ಹಾಂಗ್‌ಝೌ: ಭಾರತದ ಡಬಲ್ಸ್ ಜೋಡಿಯಾದ ಟ್ರೀಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಅವರು ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ವಿಶ್ವ ಟೂರ್ ಫೈನಲ್‌ನಿಂದ ಹೊರಬಿದ್ದರು. ‘ಎ’ ಗುಂಪಿನ ನಿರ್ಣಾಯಕ ಪಂದ್ಯದಲ್ಲಿ ಭಾರತದ ಆಟಗಾರ್ತಿಯರು ಶುಕ್ರವಾರ ನೇರ ಆಟಗಳಲ್ಲಿ ಜಪಾನ್‌ನ ಆಟಗಾರ್ತಿಯರಿಗೆ ಮಣಿದರು.
ನಾಮಿ ಮಾತ್ಸುಯಾಮಾ ಮತ್ತು ಚಿಹಾರು ಶಿಡಾ ಅವರು 21–17, 21–13 ರಿಂದ ಟ್ರೀಸಾ–ಗಾಯತ್ರಿ ಜೋಡಿಯನ್ನು ಮಣಿಸಿದರು. ಜಪಾನಿನ ಜೋಡಿ ವಿಶ್ವ ಕ್ರಮಾಂಕದಲ್ಲಿ ನಾಲ್ಕನೇ ಸ್ಥಾನದಲ್ಲಿದೆ. ಭಾರತದ ಆಟಗಾರ್ತಿಯರು 13ನೇ ಸ್ಥಾನದಲ್ಲಿದ್ದಾರೆ.
ಪ್ಯಾರಿಸ್ ಒಲಿಂಪಿಕ್ಸ್ ಕಂಚಿನ ಪದಕ ವಿಜೇತರಾದ ನಾಮಿ– ಶಿಡಾ ಜೋಡಿಯೆದುರು ಇದು ಭಾರತದ ಈ ಆಟಗಾರ್ತಿಯರಿಗೆ ಐದು ಪಂದ್ಯಗಳಲ್ಲಿ ನಾಲ್ಕನೇ ಸೋಲೆನಿಸಿತು.
ಭಾರತದ ಬ್ಯಾಡ್ಮಿಂಟನ್ ಪಟುಗಳಲ್ಲಿ ಟ್ರೀಸಾ–ಗಾಯತ್ರಿ ಜೋಡಿ ಮಾತ್ರ, ವರ್ಷಾಂತ್ಯದ ಈ ಪ್ರತಿಷ್ಠಿತ ಟೂರ್ನಿಗೆ ಅರ್ಹತೆ ಪಡೆದಿದ್ದರು.
ಭಾರತದ ಆಟಗಾರ್ತಿಯರು ಮೊದಲ ಪಂದ್ಯದಲ್ಲಿ ಚೀನಾದ ಅಗ್ರಮಾನ್ಯ ಜೋಡಿ ಲಿಯು ಶೆಂಗ್ ಶು –ತಾನ್ ನಿಂಗ್ ಎದುರು ಸೋತಿತ್ತು. ಆದರೆ ಗುಂಪಿನ ಎರಡನೇ ಪಂದ್ಯದಲ್ಲಿ ಮಲೇಷ್ಯಾದ ಪಿಯರ್ಲಿ ತಾನ್– ತೀನಾ ಮುರಳೀಧರನ್ ಅವರನ್ನು ಸೋಲಿಸಿ ಸೆಮಿಫೈನಲ್ ಅವಕಾಶ ಜೀವಂತವಾಗಿರಿಸಿಕೊಂಡಿತ್ತು.
ಚೀನಾ ಮತ್ತು ಜಪಾನ್ ಆಟಗಾರ್ತಿಯರು ಸೆಮಿಫೈನಲ್ ಹಂತಕ್ಕೆ ಮುನ್ನಡೆದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.