ADVERTISEMENT

ಗಮನಸೆಳೆದ ‘ಟೈಗರ್‌’ ಪುನರಾಗಮನ: ಚೇತರಿಸಿಕೊಂಡಿರುವ ಗಾಲ್ಫ್ ತಾರೆ ವುಡ್ಸ್

ಅಪಘಾತದ ಆಘಾತದಿಂದ ಚೇತರಿಸಿಕೊಂಡಿರುವ ಗಾಲ್ಫ್ ತಾರೆ ವುಡ್ಸ್

ಏಜೆನ್ಸೀಸ್
Published 12 ಏಪ್ರಿಲ್ 2022, 13:51 IST
Last Updated 12 ಏಪ್ರಿಲ್ 2022, 13:51 IST
ಟೈಗರ್ ವುಡ್ಸ್– ಎಎಫ್‌ಪಿ ಚಿತ್ರ
ಟೈಗರ್ ವುಡ್ಸ್– ಎಎಫ್‌ಪಿ ಚಿತ್ರ   

ಅಗಸ್ಟಾ: 14 ತಿಂಗಳ ಹಿಂದೆ ಭೀಕರ ಅಪಘಾತಕ್ಕೀಡಾಗಿದ್ದ ಅಮೆರಿಕದ ಗಾಲ್ಫ್ ತಾರೆ ಟೈಗರ್ ವುಡ್ಸ್, ಅಗಸ್ಟಾ ನ್ಯಾಷನಲ್ ಮಾಸ್ಟರ್ಸ್‌ ಟೂರ್ನಿಯ ಮೂಲಕ ಆಟದ ಅಂಗಣಕ್ಕೆ ಇಳಿದಿದ್ದರು.

ಟೂರ್ನಿಯ ಹಲವು ಆವೃತ್ತಿಗಳಲ್ಲಿ ಆಡಿದ್ದ ಅವರಿಗೆ ಅದು ಚಿರಪರಿಚಿತ ಅಂಗಣವಾಗಿದ್ದರೂ ಈ ಬಾರಿ ವಿಶೇಷವಾಗಿತ್ತು. ಇಲ್ಲಿ ಅವರು 47ನೇ ಸ್ಥಾನ ಪಡೆದರೂ ಹಲವರಿಗೆ ಸ್ಫೂರ್ತಿಯ ಸೆಲೆಯಾಗಿ ಮುಂದುವರಿದರು.

ಅಗಸ್ಟಾ ನ್ಯಾಷನಲ್ ಮೂಲಕ ಅವರ ಪುನರಾಗಮನ ಎಲ್ಲರ ಕಣ್ಮನ ಸೆಳೆದಿದೆ.

ADVERTISEMENT

ಇಲ್ಲಿ ಆರನೇ ಬಾರಿ ಪ್ರಶಸ್ತಿ ಗೆಲ್ಲುವ ಅವರ ಕನಸು ಸನಸಾಗದಿದ್ದರೂ ವೃತ್ತಿಜೀವನದ ತೃಪ್ತಿಕರ ಅನುಭವಗಳಲ್ಲಿ ಇದೂ ಒಂದೆಂದು ಅವರು ಹೇಳಿದ್ದಾರೆ.

‘ಶ್ರೇಷ್ಠ ಚಾಂಪಿಯನ್‌ಗಳು ಆಡಿದ ಅಂಗಣವಿದು. ಈ ಟೂರ್ನಿಯು ನಾನು ಮತ್ತು ನನ್ನ ಕುಟುಂಬಕ್ಕೆ ತುಂಬ ಅರ್ಥಪೂರ್ಣ ಎನಿಸಿದೆ‘ ಎಂದು ಅವರು ಹೇಳಿದ್ದಾರೆ.

2021ರ ಫೆಬ್ರುವರಿಯಲ್ಲಿ ಸಂಭವಿಸಿದ ಅಪಘಾತದ ಬಳಿಕ ವೈದ್ಯರು ವುಡ್ಸ್ ಅವರ ಬಲಗಾಲು ಕತ್ತರಿಸಬೇಕಾಗಬಹುದು ಎಂದು ಹೇಳಿದ್ದರು. ಆದರೆ ಅದನ್ನು ಉಳಿಸುವಲ್ಲಿ ಯಶಸ್ವಿಯಾಗಿದ್ದರು. ಆದರೆ ವುಡ್ಸ್ ಮೂರು ತಿಂಗಳ ಕಾಲ ಆಸ್ಪತ್ರೆಯ ಹಾಸಿಗೆಗೆ ಸೀಮಿತರಾಗಿದ್ದರು. ಮೂಳೆಗಳನ್ನು ಗಟ್ಟಿಯಾಗಿ ಹಿಡಿದಿಡುವ ಸ್ಕ್ರೂ ಮತ್ತು ರಾಡ್‌ಗಳು ಇನ್ನೂ ಅವರ ಕಾಲಿನಲ್ಲಿ ಇವೆ.

ಅಗಸ್ಟಾ ನ್ಯಾಷನಲ್‌ ಟೂರ್ನಿಯಲ್ಲಿ ಅವರು ಕುಂಟುತ್ತಲೇ ಆಡಿದ್ದು ಹೆಚ್ಚು ಗಮನ ಸೆಳೆಯಿತು. ಕೆಲವೊಮ್ಮೆ ಸಹಾಯಕ್ಕೆ ವಾಕಿಂಗ್ ಸ್ಟಿಕ್ ಕೂಡ ಬಳಸಿದರು.

ರ‍್ಯಾಂಕಿಂಗ್‌ನಲ್ಲಿ ಗಣನೀಯ ಪ್ರಗತಿ: 15 ಬಾರಿ ಮೇಜರ್ ಟೂರ್ನಿಗಳಲ್ಲಿ ಪ್ರಶಸ್ತಿ ಜಯಿಸಿರುವ ವಿಶ್ವ ರ‍್ಯಾಂಕಿಂಗ್‌ನಲ್ಲಿ 228 ಸ್ಥಾನಗಳ ಏರಿಕೆ ದಾಖಲಿಸಿದ್ದಾರೆ. ಸದ್ಯ ಅವರು 745ನೇ ಸ್ಥಾನದಲ್ಲಿದ್ದಾರೆ. 46 ವಯಸ್ಸಿನ ಆಟಗಾರ ಕಳೆದ ವಾರ 973ನೇ ಸ್ಥಾನದಲ್ಲಿದ್ದರು.

ಒಂದು ಸಂದರ್ಭದಲ್ಲಿ 679 ವಾರಗಳ ಕಾಲ ಅವರು ಅಗ್ರಸ್ಥಾನದಲ್ಲಿದ್ದರು. ಈಗ ಅಗ್ರಸ್ಥಾನದಲ್ಲಿ ಅಮೆರಿಕದ ಸ್ಕಾಟಿ ಶೆಫ್ಲರ್ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.