ADVERTISEMENT

ಟೋಕಿಯೊ ಒಲಿಂಪಿಕ್ಸ್‌: ಪದಕದ ಸಾಧನೆಯ ಬೆನ್ನೇರಿ ಕುದುರೆ ಸವಾರಿ

​ಪ್ರಜಾವಾಣಿ ವಾರ್ತೆ
Published 17 ಜುಲೈ 2021, 19:16 IST
Last Updated 17 ಜುಲೈ 2021, 19:16 IST
ಫವಾದ್ ಮಿರ್ಜಾ –ಟ್ವಿಟರ್ ಚಿತ್ರ
ಫವಾದ್ ಮಿರ್ಜಾ –ಟ್ವಿಟರ್ ಚಿತ್ರ   

ಬೆಂಗಳೂರಿನಲ್ಲಿ ವಿಸ್ತಾರಕ್ಕೆ ಹರಡಿಕೊಂಡಿರುವ ಫಾರ್ಮ್‌ನಿಂದ ಜರ್ಮನಿಯ ಬೆರ್ಜ್‌ಡಾರ್ಫ್‌ನ ವರೆಗೆ ಅಭ್ಯಾಸದ ತಾಣವನ್ನು ಹೊಂದಿರುವ ಭಾರತದ ಈಕ್ವೆಸ್ಟ್ರಿಯನ್ ಪಟು ಫವಾದ್ ಮಿರ್ಜಾ ದೊಡ್ಡ ಕನಸು ಹೊತ್ತುಕೊಂಡು ಟೋಕಿಯೊ ಕಡೆಗೆ ಹೆಜ್ಜೆ ಇಟ್ಟಿದ್ದಾರೆ. ಕುದುರೆ ಸವಾರಿಯಲ್ಲಿ ವಿಶ್ವದ ಗಮನ ಸೆಳೆದಿರುವ ಫವಾದ್ ಈಚಿನ ವರ್ಷಗಳಲ್ಲಿ ಪದಕಗಳನ್ನು ಗೆದ್ದು ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಸಾಧನೆಯ ಈ ನಾಗಾಲೋಟವನ್ನು ಟೋಕಿಯೊ ವರೆಗೆ ವಿಸ್ತರಿಸಿ ಒಲಿಂಪಿಕ್ಸ್‌ ವಿಜೇತರ ವೇದಿಕೆಯಲ್ಲಿ ತ್ರಿವರ್ಣ ಧ್ವಜ ಹಾರುವುದನ್ನು ನೋಡುವ ಬಯಕೆ ಹೊಂದಿದ್ದಾರೆ.

ಈಕ್ವೆಸ್ಟ್ರಿಯನ್ ಕ್ರೀಡೆಒಲಿಂಪಿಕ್ಸ್‌ ಸ್ಪರ್ಧಾಕಣದಲ್ಲಿ ಒಂದು ಶತಮಾನದಿಂದಲೇ ಇದೆ. ಆದರೆ ಭಾರತದ ಕ್ರೀಡಾಪಟುಗಳು ಕುದುರೆಯ ಜೊತೆ ಒಲಿಂಪಿಕ್ಸ್‌ನಲ್ಲಿ ಕಾಣಿಸಿಕೊಂಡು ನಾಲ್ಕು ದಶಕಗಳು ಆಗಿವೆಯಷ್ಟೆ. ಆದರೂ ಈ ವರೆಗೆ ಮೂರು ಆವೃತ್ತಿಗಳಲ್ಲಿ ಮಾತ್ರ ಭಾರತ ಪಾಲ್ಗೊಂಡಿದೆ. ಮೊದಲ ಬಾರಿ ಭಾಗವಹಿಸಿ ಮತ್ತೊಮ್ಮೆ ಒಲಿಂಪಿಕ್ಸ್‌ನಲ್ಲಿ ದೇಶದ ಈಕ್ವೆಸ್ಟ್ರಿಯನ್‌ ಪಟುಗಳು ಕಾಣಿಸಿಕೊಳ್ಳಬೇಕಾದರೆ 16 ವರ್ಷ ಕಾಯಬೇಕಾಗಿತ್ತು. ಈಗ, ಮತ್ತೊಮ್ಮೆ ಸಾಮರ್ಥ್ಯ ಮೆರೆಯಲು ಸಜ್ಜಾಗಿದೆ.

1980ರಲ್ಲಿ ಮುಹಮ್ಮದ್ ಖಾನ್, ದರಿಯಾ ಸಿಂಗ್‌, ಜಿತೇಂದರ್ ಜೀತ್ ಸಿಂಗ್‌ ಮತ್ತು ಹುಸೇನ್ ಸಿಂಗ್ ಅವರು ಇವೆಂಟಿಂಗ್‌ ತಂಡ ವಿಭಾಗದಲ್ಲಿ ಭಾಗವಹಿಸಿದ್ದರು. ವೈಯಕ್ತಿಕ ವಿಭಾಗದಲ್ಲಿ ದೇಶದವನ್ನು ಮೊದಲ ಬಾರಿ ಪ್ರತಿನಿಧಿಸಿದವರು ಇಂದ್ರಜೀತ್ ಲಾಂಬಾ.

ADVERTISEMENT

ಅವರು 1996ರಲ್ಲಿ ಇವೆಂಟಿಂಗ್‌ ವೈಯಕ್ತಿಕ ವಿಭಾಗದಲ್ಲಿ ಸ್ಪರ್ಧಿಸಿದ್ದರು. 2000ನೇ ಇಸವಿಯಲ್ಲಿ ಇಮ್ತಿಯಾಜ್ ಅನೀಸ್ ಕೂಡ ಇದೇ ವಿಭಾಗದಲ್ಲಿ ಕಣಕ್ಕೆ ಇಳಿದಿದ್ದರು.

ಎರಡು ದಶಕಗಳ ನಂತರ...

20 ವರ್ಷಗಳ ನಂತರ ಮತ್ತೆ ಭಾರತ ಈಕ್ವೆಸ್ಟ್ರಿಯನ್‌ನಲ್ಲಿ ಒಲಿಂಪಿಕ್ಸ್‌ ಅಂಗಣಕ್ಕೆ ಇಳಿಯುತ್ತಿದೆ. ಫವಾದ್ ಮಿರ್ಜಾ ಈ ಬಾರಿ ಸ್ಪರ್ಧಿಸುತ್ತಿರುವ ಭಾರತದ ಏಕೈಕ ಈಕ್ವೆಸ್ಟ್ರಿಯನ್ ಪಟು. 2018ರ ಏಷ್ಯನ್‌ ಗೇಮ್ಸ್‌ನಲ್ಲಿ ವೈಯಕ್ತಿಕ ಮತ್ತು ತಂಡ ವಿಭಾಗದಲ್ಲಿ ಬೆಳ್ಳಿ ಪದಕಗಳನ್ನು ಗೆದ್ದುಕೊಂಡಿರುವ ಫವಾದ್ ಅವರು ಏಷ್ಯಾ ಮತ್ತು ಒಷಿನಿಯಾ ವಲಯದ ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ ಅಮೋಘ ಸಾಧನೆ ಮಾಡಿ ಒಲಿಂಪಿಕ್ಸ್ ಟಿಕೆಟ್ ಗಳಿಸಿದ್ದಾರೆ.

ಜಕಾರ್ತದಲ್ಲಿ ನಡೆದ ಏಷ್ಯನ್ ಗೇಮ್ಸ್‌ನ ಜಂಪಿಂಗ್ ವಿಭಾಗದಲ್ಲಿ ಫವಾದ್ ಅವರು ಬೆಳ್ಳಿ ಪದಕ ಗೆದ್ದಿದ್ದರು. ತಂಡ ವಿಭಾಗದಲ್ಲೂ ಬೆಳ್ಳಿ ಪದಕ ಅವರ ಕೊರಳಿಗೇರಿತ್ತು. 2019ರಲ್ಲಿ ಪೋಲೆಂಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ ಗೆದ್ದುಕೊಂಡಿದ್ದರು. ಕಳೆದ ವರ್ಷದ ಜನವರಿಯಲ್ಲಿ ಏಷ್ಯಾ–ಒಷಿನಿಯಾ ಗುಂಪಿನಲ್ಲಿ ಮೊದಲಿಗರಾಗಿ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.

1900ರ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಈಕ್ವೆಸ್ಟ್ರಿಯನ್ ಕ್ರೀಡೆಯನ್ನು ಮೊದಲ ಬಾರಿ ಪರಿಚಯಿಸಲಾಗಿತ್ತು. ಆದರೆ 1912ರಲ್ಲಿ ಅಧಿಕೃತವಾಗಿ ಇದನ್ನು ಸ್ಪರ್ಧಾ ವಿಭಾಗಕ್ಕೆ ಸೇರಿಸಲಾಗಿತ್ತು. ಭಾರತ ವರ್ಷಗಳ ಬಳಿಕ ಸ್ಪರ್ಧೆಗೆ ಇಳಿಯಿತು. ಆದರೂ ಪದಕದ ಸಮೀಪಕ್ಕೆ ಸುಳಿಯಲು ಸಾಧ್ಯವಾಗಲಿಲ್ಲ. ಹೀಗಾಗಿ ಈಗ ಫವಾದ್ ಮಿರ್ಜಾ ಮೇಲೆ ನಿರೀಕ್ಷೆ ಇದೆ; ಭರವಸೆ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.