ADVERTISEMENT

ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್: ಅಬ್ದುಸತ್ತಾರೋವ್‌ಗೆ ಕಿರೀಟ

ಪಿಟಿಐ
Published 2 ಫೆಬ್ರುವರಿ 2026, 13:50 IST
Last Updated 2 ಫೆಬ್ರುವರಿ 2026, 13:50 IST
ಚೆಸ್
ಚೆಸ್   

ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್): ಉಜ್ಬೇಕಿಸ್ತಾನದ ಗ್ರ್ಯಾಂಡ್‌ಮಾಸ್ಟರ್ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರು 88ನೇ ಟಾಟಾ ಸ್ಟೀಲ್‌ ಮಾಸ್ಟರ್ಸ್‌ ಚೆಸ್‌ ಟೂರ್ನಿಯಲ್ಲಿ ಭಾನುವಾರ ಪ್ರಶಸ್ತಿ ಗೆದ್ದುಕೊಂಡರು. ನಾಲ್ಕನೇ ಬಾರಿ ಈ ಟೂರ್ನಿಯಲ್ಲಿ ಪಾಲ್ಗೊಂಡಿದ್ದ ಅವರು ಈ ಹಿಂದಿನ ಮೂರು ಯತ್ನಗಳಲ್ಲಿ ಸ್ವಲ್ಪದರಲ್ಲೇ ಪ್ರಶಸ್ತಿ ವಂಚಿತರಾಗಿದ್ದರು.

ಚೆಸ್‌ನ ವಿಂಬಲ್ಡನ್ ಎನಿಸಿರುವ ಈ ಟೂರ್ನಿಯಲ್ಲಿ 14 ಆಟಗಾರರು ಭಾಗವಹಿಸಿದ್ದು, ಉಜ್ಬೇಕ್ ಆಟಗಾರ 13 ಸುತ್ತುಗಳಿಂದ 9 ಅಂಕ ಸಂಗ್ರಹಿಸಿದರು. ಅವರು ಕೊನೆಯ ಸುತ್ತಿನಲ್ಲಿ ಕಪ್ಪುಕಾಯಿಗಳಲ್ಲಿ ಆಡಿ ಭಾರತದ ಅರ್ಜುನ್ ಇರಿಗೇಶಿ (4.5) ಅವರನ್ನು ಮಣಿಸಿದರು.

ಉಜ್ಬೇಕಿಸ್ತಾನದ ಮತ್ತೊಬ್ಬ ಆಟಗಾರ ಹಾಗೂ ವಿಶ್ವಕಪ್ ವಿಜೇತ ಜಾವೊಖಿರ್‌ ಸಿಂದರೋವ್ (8.5) ಅವರು ಕೊನೆಯ ಸುತ್ತಿನಲ್ಲಿ ಝೆಕ್‌ ರಿಪಬ್ಲಿಕ್‌ನ ಥಾಯ್‌ ದೈ ವಾನ್ ನುಯೆನ್ (3) ಅವರನ್ನು ಸೋಲಿಸಿದರು.

ADVERTISEMENT

ಸ್ಥಳೀಯ ಆಟಗಾರ ಹಾಗೂ 2021ರ ವಿಜೇತ ಜೋರ್ಡನ್ ವಾನ್‌ ಫೊರೀಸ್ಟ್, ಅಮೆರಿಕದ ಹ್ಯಾನ್ಸ್ ನೀಮನ್ ಮತ್ತು ಜರ್ಮನಿಯ ವಿನ್ಸೆಂಟ್‌ ಕೀಮರ್ ಅವರು ತಲಾ 7.5 ಪಾಯಿಂಟ್ಸ್ ಪಡೆದರು. ಆದರೆ ಟೈಬ್ರೇಕ್ ಆಧಾರದಲ್ಲಿ ಕ್ರಮವಾಗಿ ಮೂರರಿಂದ ಐದರವರೆಗಿನ ಸ್ಥಾನಗಳನ್ನು ಪಡೆದರು.

ಭಾರತಕ್ಕೆ ನಿರಾಸೆ:

ಭಾರತದ ನಾಲ್ವರು ಆಟಗಾರರು ಕಣದಲ್ಲಿದ್ದರೂ ಯಾರಿಂದಲೂ ಉತ್ತಮ ಪ್ರದರ್ಶನ ಮೂಡಿಬರಲಿಲ್ಲ. ವಿಶ್ವ ಚಾಂಪಿಯನ್ ಗುಕೇಶ್ (6.5 ಪಾಯಿಂಟ್ಸ್‌), ಪ್ರಜ್ಞಾನಂದ (5.5), ಅರವಿಂದ ಚಿದಂಬರಮ್‌ (4.5) ಮತ್ತು ಅರ್ಜುನ್ ಇರಿಗೇಶಿ (4.5) ಅವರು ಕ್ರಮವಾಗಿ 10 ರಿಂದ 13ರವರೆಗಿನ ಸ್ಥಾನ ಗಳಿಸಿದರು.

ಪ್ರಜ್ಞಾನಂದ ಅಂತಿಮ ಸುತ್ತಿನಲ್ಲಿ ವಾನ್‌ ಫೋರಿಸ್ಟ್ ಅವರ ಜೊತೆ ಡ್ರಾ ಮಾಡಿಕೊಂಡರೆ, ರಷ್ಯದ ವ್ಲಾದಿಮಿರ್ ಫೆಡೊಸೀವ್ (6.5) ಅವರು ಅರವಿಂದ್ (4.5) ಅವರನ್ನು ಸೋಲಿಸಿದರು. ಗುಕೇಶ್ ಮತ್ತು ವಿನ್ಸೆಂಟ್ ಕೀಮರ್ ನಡುವಣ ಪಂದ್ಯ ಡ್ರಾ ಆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.