ADVERTISEMENT

ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿ: ಟ್ರಿಗರ್ ಟ್ಯಾಕ್ಟಿಷಿಯನ್‌ ಚಾಂಪಿಯನ್‌

​ಪ್ರಜಾವಾಣಿ ವಾರ್ತೆ
Published 1 ಮಾರ್ಚ್ 2026, 20:23 IST
Last Updated 1 ಮಾರ್ಚ್ 2026, 20:23 IST
ಕರ್ನಾಟಕ ಶೂಟಿಂಗ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಟ್ರಿಗರ್ ಟ್ಯಾಕ್ಟಿಷಿಯನ್‌ ತಂಡದ ಶೂಟರ್‌ಗಳು ಟ್ರೋಫಿಯೊಂದಿಗೆ ಸಂಭ್ರಮಿಸಿದರು
ಕರ್ನಾಟಕ ಶೂಟಿಂಗ್ ಲೀಗ್ ಟೂರ್ನಿಯಲ್ಲಿ ಚಾಂಪಿಯನ್‌ ಆದ ಟ್ರಿಗರ್ ಟ್ಯಾಕ್ಟಿಷಿಯನ್‌ ತಂಡದ ಶೂಟರ್‌ಗಳು ಟ್ರೋಫಿಯೊಂದಿಗೆ ಸಂಭ್ರಮಿಸಿದರು   

ಬೆಂಗಳೂರು: ಟ್ರಿಗರ್ ಟ್ಯಾಕ್ಟಿಷಿಯನ್‌ ತಂಡವು ಕರ್ನಾಟಕ ರಾಜ್ಯ ರೈಫಲ್ ಸಂಸ್ಥೆಯ ಆಶ್ರಯದಲ್ಲಿ ನಡೆದ ಚೊಚ್ಚಲ ‘ಕರ್ನಾಟಕ ಶೂಟಿಂಗ್ ಲೀಗ್’ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿತು.

ಮೈಸೂರು ರಸ್ತೆಯ ಸಾಯ್‌ ಆವರಣದಲ್ಲಿ ಶನಿವಾರ ಅರ್ಹತಾ ಸುತ್ತು, ಭಾನುವಾರ ಪ್ರಶಸ್ತಿ ಸುತ್ತಿನ ಸ್ಪರ್ಧೆಗಳು ನಡೆದವು. ಒಟ್ಟು ಎಂಟು ಫ್ರ್ಯಾಂಚೈಸಿಗಳ ತಂಡಗಳು ಸ್ಪರ್ಧಾ ಕಣದಲ್ಲಿದ್ದವು. ಆರು ಶೂಟಿಂಗ್‌ ವಿಭಾಗಗಳ ಸ್ಪರ್ಧೆಗಳಲ್ಲಿ 88 ಮಂದಿ ಶೂಟರ್‌ಗಳು ತಮ್ಮ ಪ್ರತಿಭಾ ಕೌಶಲ ಪ್ರದರ್ಶಿಸಿದರು.

ಅಂತಿಮ ಸುತ್ತಿನ 25 ಮೀಟರ್ ಸ್ಪೋರ್ಟ್ಸ್ ಪಿಸ್ತೂಲ್, ಟ್ರಾಪ್ ಶೂಟಿಂಗ್, ಸ್ಕೀಟ್ ಶೂಟಿಂಗ್, ಏರ್ ಪಿಸ್ತೂಲ್‌ನಲ್ಲಿ ಟ್ಯಾಕ್ಟಿಷಿಯನ್‌ ಶೂಟರ್‌ಗಳು ಪಾರಮ್ಯ ಮೆರೆದರು. 50 ಮೀಟರ್ ಪ್ರೋನ್, 10 ಮೀಟರ್ ಪೀಪ್ ಸೈಟ್ ಏರ್ ರೈಫಲ್‌ನಲ್ಲಿ ಬೆಂಗಳೂರು ಬ್ರಿಗೇಡ್‌ ಶೂಟರ್‌ಗಳು ಮೇಲುಗೈ ಸಾಧಿಸಿದರು.

ADVERTISEMENT

ಚೊಚ್ಚಲ ಪ್ರಶಸ್ತಿಯನ್ನು ಗೆದ್ದುಕೊಂಡ ಟ್ಯಾಕ್ಟಿಷಿಯನ್‌ ತಂಡವು ₹4 ಲಕ್ಷ ಬಹುಮಾನ ತನ್ನದಾಗಿಸಿಕೊಂಡಿತು. ರನ್ನರ್ಸ್‌ ಅಪ್‌ ಆದ ಬೆಂಗಳೂರು ಬ್ರಿಗೇಡ್‌ ತಂಡವು ₹2 ಲಕ್ಷ ಮತ್ತು ಮೂರನೇ ಸ್ಥಾನ ಪಡೆದ ಕ್ಯಾಲಿಬರ್‌ ಕ್ಯಾಪಿಟಲ್ಸ್‌ ತಂಡವು ₹1.5 ಲಕ್ಷ ಬಹುಮಾನ ಗೆದ್ದುಕೊಂಡಿತು.

ಭಾರತ ರೈಫಲ್‌ ಸಂಸ್ಥೆಯ ಅಧ್ಯಕ್ಷ ಕಲಿಕೇಶ್ ನಾರಾಯಣ್ ಸಿಂಗ್ ದೇವ್, ಕರ್ನಾಟಕ ರಾಜ್ಯ ರೈಫಲ್‌ ಸಂಸ್ಥೆ ಪ್ರಧಾನ ಕಾರ್ಯದರ್ಶಿ ಜಿ.ಸುಶೀಲಾ, ಖಜಾಂಜಿ ಮುರುಳಿ ವಿ., ಕರ್ನಾಟಕ ರಾಜ್ಯ ಕ್ರೀಡಾ ಸಲಹಾ ಸಮಿತಿ ಸದಸ್ಯ ಪ್ರಕಾಶ್ ನಂಜಪ್ಪ ‍ಟೂರ್ನಿಯಲ್ಲಿ ಪಾಲ್ಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.