ADVERTISEMENT

ಟಾಟಾ ಸ್ಟೀಲ್ ಮಾಸ್ಟರ್ಸ್‌: ಡ್ರಾ ಪಂದ್ಯದಲ್ಲಿ ಅರ್ಜುನ್–ಗುಕೇಶ್

ಪಿಟಿಐ
Published 20 ಜನವರಿ 2026, 12:46 IST
Last Updated 20 ಜನವರಿ 2026, 12:46 IST
ಗುಕೇಶ್
ಗುಕೇಶ್   

ವಿಯ್ಕ್‌ ಆನ್‌ ಝೀ (ನೆದರ್ಲೆಂಡ್ಸ್‌): ಅಗ್ರ ಶ್ರೇಯಾಂಕದ ಅರ್ಜುನ್ ಇರಿಗೇಶಿ ಅವರು ಟಾಟಾ ಸ್ಟೀಲ್ ಮಾಸ್ಟರ್ಸ್ ಚೆಸ್ ಟೂರ್ನಿಯ ಮೂರನೇ ಸುತ್ತಿನಲ್ಲಿ ಸ್ವದೇಶದ ಡಿ.ಗುಕೇಶ್ ಅವರ ರಕ್ಷಣೆಯ ವ್ಯೂಹ ಭೇದಿಸಲು ಸಾಕಷ್ಟು ಶ್ರಮ ಹಾಕಿದರೂ ಸಾಧ್ಯವಾಗದೇ 34 ನಡೆಗಳ ನಂತರ ‘ಡ್ರಾ’ಕ್ಕೆ ಒಪ್ಪಿಕೊಂಡರು.

14 ಆಟಗಾರರು ಭಾಗವಹಿಸುತ್ತಿರುವ ಈ ಟೂರ್ನಿಯಲ್ಲಿ ಇನ್ನೂ ಹತ್ತು ಸುತ್ತುಗಳು ಬಾಕಿವುಳಿದಿವೆ.

ಸೋಮವಾರ ನಡೆದ ಈ ಪಂದ್ಯಕ್ಕೆ ವಿಶ್ವ ಚಾಂಪಿಯನ್ ಗುಕೇಶ್‌ (1.5 ಅಂಕ) ಸಾಕಷ್ಟು ಸಜ್ಜಾಗಿ ಬಂದಂತೆ ಕಾಣಿಸಿತು. ಅವರು ಬಿಳಿ ಕಾಯಿಗಳಲ್ಲಿ ಆಡಿದ ಇರಿಗೇಶಿ (2 ಅಂಕ) ಅವರ ದಾಳಿಯನ್ನು ಸಮರ್ಥವಾಗಿ ಎದುರಿಸಿದರು. ಎದುರಾಳಿ ಪಡೆ, ತಮ್ಮ ‘ಕಿಂಗ್‌’ ಸಮೀಪ ತಲುಪದಂತೆ ನೋಡಿಕೊಂಡರು.

ADVERTISEMENT

ಕ್ಯಾಂಡಿಡೇಟ್ಸ್‌ಗೆ ಅರ್ಹತೆ ಪಡೆದಿರುವ ಜರ್ಮನಿಯ ಮಥಾಯಸ್‌ ಬ್ಲೂಬಮ್ (2) ಅವರು ಸ್ವದೇಶದ ವಿನ್ಸೆಂಟ್ ಕೀಮರ್ (1) ಅವರನ್ನು 33 ನಡೆಗಳಲ್ಲಿ ಸೋಲಿಸಿದರು. 

ಮೊದಲೆರಡು ಪಂದ್ಯಗಳನ್ನು ಸೋತಿದ್ದ ಆರ್‌.ಪ್ರಜ್ಞಾನಂದ (0.5) ಅವರು ಉತ್ತಮವಾಗಿ ಆಡಿದರೂ, ಝೆಕ್‌ ರಿಪಬ್ಲಿಕ್‌ನ ಥಾಯ್ ದೈ ವಾನ್ ನೂಯೆನ್ (1.5) ಅವರ ಜೊತೆ 75 ನಡೆಗಳ ನಂತರ ಡ್ರಾಕ್ಕೆ ಸಹಿ ಮಾಡಬೇಕಾಯಿತು. 

ಕಣದಲ್ಲಿರುವ ಭಾರತದ ನಾಲ್ಕನೇ ಆಟಗಾರ ಅರವಿಂದ ಚಿದಂಬರಮ್ (1.5) ಅವರು ಅಬ್ದುಸತ್ತಾರೋವ್ (2) ಜೊತೆ ಡ್ರಾ ಮಾಡಿಕೊಂಡರು.

ಡಚ್‌ ಗ್ರ್ಯಾಂಡ್‌ಮಾಸ್ಟರ್‌ ಜೋರ್ಡನ್ ವಾನ್ ಫೋರಿಸ್ಟ್‌ (2) ಅವರು ಸ್ವದೇಶದ ಅನಿಶ್‌ ಗಿರಿ (0.5) ಅವರನ್ನು ಮಣಿಸಿದರು. ನೀಮನ್ (2) ಇನ್ನೊಂದು ಪಂದ್ಯದಲ್ಲಿ ಯಾಗಿಝ್ ಕಾನ್ ಎರ್ಡೋಗ್ಮಸ್ (1.5) ಜೊತೆ, ವಿಶ್ವಕಪ್ ಚಾಂಪಿಯನ್, ಉಜ್ಬೇಕಿಸ್ತಾನದ ಜಾವೊಖಿರ್ ಸಿಂದರೋವ್ (1.5), ಸ್ಲೊವೇನಿಯಾದ ವ್ಲಾದಿಮಿರ್ ಫೆಡೋಸಿವ್ (1.5) ಜೊತೆ ಡ್ರಾ ಮಾಡಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.