ADVERTISEMENT

Tokyo Olympics ಆರ್ಚರಿ: ಇನ್ನಷ್ಟು ಸಾಧನೆಯತ್ತ ಬಿಲ್ಲುಗಾರರ ಚಿತ್ತ...

ಟೋಕಿಯೊ ಒಲಿಂಪಿಕ್ಸ್‌ 2020 ಭಾರತದ ಕನಸಿನ ಪಯಣ

​ಪ್ರಜಾವಾಣಿ ವಾರ್ತೆ
Published 12 ಜುಲೈ 2021, 20:27 IST
Last Updated 12 ಜುಲೈ 2021, 20:27 IST
ಅತನು ದಾಸ್‌
ಅತನು ದಾಸ್‌   

ಪ್ರತಿ ಒಲಿಂ‍ಪಿಕ್ಸ್‌ನಿಂದಲೂ ಹಂತಹಂತವಾಗಿ ಪಾಲ್ಗೊಳ್ಳುವಿಕೆ ಮತ್ತು ಸಾಮರ್ಥ್ಯ ತೋರಿಸುವಲ್ಲಿ ಉತ್ತಮಗೊಳ್ಳುತ್ತಿರುವ ಭಾರತದ ಆರ್ಚರಿ ಪಟುಗಳಿಗೆ ಬೆಲ್ಜಿಯಂ, ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಫ್ರಾನ್ಸ್‌ ದೇಶಗಳ ಸ್ಪರ್ಧಿಗಳು ಕಠಿಣ ಪೈಪೋಟಿ ಒಡ್ಡುತ್ತಿದ್ದಾರೆ.

ಆರ್ಚರಿ ಕ್ರೀಡೆ 1900ರ ಒಲಿಂಪಿಕ್ಸ್‌ನಲ್ಲಿ ಸೇರ್ಪಡೆಯಾಯಿತು. 1904, 1908 ಮತ್ತು 1920ರ ಕ್ರೀಡಾಕೂಟಗಳಲ್ಲಿ ಮುಂದುವರಿಯಿತು. ಬಳಿಕ ಈ ಕ್ರೀಡೆಯನ್ನು ಕೈಬಿಡಲಾಯಿತು. 1972ರಲ್ಲಿ ಪುನಃ ಸೇರ್ಪಡೆ ಮಾಡಲಾಯಿತಾದರೂ 1988ರ ಸೋಲ್‌ ಒಲಿಂಪಿಕ್ಸ್‌ನಿಂದ ಭಾರತ ಪಾಲ್ಗೊಳ್ಳಲು ಆರಂಭಿಸಿತು. ಲಿಂಬಾ ರಾಮ್‌, ಶ್ಯಾಮ್‌ ಲಾಲ್‌ ಮತ್ತು ಸಂಜೀವ್‌ ಸಿಂಗ್‌ ಬಿಲ್ಲುಗಾರಿಕೆಯಲ್ಲಿ ಒಲಿಂಪಿಕ್ಸ್‌ನಲ್ಲಿ ಮೊದಲ ಬಾರಿಗೆ ದೇಶವನ್ನು ಪ್ರತಿನಿಧಿಸಿದ್ದರು.

2008ರ ಬೀಜಿಂಗ್‌ ಒಲಿಂಪಿಕ್ಸ್‌ನಲ್ಲಿ ಭಾರತದಿಂದ ಎಂಟು ಮತ್ತು 2012ರ ಲಂಡನ್‌ ಒಲಿಂಪಿಕ್ಸ್‌ನಲ್ಲಿ 10 ಜನ ಸ್ಪರ್ಧಿಗಳು ಪಾಲ್ಗೊಂಡಿದ್ದರು. ಆದರೆ, ನಾಕೌಟ್‌ ಹಂತಗಳಲ್ಲಿ ಸ್ಪರ್ಧಿಗಳು ಬಲಿಷ್ಠ ದೇಶಗಳ ಸವಾಲು ಎದುರಿಸಲು ವಿಫಲರಾಗುತ್ತಿದ್ದಾರೆ.

ADVERTISEMENT

ಟೋಕಿಯೊ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿರುವ ಅತನು ದಾಸ್‌ ಹಾಗೂ ದೀಪಿಕಾ ಕುಮಾರಿ ಹಿಂದಿನ ಕ್ರೀಡಾಕೂಟದಲ್ಲಿ ಆಡಿದ್ದರು. ಆಗ ಇವರಿಬ್ಬರೂ ಒಂಬತ್ತನೇ ಸ್ಥಾನ ಪಡೆದಿದ್ದರು. ಈ ಸಲದ ಕ್ರೀಡಾಕೂಟದಲ್ಲಿ ದೀಪಿಕಾ ಮೇಲೆ ಹೆಚ್ಚು ಭರವಸೆಯಿದೆ. ದೀಪಿಕಾ 2019ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಆರ್ಚರಿ ಚಾಂಪಿಯನ್‌ಷಿಪ್‌ನ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದೇ ವರ್ಷ ನಡೆದ ವಿಶ್ವಕಪ್‌ನ ವೈಯಕ್ತಿಕ ಸ್ಪರ್ಧೆಯಲ್ಲಿ ಚಿನ್ನದ ಪದಕ ಜಯಿಸಿದ್ದು ಅವರ ವಿಶ್ವಾಸ ಹೆಚ್ಚಿಸಿದೆ.

ಅತನು ದಾಸ್‌ ಎರಡು ವರ್ಷಗಳ ಅವಧಿಯಲ್ಲಿ ಆರು ಪದಕಗಳನ್ನು ಗೆದ್ದಿದ್ದು, ಒಲಿಂಪಿಕ್ಸ್‌ನಲ್ಲಿ ಉತ್ತಮ ಸಾಮರ್ಥ್ಯ ತೋರಲು ನೆರವಾಗಲಿದೆ. ವಿಶ್ವಕಪ್‌ನ ವೈಯಕ್ತಿಕ ಸ್ಪರ್ಧೆ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಚಿನ್ನ ಜಯಿಸಿದ್ದರು. ಹೋದ ವರ್ಷ ವೈಯಕ್ತಿಕ, ರಿಕರ್ವ್ ತಂಡ ಮತ್ತು ಮಿಶ್ರ ತಂಡ ವಿಭಾಗದಲ್ಲಿ ಕಂಚಿನ ಸಾಧನೆ ಮಾಡಿದ್ದರು. ಇವರನ್ನು ಹೊರತುಪಡಿಸಿ ತರುಣದೀಪ್‌ ರಾಯ್‌ ಕೂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಂಡ ಅನುಭವ ಹೊಂದಿದ್ದಾರೆ. ಎಲ್ಲ ಸ್ಪರ್ಧಿಗಳು ರಿಕರ್ವ್‌ ವಿಭಾಗದಲ್ಲಿ ಕಣಕ್ಕಿಳಿಯಲಿದ್ದಾರೆ.

ಭಾರತ ತಂಡ:
ಅತನು ದಾಸ್‌, ಪ್ರವೀಣ್‌ ಜಾಧವ್‌, ತರುಣದೀಪ್ ರಾಯ್‌ (ಪುರುಷರ ವೈಯಕ್ತಿಕ ವಿಭಾಗ), ದೀಪಿಕಾ ಕುಮಾರಿ (ಮಹಿಳೆಯರ ವೈಯಕ್ತಿಕ ವಿಭಾಗ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.