ADVERTISEMENT

ನಿಯಮ ಉಲ್ಲಂಘನೆ: ಡಬ್ಲ್ಯೂಎಫ್‌ಐ ಅಧ್ಯಕ್ಷರ ವಿರುದ್ಧ ಕಾರ್ಯದರ್ಶಿ ಆರೋಪ

ಪಿಟಿಐ
Published 22 ಡಿಸೆಂಬರ್ 2023, 16:31 IST
Last Updated 22 ಡಿಸೆಂಬರ್ 2023, 16:31 IST
<div class="paragraphs"><p>ಕುಸ್ತಿ</p></div>

ಕುಸ್ತಿ

   

ನವದೆಹಲಿ: ಭಾರತ ಕುಸ್ತಿ ಫೆಡರೇಷನ್ (ಡಬ್ಲ್ಯೂಎಫ್‌ಐ)ನ ನೂತನ ಸಮಿತಿ ಅಧಿಕಾರ ವಹಿಸಿಕೊಂಡು 24 ತಾಸು ಕಳೆಯುವಷ್ಟರಲ್ಲಿಯೇ ಸಮಸ್ಯೆ ಶುರುವಾಗಿದೆ. ಜೂನಿಯರ್‌ ನ್ಯಾಷನಲ್ಸ್‌ ಸ್ಪರ್ಧೆಯ ದಿನಾಂಕಗಳನ್ನು ಘೋಷಿಸುವಾಗ ಅಧ್ಯಕ್ಷರು ನಿಯಮಗಳನ್ನು ಪಾಲಿಸಿಲ್ಲ ಎಂದು ಆರೋಪಿಸಿರುವ ನೂತನ ಪ್ರಧಾನ ಕಾರ್ಯದರ್ಶಿ ಪ್ರೇಮ್ ಚಂದ್ ಲೋಚಬ್‌, ಸ್ಪರ್ಧೆಯನ್ನು ಮುಂದೂಡಬೇಕು ಎಂದು ಆಗ್ರಹಿಸಿದ್ದಾರೆ.

ಡಿಸೆಂಬರ್ 28 ರಿಂದ 30ರವರೆಗೆ ಉತ್ತರ ಪ್ರದೇಶದ ಗೊಂಡಾದಲ್ಲಿ 15 ವರ್ಷದೊಳಗಿನ ಮತ್ತು  20 ವರ್ಷದೊಳಗಿನ ರಾಷ್ಟ್ರೀಯ ಕ್ರೀಡಾಕೂಟ ನಡೆಯಲಿದೆ ಎಂದು ಅಧ್ಯಕ್ಷ ಸಂಜಯ್ ಸಿಂಗ್ ನೇತೃತ್ವದ ಹೊಸ ಸಮಿತಿ ಶುಕ್ರವಾರ ಘೋಷಿಸಿದೆ.

ADVERTISEMENT

ಪ್ರತಿಸ್ಪರ್ಧಿ ಅನಿತಾ ಶೆರಾನ್‌ ಬಣದಿಂದ ಗೆದ್ದಿರುವ ಲೋಚಬ್ ಸಭೆಯಲ್ಲಿ ಭಾಗವಹಿಸಲಿಲ್ಲ ಮತ್ತು ಎಲ್ಲಾ ನಿರ್ಧಾರಗಳು ಡಬ್ಲ್ಯುಎಫ್ಐ ಪ್ರಧಾನ ಕಾರ್ಯದರ್ಶಿ ಮೂಲಕ ಬರಬೇಕು ಎಂದು ಹೇಳಿದ್ದಾರೆ.

‘ಜೂನಿಯರ್ ಕುಸ್ತಿಪಟುಗಳ ಅನುಕೂಲಗಳು ಮತ್ತು ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಮತ್ತು ಡಬ್ಲ್ಯುಎಫ್ಐ ಸಂವಿಧಾನ ಪ್ರಕಾರ ನಿರ್ಧಾರ ತೆಗೆದುಕೊಳ್ಳಲು ಅವಕಾಶ ನೀಡುವುದರಿಂದ ತಾವು ಯಾವುದೇ ನಿಯಮವನ್ನು ಉಲ್ಲಂಘಿಸಿಲ್ಲ’ ಎಂದು ಸಂಜಯ್ ಸಿಂಗ್ ಸಮರ್ಥಿಸಿಕೊಂಡಿದ್ದಾರೆ.

ಒಂದು ವರ್ಷ ಕಳೆದುಕೊಳ್ಳುವುದನ್ನು ಕಿರಿಯ ಕುಸ್ತಿಪಟುಗಳು ಬಯಸುವುದಿಲ್ಲ ಮತ್ತು ಅದಕ್ಕಾಗಿಯೇ ಈ ನಿಟ್ಟಿನಲ್ಲಿ ತ್ವರಿತ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸಿಂಗ್ ತಿಳಿಸಿದರು. 

‘ವಯೋಮಿತಿ ಮತ್ತು ಜೂನಿಯರ್ ನ್ಯಾಷನಲ್ಸ್‌ ಅನ್ನು ಮರು ಹೊಂದಿಸಲು ಮತ್ತು ಸ್ಥಳಾಂತರಿಸಲು ಕೆಲವು ರಾಜ್ಯಗಳು ಆಕ್ಷೇಪ ವ್ಯಕ್ತಪಡಿಸಿವೆ. ಹಾಗಾಗಿ ನೂತನ ಕಾರ್ಯಕಾರಿ ಸಮಿತಿ ಸಭೆ ಫೆಡರೇಷನ್‌ನ ಸಂವಿಧಾನ ಪ್ರಕಾರ ನಡೆದಿಲ್ಲ’ ಎಂದು ಲೋಚಾಬ್ ಸಂಜಯ್ ಸಿಂಗ್ ಅವರಿಗೆ ಪತ್ರ ಬರೆದಿದ್ದಾರೆ.

ಪತ್ರದ ಪ್ರತಿಯನ್ನು ಭಾರತ ಒಲಿಂಪಿಕ್ ಸಂಸ್ಥೆ (ಐಒಎ)ಗೂ ಕಳುಹಿಸಲಾಗಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.