ADVERTISEMENT

ಒಲಿಂಪಿಕ್ಸ್: ವರ್ಷದ ಕನಸಿನ ಸಂಭ್ರಮ

ಏಜೆನ್ಸೀಸ್
Published 23 ಜುಲೈ 2020, 13:59 IST
Last Updated 23 ಜುಲೈ 2020, 13:59 IST
ಒಲಿಂ‍ಪಿಕ್ ಕೂಟದ ಒಂದು ವರ್ಷದ ಕೌಂಟ್‌ಡೌನ್‌ ಆರಂಭವಾದ ಗುರುವಾರ ಟೋಕಿಯೊದ ಮುಖ್ಯ ಕ್ರೀಡಾಂಗಣ ಕಂಡುಬಂದ ಬಗೆ– ರಾಯಿಟರ್ಸ್ ಚಿತ್ರ
ಒಲಿಂ‍ಪಿಕ್ ಕೂಟದ ಒಂದು ವರ್ಷದ ಕೌಂಟ್‌ಡೌನ್‌ ಆರಂಭವಾದ ಗುರುವಾರ ಟೋಕಿಯೊದ ಮುಖ್ಯ ಕ್ರೀಡಾಂಗಣ ಕಂಡುಬಂದ ಬಗೆ– ರಾಯಿಟರ್ಸ್ ಚಿತ್ರ   

ಟೋಕಿಯೊ: ಕೊರೊನಾ ವೈರಾಣು ಹಾವಳಿಯಿಂದಾಗಿ ಮುಂದೂಡಿರುವ ಟೋಕಿಯೊ ಒಲಿಂಪಿಕ್ಸ್ ಪರಿಷ್ಕೃತ ವೇಳಾಪಟ್ಟಿಯಂತೆ ಆರಂಭವಾಗಲು ಸರಿಯಾಗಿ ಒಂದು ವರ್ಷವಿದೆ. ಈ ಸಂಭ್ರಮವನ್ನು ಜಪಾನ್‌ನಲ್ಲಿ ಗುರುವಾರ ಸರಳವಾಗಿ ಆಚರಿಸಲಾಯಿತು. ಕೊರೊನಾ ಹಾವಳಿ ಇನ್ನೂ ಹೆಚ್ಚುತ್ತಲೇ ಇದೆ. ಆದ್ದರಿಂದ ಮುಂದಿನ ವರ್ಷವೂ ಒಲಿಂಪಿಕ್ಸ್ ನಡೆಯುವುದೋ ಇಲ್ಲವೋ ಎಂದು ಸ್ಪಷ್ಟವಾಗಿ ಯಾರಿಗೂ ಹೇಳಲಾರದ ಸ್ಥಿತಿ ನಿರ್ಮಾಣವಾಗಿದೆ. ಆದರೂ ‘ಇನ್ನೂ ಒಂದು ಹೆಜ್ಜೆ ಮುಂದಕ್ಕೆ‘ ಎಂಬ ಹೆಸರಿನ ಕಾರ್ಯಕ್ರಮದೊಂದಿಗೆ ಕೌಂಟ್‌ಡೌನ್‌ ಆರಂಭಿಸಲಾಯಿತು.

ಒಲಿಂಪಿಕ್ಸ್ ಕೂಟವನ್ನು ಈ ವರ್ಷದ ಜುಲೈ 24ರಿಂದ ಆಗಸ್ಟ್ ಒಂಬತ್ತರ ವರೆಗೆ ಆಯೋಜಿಸಲು ನಿರ್ಧರಿಸಲಾಗಿತ್ತು. ಆದರೆ ಕೊರೊನಾ ಹೆಚ್ಚುತ್ತಿರುವ ಕಾರಣ ಒಂದು ವರ್ಷ ಮುಂದೂಡಲು ನಿರ್ಧರಿಸಲಾಗಿತ್ತು. ವೈರಾಣು ಕಾಡದೇ ಇದ್ದಿದ್ದರೆ ಈಗ ಟೋಕಿಯೊದಲ್ಲಿ ಕ್ರೀಡಾಪಟುಗಳ ಸಂಭ್ರಮ ಗರಿಗೆದರಿರುತ್ತಿತ್ತು. ಕ್ರೀಡಾ ಅಧಿಕಾರಿಗಳು ಅಂತಿಮ ಹಂತದ ಸಿದ್ಧತೆ ನಡೆಸುತ್ತಿದ್ದರು. ಕ್ರೀಡಾಭಿಮಾನಿಗಳು ಖುಷಿಯಿಂದ ನಲಿಯುತ್ತಿದ್ದರು.

ಆದರೆ ಗುರುವಾರ ನಡೆದದ್ದೇ ಬೇರೆ. ಆಯೋಜಕರು ಖಾಲಿ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಹಮ್ಮಿಕೊಂಡಿದ್ದರು. ಲುಕೇಮಿಯಾದಿಂದ ಬಳಲುತ್ತಿರುವ ಜಪಾನ್‌ನ ಖ್ಯಾತ ಈಜುಗಾರ್ತಿ ರಿಕಾಕೊ ಐಕಿ ಅವರು ವಿಡಿಯೊ ಸಂದೇಶ ಕಳುಹಿಸಿದ್ದು ಕ್ರೀಡಾಪಟುಗಳ ಭವಿಷ್ಯ ಉಜ್ವಲವಾಗಿರಲು ಎಂದು ಹಾರೈಸಿದ್ದಾರೆ. ‘ಮುಂದಿನ ವರ್ಷವೂ ಪರಿಸ್ಥಿತಿ ಸುಧಾರಿಸುತ್ತದೆಯೋ ಇಲ್ಲವೋ ಎನ್ನಲಾಗದು. ಆದರೂ ಎಲ್ಲರಿಗೆ ಒಂದು ವರ್ಷದ ಅವಧಿ ಹೆಚ್ಚುವರಿಯಾಗಿ ಲಭಿಸಿದೆ ಎಂಬುದು ಸಮಾಧಾನದ ವಿಷಯ‘ ಎಂದು ಅವರು ಹೇಳಿದ್ದಾರೆ. ಒಲಿಂಪಿಕ್‌ ಜ್ಯೋತಿಯನ್ನು ಒಳಗೊಂಡ ಲ್ಯಾಂಟೇನ್ ಹಿಡಿದುಕೊಂಡು ಅವರು ವಿಡಿಯೊ ಕಳುಹಿಸಿದ್ದರು.

ADVERTISEMENT

ಜಪಾನ್‌ನಲ್ಲೂ ಕೊರೊನಾ ಹಾವಳಿ ಇದೆ. ಟೋಕಿಯೊ ನಗರವೊಂದರಲ್ಲೇ ಗುರುವಾರ 366 ಪ್ರಕರಣಗಳು ದೃಢಪಟ್ಟಿವೆ. ವಾರಾಂತ್ಯದ ರಜೆ ದಿನಗಳಲ್ಲಿ ಯಾರೂ ಮನೆಯಿಂದ ಹೊರಬರಬಾರದು ಎಂದು ಮೇಯರ್ ಕೋರಿದ್ದಾರೆ. ಆದರೂ ಒಲಿಂಪಿಕ್ಸ್ ಆಯೋಜಕರು ಕೂಟ ನಡೆಯುವುದು ಖಚಿತ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ. ಆದರೆ ಸಾರ್ವಜನಿಕರು ಮಾತ್ರ ಇನ್ನೂ ಆತಂಕದಲ್ಲೇ ಇದ್ದಾರೆ. ‘ಮುಂದಿನ ವರ್ಷದ ವರೆಗೆ ಏನಾಗುತ್ತದೋ ಎಂಬ ಭಯ ಕಾಡುತ್ತಿದೆ. ಜನರು ನಮ್ಮ ನಗರಕ್ಕೆ ಬರುವರೋ ಇಲ್ಲವೋ ಎಂಬ ಬಗ್ಗೆ ಇನ್ನೂ ಸ್ಪಷ್ಟವಾಗಿ ತಿಳಿಯುತ್ತಿಲ್ಲ’ ಎಂದು 50 ವರ್ಷದ ಸಚಿಕೊ ಅಹುನ್‌ವಾನ್ ಬೇಸರದಿಂದ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.