ್ಷದ ಆರಂಭದಲ್ಲಿ ಯುಗಾಡಾ ಇಂಟರ್‌ನ್ಯಾಷನಲ್ ಚಾಲೆಂಜ್ ಮತ್ತು ಇರಾನ್‌ ಫಜರ್ ಅಂತರರಾಷ್ಟ್ರೀಯ ಚಾಲೆಂಜ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದರು.

ಕನ್ನಡಿಗ ಮಿಥುನ್ ಮಂಜುನಾಥ್, ಎರಡನೇ ಸುತ್ತಿನ ಇನ್ನೊಂದು ಪಂದ್ಯದಲ್ಲಿ ಆರನೇ ಶ್ರೇಯಾಂಕದ ತರುಣ್ ಮನ್ನೆಪಲ್ಲಿ ಅವರನ್ನು 21–16, 17–21, 21–17 ರಿಂದ ಸೋಲಿಸಿದರು. ಮಿಥುನ್ ಎಂಟರ ಘಟ್ಟದಲ್ಲಿ ಮನರಾಜ್ ಅವರನ್ನು ಎದುರಿಸಲಿದ್ದಾರೆ.

ವಿಶ್ವದ ಮಾಜಿ ನಂಬರ್ ವನ್ ಆಟಗಾರ ಕಿದಂಬಿ ಶ್ರೀಕಾಂತ್‌ 21–6, 21–16 ರಿಂದ ಸನೀತ್‌ ದಯಾನಂದ ಅವರನ್ನು ನಿರಾಯಾಸವಾಗಿ ಸೋಲಿಸಿದರು. ಅವರ ಮುಂದಿನ ಎದುರಾಳಿ ಪ್ರಿಯಾಂಶು ರಾಜಾವತ್. ಗಾಯದಿಂದ ಚೇತರಿಸಿರುವ ಪ್ರಿಯಾಂಶು 21–16, 10–21, 21–12 ರಿಂದ ಕರ್ನಾಟಕದವರಾದ  ಬಿ.ಎಂ.ರಾಹುಲ್ ಭಾರದ್ವಾಜ್ ಅವರನ್ನು ಹಿಮ್ಮಟ್ಟಿಸಿದರು.

ಭಾರತದ ಕಿರಣ್ ಜಾರ್ಜ್, ಅಲಾಪ್‌ ಮಿಶ್ರಾ, ಸಿದ್ಧಾರ್ಥ ಗುಪ್ತಾ ಎರಡನೇ ಸುತ್ತಿನಲ್ಲಿ ಹೊರಬಿದ್ದರು. ಮಹಿಳೆಯರ ವಿಭಾಗದಲ್ಲಿ ತಾನ್ಯಾ ಹೇಮಂತ್‌, ಅನುಪಮಾ ಉಪಾಧ್ಯಾಯ ಸಹ ಸವಾಲು ಮುಗಿಸಿದರು.

ಇಶಾರಾಣಿ ಬರೂವ 21–15, 21–8 ರಿಂದ ಆರನೇ ಶ್ರೇಯಾಂಕದ ಬುಹ್ರೋವಾ ಅವರನ್ನು ಸೋಲಿಸಿ ಎಂಟರಘಟ್ಟ ತಲುಪಿದರು. ಅವರ ಮುಂದಿನ ಪ್ರತಿಸ್ಪರ್ಧಿ ನಾಲ್ಕನೇ ಶ್ರೇಯಾಂಕದ ನೆಸ್ಲಿಹಾನ್ ಅರಿನ್ (ಟರ್ಕಿ).

ತನ್ವಿ ಶರ್ಮಾ ಪಿಟಿಐ ಚಿತ್ರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.