ADVERTISEMENT

ಕಿಶೋರ್‌, ಕಮಲಿಗೆ ‘ಡಬಲ್’ ಸಂಭ್ರಮ

ರಾಷ್ಟ್ರೀಯ ಓಪನ್ ಸರ್ಫಿಂಗ್‌ ಚಾಂಪಿಯನ್‌ಷಿಪ್‌: ಸುಗರ್ ಶಾಂತಿಗೆ ನಿರಾಸೆ; ಸಿಂಚನಾಗೆ ಮೂರನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 3 ಜೂನ್ 2023, 14:12 IST
Last Updated 3 ಜೂನ್ 2023, 14:12 IST
ಮಹಿಳೆ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಆದ ಕಮಲಿ ಮೂರ್ತಿ ಮತ್ತು ಪುರುಷರ ಹಾಗೂ ಬಾಲಕರ ವಿಭಾಗಗಳ ಪ್ರಶಸ್ತಿ ಗೆದ್ದ ಕಿಶೋರ್ ಕುಮಾರ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಮಹಿಳೆ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಆದ ಕಮಲಿ ಮೂರ್ತಿ ಮತ್ತು ಪುರುಷರ ಹಾಗೂ ಬಾಲಕರ ವಿಭಾಗಗಳ ಪ್ರಶಸ್ತಿ ಗೆದ್ದ ಕಿಶೋರ್ ಕುಮಾರ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್   

ಪ್ರಜಾವಾಣಿ ವಾರ್ತೆ

ಮಂಗಳೂರು: ತಮಿಳುನಾಡಿನ ‘ಬಾಲ ಪ್ರತಿಭೆ’ಗಳಾದ ಕಿಶೋರ್ ಕುಮಾರ್ ಮತ್ತು ಕಮಲಿ ಮೂರ್ತಿ ಅವರು ರಾಷ್ಟ್ರೀಯ ಓಪನ್ ಸರ್ಫಿಂಗ್ ಚಾಂಪಿಯನ್‌ಷಿಪ್‌ನಲ್ಲಿ ‘ಡಬಲ್’ ಸಾಧನೆ ಮಾಡಿದರು. ಮೂಲ್ಕಿಯ ಮಂತ್ರ ಸರ್ಫಿಂಗ್ ಕ್ಲಬ್ ಸಹಯೋಗದಲ್ಲಿ ಭಾರತ ಸರ್ಫಿಂಗ್ ಫೆಡರೇಷನ್ ಆಯೋಜಿಸಿದ್ದ ನಾಲ್ಕನೇ ಆವೃತ್ತಿಯ ಚಾಂಪಿಯನ್‌ಷಿಪ್‌ನ ಪುರುಷ ಮತ್ತು ಬಾಲಕರ ವಿಭಾಗದ ಪ್ರಶಸ್ತಿ ಕಿಶೋರ್ ಕುಮಾರ್ ಪಾಲಾದರೆ ಮಹಿಳೆಯರ ಮತ್ತು ಬಾಲಕಿಯರ ವಿಭಾಗದಲ್ಲಿ ಕಮಲಿ ಚಾಂಪಿಯನ್‌ ಆದರು.

ಸಸಿಹಿತ್ಲು ಕಡಲಿನಲ್ಲಿ ಶನಿವಾರ ಬೆಳಿಗ್ಗೆ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ಅನುಭವಿ ಸರ್ಫರ್‌ಗಳನ್ನು ಹಿಂದಿಕ್ಕಿದ ಕಿಶೋರ್ ಕುಮಾರ್ 15.67 ಸ್ಕೋರ್ ಕಲೆ ಹಾಕಿ ಟ್ರೋಫಿಯೊಂದಿಗೆ ₹ 50 ಸಾವಿರ ಮೊತ್ತ ತಮ್ಮದಾಗಿಸಿಕೊಂಡರು. 12.90 ಸ್ಕೋರ್‌ ಗಳಿಸಿ ರನ್ನರ್ ಅಪ್‌ ಆದ ಶ್ರೀಕಾಂತ್ ಡಿ ಅವರು ಟ್ರೋಫಿ ಮತ್ತು ₹ 30 ಸಾವಿರ ಮೊತ್ತ ಗಳಿಸಿದರು. ಸೂರ್ಯ ಪಿ 9.14 ಸ್ಕೋರ್‌ಗಳೊಂದಿಗೆ ₹ 20 ಸಾವಿರ ಗಳಿಸಿದರು. 

ADVERTISEMENT

ಮಹಿಳಾ ವಿಭಾಗದ ಚಾಂಪಿಯನ್ ಕಮಲಿ 12.07 ಸ್ಕೋರ್‌ ಗಳಿಸಿ ಟ್ರೋಫಿ ಮತ್ತು ₹ 30 ಸಾವಿರ ತಮ್ಮದಾಗಿಸಿಕೊಂಡರು. ಕಳೆದ ಬಾರಿಯ ಚಾಂಪಿಯನ್ ಸುಗರ್ ಶಾಂತಿ (10.40 ಸ್ಕೋರ್‌) ರನ್ನರ್ ಅಪ್ ಸ್ಥಾನಕ್ಕೆ ಸಮಾಧಾನಪಟ್ಟುಕೊಂಡರು. ಅವರು ₹ 20 ಸಾವಿರ ಗಳಿಸಿದರೆ ಮೂರನೇ ಸ್ಥಾನ ಗಳಿಸಿದ ಮಂಗಳೂರು ಸರ್ಫ್‌ ಕ್ಲಬ್‌ನ ಸಿಂಚನಾ ಗೌಡ (5.93) ಅವರಿಗೆ ₹ 10 ಸಾವಿರ ಲಭಿಸಿತು. ಬಾಲಕರ ವಿಭಾಗದಲ್ಲಿ ಮೊದಲ ಮೂರು ಬಹುಮಾನ ಗೆದ್ದ ಕಿಶೋರ್ ಕುಮಾರ್‌ (15.07), ತಮಿಳುನಾಡಿನ ತಯಿನ್ ಅರುಣ್‌ (8.97) ಮತ್ತು ಹರೀಶ್ ಪಿ (6.27) ಅವರಿಗೆ ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಮತ್ತು ₹ 10 ಸಾವಿರ ಲಭಿಸಿತು. ಬಾಲಕಿಯರ ವಿಭಾಗದ ಪ್ರಶಸ್ತಿ ವಿಜೇತೆ ಕಮಲಿ (16.84), ಮಂಗಳೂರಿನ ಅಕ್ವಾಟಿಕಾ ಇಂಡಿಕಾ ಸರ್ಫ್ ಸ್ಕೂಲ್‌ನ ತನಿಷ್ಕಾ ಮೆಂಡನ್‌ (6.43) ಮತ್ತು ಮಂಗಳೂರಿನ ಸಾನ್ವಿ ಹೆಗಡೆ (6) ಕ್ರಮವಾಗಿ ₹ 20 ಸಾವಿರ, ₹ 15 ಸಾವಿರ ಮತ್ತು ₹ 10 ಸಾವಿರ ಗಳಿಸಿದರು.

ಅಲೆಗಳ ಮೇಲೆ ರೋಮಾಂಚನ

ಕೊನೆಯ ದಿನವಾದ ಶನಿವಾರ ಪುರುಷರ ಸೆಮಿಫೈನಲ್‌ ಸ್ಪರ್ಧೆಯಲ್ಲಿ ಕಿಶೋರ್ ಕುಮಾರ್ ಮಿಂಚಿದರು. ಅಲೆಗಳ ಮೇಲೆ ರೋಮಾಂಚಕಾರಿ ಪ್ರದರ್ಶನ ನೀಡಿದ ಅವರು ಗರಿಷ್ಠ 14 ಸ್ಕೋರ್ ಗಳಿಸುವಲ್ಲಿ ಯಶಸ್ವಿಯಾದರು. ಶ್ರೀಕಾಂತ್‌, ಸೂರ್ಯ ಜೊತೆ ಸತೀಶ್ ಸರವಣನ್ ಕೂಡ ಫೈನಲ್‌ಗೆ ಭಡ್ತಿ ಪಡೆದರು. ಬಾಲಕಿಯರ ವಿಭಾಗದಲ್ಲಿ ಮಾತ್ರ ಸ್ಪರ್ಧಿಸಲು ನೋಂದಣಿ ಮಾಡಿಕೊಂಡಿದ್ದ ಕಮಲಿ ಅವರಿಗೆ ಇಲ್ಲಿಗೆ ಬಂದ ನಂತರ ಮಹಿಳಾ ವಿಭಾಗದಲ್ಲೂ ಕಾಣಿಸಿಕೊಳ್ಳಲು ಅವಕಾಶ ನೀಡಲಾಗಿತ್ತು. ಮೊದಲ ದಿನದಿಂದಲೇ ಅಮೋಘ ಸಾಮರ್ಥ್ಯ ತೋರಿದ್ದ ಅವರು ಫೈನಲ್‌ನಲ್ಲಿ ‘ವಾಟರ್ ಸ್ಪೋರ್ಟ್ಸ್’ ಪ್ರಿಯರ ಮನಮುದಗೊಳಿಸಿದರು. ಬಾಲಕಿಯರ ವಿಭಾಗದ ಫೈನಲ್‌ನಲ್ಲೂ ಮಿಂಚು ಹರಿಸಿದರು.

ಮಹಿಳೆ ಮತ್ತು ಬಾಲಕಿಯರ ವಿಭಾಗಗಳಲ್ಲಿ ಚಾಂಪಿಯನ್ ಆದ ಕಮಲಿ ಮೂರ್ತಿ ಅವರನ್ನು ಕೋಚ್ ಸಮಯ್ ಅವರು ಹೆಗಲ ಮೇಲೆ ಹೊತ್ತುಕೊಂಡು ಸಂಭ್ರಮಿಸಿದರು –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್
ಪುರುಷರ ವಿಭಾಗದ ಫೈನಲ್‌ನಲ್ಲಿ ಅಲೆಗಳನ್ನು ಸೀಳಿಕೊಂಡು ಮುನ್ನುಗ್ಗಿದ ಕಿಶೋರ್ ಕುಮಾರ್ –ಪ್ರಜಾವಾಣಿ ಚಿತ್ರ/ಫಕ್ರುದ್ದೀನ್ ಎಚ್

Quote - –ಒಂದೇ ದಿನ ಎರಡು ಪ್ರಶಸ್ತಿ ಗೆದ್ದುಕೊಂಡಿರುವುದು ಖುಷಿ ತಂದಿದೆ. ಈ ಸಾಧನೆಯು ನನ್ನ ಆತ್ಮಸ್ಥೈರ್ಯವನ್ನು ಹೆಚ್ಚಿಸಲು ನೆರವಾಗಲಿದೆ. ಇದೆಲ್ಲದರ ಹಿಂದೆ ಕೋಚ್‌ಗಳ ಪರಿಶ್ರಮ ಮತ್ತು ಕಾಳಜಿ ಇದೆ. ಅವರಿಗೆ ನಾನು ಅಭಾರಿ. ಕಿಶೋರ್ ಕುಮಾರ್ ಪ್ರಶಸ್ತಿ ಗೆದ್ದ ಸರ್ಫರ್‌

Quote - ಎರಡೂ ವಿಭಾಗಗಳಲ್ಲಿ ಸ್ಪರ್ಧಿಸಲು ಅವಕಾಶ ಸಿಕ್ಕಿರುವುದರಿಂದ ಈ ಸಾಧನೆ ಮಾಡಲು ಸಾಧ್ಯವಾಯಿತು. ಇಲ್ಲಿ ಗಳಿಸಿದ ಗೆಲುವು ಅತ್ಯಂತ ಸಂತಸ ನೀಡಿದ್ದು ಇದರ ನೆನಪು ಅನೇಕ ವರ್ಷಗಳ ಕಾಲ ಹಸಿರಾಗಿ ಇರಲಿದೆ. –ಕಮಲಿ ಮೂರ್ತಿ ಮಹಿಳೆ ಬಾಲಕಿಯರ ವಿಭಾಗದ ಚಾಂಪಿಯನ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.