ADVERTISEMENT

ಲಕ್ಷ್ಯನ ಬದ್ಧತೆಗೆ ಒಲಿದ ಯಶಸ್ಸು: ಮಗನ ತುಂಟತನ, ಬದ್ದತೆ ಬಿಚ್ಚಿಟ್ಟ ನಿರ್ಮಲಾ

​ಪ್ರಜಾವಾಣಿ ವಾರ್ತೆ
Published 22 ಮಾರ್ಚ್ 2022, 19:30 IST
Last Updated 22 ಮಾರ್ಚ್ 2022, 19:30 IST
ಲಕ್ಷ್ಯ ಸೇನ್ ಅವರೊಂದಿಗೆ ತಾಯಿ ನಿರ್ಮಲಾ ಮತ್ತು ತಂದೆ, ಕೋಚ್ ಡಿ.ಕೆ. ಸೇನ್ –ಪ್ರಜಾವಾಣಿ ಚಿತ್ರ
ಲಕ್ಷ್ಯ ಸೇನ್ ಅವರೊಂದಿಗೆ ತಾಯಿ ನಿರ್ಮಲಾ ಮತ್ತು ತಂದೆ, ಕೋಚ್ ಡಿ.ಕೆ. ಸೇನ್ –ಪ್ರಜಾವಾಣಿ ಚಿತ್ರ   

ಬೆಂಗಳೂರು: ‘ದೇಶಕ್ಕಾಗಿ ಮಗ ಪದಕ ಗೆದ್ದಿರುವ ಸಂತಸ ವ್ಯಕ್ತಪಡಿಸಲು ನನ್ನ ಬಳಿ ಪದಗಳ ಕೊರತೆ ಇದೆ. ಪ್ರತಿಭಾವಂತ ಮಗನ ಹೆಮ್ಮೆಯ ತಾಯಿಯಾಗಿರುವೆ ಎಂದಷ್ಟೇ ಹೇಳಬಲ್ಲೆ’–

ಆಲ್‌ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಬೆಳ್ಳಿ ಪದಕ ಜಯಿಸಿ ಬಂದ ಭಾರತದ ಲಕ್ಷ್ಯ ಸೇನ್ ಅವರ ತಾಯಿ ನಿರ್ಮಲಾ ನುಡಿಗಳಿವು. ಮಂಗಳವಾರ ಪ್ರಕಾಶ್ ಪಡುಕೋಣೆ ಮತ್ತು ರಾಹುಲ್ ದ್ರಾವಿಡ್ ಸ್ಪೋರ್ಟ್ಸ್ ಎಕ್ಸಲೆನ್ಸ್‌ ಸೆಂಟರ್‌ನಲ್ಲಿ ಮಾಧ್ಯಮ ಪ್ರತಿನಿಧಿಗಳ ಮುಂದೆ ಲಕ್ಷ್ಯ ತಮ್ಮ ಸಾಧನೆಯ ಹಾದಿಯನ್ನು ವಿವರಿಸುವಾಗ, ಅತಿಥಿಗಳ ಸಾಲಿನಲ್ಲಿ ಕುಳಿತಿದ್ದ ನಿರ್ಮಲಾ ಅವರ ಕಣ್ಣಾಲಿಗಳಲ್ಲಿ ಸಂತಸದ ಸೆಲೆ ನಿರಂತರವಾಗಿತ್ತು.

ಈ ಸಂದರ್ಭದಲ್ಲಿ ‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ಅವರು, ‘ನಾನು ಇಂಗ್ಲೆಂಡ್‌ಗೆ ಹೋಗಿರಲಿಲ್ಲ. ಇನ್ನೊಬ್ಬ ಮಗನ (ಚಿರಾಗ್) ಜೊತೆಗೆ ನಾನು ಇಲ್ಲಿಯೇ ಇದ್ದೆ. ಸರ್ (ಡಿ.ಕೆ. ಸೇನ್) ಹೋಗಿದ್ದರು. ಲಕ್ಷ್ಯ ಸಾಧನೆಯ ಹಿಂದೆ ತಂದೆಯ ಯೋಗದಾನ ಬಹಳಷ್ಟಿದೆ. ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಕೋಚ್ ಆಗಿದ್ದವರು. ಲಕ್ಷ್ಯ ಮತ್ತು ಚಿರಾಗ್‌ ಪ್ರತಿಭೆಯನ್ನು ಗುರುತಿಸಿದವರು ಅವರೇ. ಲಕ್ಷ್ಯನಿಗೆ 10 ವರ್ಷವಿದ್ದಾಗಲೇ ಪ್ರಕಾಶ್ ಪಡುಕೋಣೆ ಅಕಾಡೆಮಿಗೆ ಕರೆದುಕೊಂಡು ಬಂದರು. ಲಕ್ಷ್ಯ ಜೀವನದ ದಿಕ್ಕು ಬದಲಾಯಿತು’ ಎಂದರು.

ADVERTISEMENT

‘ಬಹುತೇಕ ಎಲ್ಲ ಮಕ್ಕಳಂತೆ ಲಕ್ಷ್ಯ ಕೂಡ ತುಂಟಾಟದಲ್ಲಿ ಮುಂದು. ನಾನು ಮಾಡಿದ ತಿನಿಸುಗಳೆಂದರೆ ಹೆಚ್ಚು ಪ್ರೀತಿ. ಆದರೆ ಬ್ಯಾಡ್ಮಿಂಟನ್ ತರಬೇತಿ ಆರಂಭವಾದಾಗಿನಿಂದ ಆಹಾರಪರಿಣತರು ನೀಡುವ ಮಾರ್ಗಸೂಚಿಯಂತೆಯೇ ಊಟೋಪಚಾರ ನಡೆಯತ್ತದೆ. ಅಪರೂಪಕ್ಕೊಮ್ಮೆ ಬಿಡುವಿದ್ದಾಗ ಮಾತ್ರ, ನಮ್ಮ ಸಾಂಪ್ರದಾಯಿಕ ತಿನಿಸುಗಳನ್ನು ಮಾಡಿಕೊಡುತ್ತೇನೆ. ಅಭ್ಯಾಸ, ಫಿಟ್‌ನೆಸ್‌, ಆಹಾರ ಪದ್ಧತಿಯಲ್ಲಿ ಯಾವತ್ತೂ ರಾಜೀ ಇಲ್ಲ. ಚಿಕ್ಕ ವಯಸ್ಸಿನಲ್ಲಿಯೇ ಲಕ್ಷ್ಯ ಇದೆಲ್ಲವನ್ನೂ ರೂಢಿಸಿಕೊಂಡು ಬೆಳೆದಿದ್ದರಿಂದ ಈಗ ಅದರ ಫಲ ಸಿಗುತ್ತಿದೆ’ ಎಂದು ನಿರ್ಮಲಾ ತಮ್ಮ ಮಗನ ಬದ್ಧತೆ ಮತ್ತು ಶಿಸ್ತನ್ನು ವಿವರಿಸುತ್ತಾರೆ.

‘ಅಪ್ಪನೇ ಮೊದಲ ಕೋಚ್‌’: ಕಳೆದ ಆರು ತಿಂಗಳಲ್ಲಿ ಅಂತರರಾಷ್ಟ್ರೀಯ ಬ್ಯಾಡ್ಮಿಂಟನ್ ಅಂಗಳದಲ್ಲಿ ಸುದ್ದಿ ಮಾಡುತ್ತಿರುವ ನವತರುಣ ಲಕ್ಷ್ಯಗೆ ಮೊದಲ ಕೋಚ್ ಅವರ ತಂದೆ ಡಿ.ಕೆ. ಸೇನ್ ಅವರೇ. ಅವರ ನಿರಂತರ ಮಾರ್ಗದರ್ಶನ ಮತ್ತು ಮೇಲ್ವಿಚಾರಣೆ ಲಕ್ಷ್ಯ ಸಾಧನೆಯ ಹಿಂದಿನ ಶಕ್ತಿಯಾಗಿದೆ.

‘ಟೂರ್ನಿಗಳ ನಡುವೆ ರಜೆ ಲಭಿಸಿದಾಗ ತಮ್ಮ ಮನೆಗಳಿಗೆ ತೆರಳುವ ಬಹಳಷ್ಟು ಕ್ರೀಡಾಪಟುಗಳು ಮತ್ತೆ ಟ್ರೇನಿಂಗ್‌ಗೆ ಮರಳುವಾಗ ದೇಹತೂಕ ಹೆಚ್ಚಿಸಿಕೊಂಡು ಬಂದಿರುವುದನ್ನು ನೋಡಿದ್ದೇನೆ. ಲಕ್ಷ್ಯ ಈ ಮಾತಿಗೆ ಅಪವಾದ. ಇಲ್ಲಿಂದ ತನ್ನ ತವರು ಉತ್ತರಾಖಂಡದ ಅಲ್ಮೋಡಾಕ್ಕೆ ಹೋಗಿ ರಜೆ ಕಳೆದು ಬಂದಾಗಲೂ ಫಿಟ್‌ನೆಸ್‌ನಲ್ಲಿ ವ್ಯತ್ಯಾಸವಿರುವುದಿಲ್ಲ. ಅಟದಲ್ಲೂ ಅದೇ ವೇಗ ಮತ್ತು ಸಾಮರ್ಥ್ಯ ಉಳಿಸಿಕೊಂಡಿರುತ್ತಾರೆ. ಇದಕ್ಕೆ ಕಾರಣ ಡಿ.ಕೆ. ಸೇನ್ ಮತ್ತು ನಿರ್ಮಲಾ ಅವರು’ ಎಂದು ಅನುಭವಿ ಕೋಚ್ ವಿಮಲ್ ಕುಮಾರ್ ಹೇಳಿದರು.

ಪ್ರತಿಷ್ಠಿತವಾದ ಟೂರ್ನಿಯ ಇತಿಹಾಸದಲ್ಲಿ ಪುರುಷರ ಸಿಂಗಲ್ಸ್‌ನಲ್ಲಿ ಫೈನಲ್ ತಲುಪಿದ ಮೂರನೇ ಆಟಗಾರ 20 ವರ್ಷದ ಲಕ್ಷ್ಯ ಸೇನ್.ಈ ಹಿಂದೆ ಪ್ರಕಾಶ್ ಪಡುಕೋಣೆ ಮತ್ತು ಪುಲ್ಲೇಲಾ ಗೋಪಿಚಂದ್ ಚಾಂಪಿಯನ್ ಆಗಿದ್ದರು. ಈ ಸಲ ಅಂತಿಮ ಪಂದ್ಯದಲ್ಲಿ ಡೆನ್ಮಾರ್ಕಿನ ವಿಕ್ಟರ್ ಅಕ್ಸೆಲ್ಸನ್ ವಿರುದ್ಧ ಲಕ್ಷ್ಯ ನಿರಾಶೆ ಅನುಭವಿಸಿದ್ದರು.

‘ಕೋವಿಡ್‌ನಿಂದಾಗಿ ಲಾಕ್‌ಡೌನ್ ಆದಾಗ ಫಿಟ್‌ನೆಸ್ ಸವಾಲಾಗಿತ್ತು. ಆದ್ದರಿಂದ ಮನೆಯೊಳಗೇ ವ್ಯಾಯಾಮ, ನೃತ್ಯ ಮಾಡುವುದನ್ನು ರೂಢಿಸಿಕೊಂಡೆವು. ನನ್ನ ಪತ್ನಿ ಯೋಗ ಟ್ರೇನರ್ ಕೂಡ ಹೌದು. ಯೋಗಾಸನ ಮತ್ತು ಧ್ಯಾನ ಹೇಳಿಕೊಡುತ್ತಿದ್ದರು. ಮನೆಯ ಪಡಸಾಲೆಯಲ್ಲಿ ನೆಟ್‌ ಕಟ್ಟಿದೆ. ಲಕ್ಷ್ಯ ಮತ್ತು ಚಿರಾಗ್ ಇಬ್ಬರೂ ಆಡುತ್ತಿದ್ದರು. ದೇಹ ಮತ್ತು ಮನಸ್ಸು ಉಲ್ಲಸಿತವಾಗಿಡಲು ಎಲ್ಲ ತಂತ್ರ ಅನುಸರಿಸಿದೆವು. ಲಕ್ಷ್ಯ ಸಾಧನೆಯ ಶ್ರೇಯವೆಲ್ಲವೂ ಪಿಪಿಬಿಎಗೆ ಸಲ್ಲಬೇಕು. ಆರ್ಥಿಕವಾಗಿ ನೆರವಾಗಿರುವ ಒಜಿಕ್ಯೂ (ಒಲಿಂಪಿಕ್ ಗೋಲ್ಡ್ ಕ್ವೆಸ್ಟ್)ಗೆ ಆಭಾರಿಯಾಗಿದ್ದೇವೆ’ ಎಂದು ಡಿ.ಕೆ. ಸೇನ್ ಹೇಳಿದರು.

ಕೋಚ್‌ ವಿಮಲ್ ಮೆಚ್ಚುಗೆ
ಚಿಕ್ಕ ವಯಸ್ಸಿನಲ್ಲಿಯೇ ಆಟವನ್ನು ಮತ್ತು ವಿದೇಶಗಳ ಅಗ್ರಶ್ರೇಯಾಂಕದ ಆಟಗಾರರನ್ನು ಎದುರಿಸುವ ತಂತ್ರಗಾರಿಕೆಯನ್ನು ರೂಢಿಸಿಕೊಂಡಿರುವುದು ನೋಡಿದರೆ ಸಂತಸವಾಗುತ್ತದೆ. ಆಲ್‌ ಇಂಗ್ಲೆಂಡ್ ಚಾಂಪಿಯನ್‌ಷಿಪ್ ಪಂದ್ಯದಲ್ಲಿ ಎದುರಾಳಿಯಿಂದ ಗೇಮ್‌ವೊಂದರಲ್ಲಿ ಏಳು ಅಂಕ ಹಿಂದಿದ್ದ ಒತ್ತಡದ ಸನ್ನಿವೇಶದಲ್ಲಿ ತಮ್ಮ ಆಕ್ರಮಣಕಾರಿ ಆಟವನ್ನು ಬದಲಿಸಿ ಕ್ರಾಸ್ ಶಾಟ್‌ಗಳನ್ನು ಪ್ರಯೋಗಿಸಿದ ರೀತಿ ಅಮೋಘವಾಗಿತ್ತು. ಇದು ಸುಲಭವಲ್ಲ ಎಂದು ಕೋಚ್ ವಿಮಲ್ ಕುಮಾರ್ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.