ADVERTISEMENT

ಏಷ್ಯಾ ಜೂನಿಯರ್ ಬ್ಯಾಡ್ಮಿಂಟನ್: ವೆನ್ನಲಾ, ತನ್ವಿಗೆ ಕಂಚು

ಪಿಟಿಐ
Published 26 ಜುಲೈ 2025, 13:39 IST
Last Updated 26 ಜುಲೈ 2025, 13:39 IST
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ವೆನ್ನಲಾ ಕಲಗೂಟ್ಲಾ
ಭಾರತದ ಬ್ಯಾಡ್ಮಿಂಟನ್ ಆಟಗಾರ್ತಿ ವೆನ್ನಲಾ ಕಲಗೂಟ್ಲಾ    

ಸೋಲೊ, ಇಂಡೊನೇಷ್ಯಾ: ಉದಯೋನ್ಮುಖ ಬ್ಯಾಡ್ಮಿಂಟನ್  ಆಟಗಾರ್ತಿಯರಾದ ತನ್ವಿ ಶರ್ಮಾ ಮತ್ತು ವೆನ್ನಲಾ ಕಲಗೂಟ್ಲಾ ಅವರು ಏಷ್ಯಾ ಜೂನಿಯರ್ ವೈಯಕ್ತಿಕ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಕಂಚಿನ ಪದಕ ಗಳಿಸಿದರು.

ಭಾರತದ ಬ್ಯಾಡ್ಮಿಂಟನ್ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ಆಟಗಾರ್ತಿಯರು ಒಂದೇ ಆವೃತ್ತಿಯಲ್ಲಿ ತಲಾ ಒಂದು ಪದಕ ಗೆದ್ದು ವಿಜಯ ವೇದಿಕೆಯಲ್ಲಿ ನಿಂತ ಸಾಧನೆ ಮಾಡಿದರು. ಉಭಯ ಆಟಗಾರ್ತಿಯರು ಸೆಮಿಫೈನಲ್‌ಗಳನ್ನು ಪ್ರವೇಶಿಸಿದ್ದರು. 

ನಾಲ್ಕರ ಸುತ್ತಿನ ಮೊದಲ ಪಂದ್ಯದಲ್ಲಿ ವೆನ್ನಲಾ 15–21, 18–21ರಿಂದ ಚೀನಾದ ಲಿಯು ಸಿ ಯಾ ವಿರುದ್ಧ ಸೋತರು. 37 ನಿಮಿಷ ನಡೆದ ಈ ಪಂದ್ಯದಲ್ಲಿ ವೆನ್ನಲಾ ಅವರು ಎದುರಾಳಿಗೆ ಕಠಿಣ ಪೈಪೋಟಿಯೊಡ್ಡಿದರು. ಆದರೆ ಚೀನಾದ ಆಟಗಾರ್ತಿ ಸವಾಲು ಮೀರಿ ನಿಂತರು. 

ADVERTISEMENT

ಇನ್ನೊಂದು ಪಂದ್ಯದಲ್ಲಿ ತನ್ವಿ ಶರ್ಮಾ 13–21, 14–21ರಿಂದ ಎಂಟನೇ ಶ್ರೇಯಾಂಕದ ಯಿನ್ ಯೀ ಕಿಂಗ್‌ ವಿರುದ್ಧ ಪರಾಭವಗೊಂಡರು.  ಈ ಪಂದ್ಯದ ಎರಡನೇ ಗೇಮ್‌ನಲ್ಲಿ ತನ್ವಿ ಅವರು ದಿಟ್ಟ ಪೈಪೋಟಿ ನೀಡಿದರು. ಆದರೆ 35 ನಿಮಿಷಗಳವರೆಗೆ ನಡೆದ ಈ ಪಂದ್ಯದಲ್ಲಿ ಚೀನಾ ಆಟಗಾರ್ತಿಯ ಚುರುಕಾದ ಕೌಶಲಗಳು ಗಮನ ಸೆಳೆದವು. ಸ್ಮ್ಯಾಷ್‌ ಗಳ ಮೂಲಕ ತನ್ವಿ ಅವರ ಹೋರಾಟಕ್ಕೆ ತಡೆಯೊಡ್ಡಿದರು.

ಈಚೆಗೆ ಅಮೆರಿಕ ಓಪನ್  ಸೂಪರ್ 300 ಬ್ಯಾಡ್ಮಿಂಟನ್‌ ಮಹಿಳಾ ಸಿಂಗಲ್ಸ್‌ನಲ್ಲಿ ತನ್ವಿ ರನ್ನರ್ ಅಪ್ ಆಗಿದ್ದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.