
ಬೆಂಗಳೂರು: ಕರ್ನಾಟಕದ ತುಷಾರ್ ಸುವೀರ್ ಹಾಗೂ ಉತ್ತರ ಪ್ರದೇಶದ ಮಾನಸಿ ಸಿಂಗ್ ಅವರು ಶನಿವಾರ ಮುಕ್ತಾಯಗೊಂಡ ಅಖಿಲ ಭಾರತ ಸೀನಿಯರ್ ರ್‍ಯಾಂಕಿಂಗ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್ ಕಿರೀಟ ಗೆದ್ದುಕೊಂಡರು.
ಎಂಟನೇ ಶ್ರೇಯಾಂಕ ಪಡೆದಿದ್ದ ತುಷಾರ್, ಕರ್ನಾಟಕ ಬ್ಯಾಡ್ಮಿಂಟನ್ ಸಂಸ್ಥೆಯ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ 21–12, 21–12ರಿಂದ ಮಧ್ಯಪ್ರದೇಶದ ಅಲಾಪ್ ಮಿಶ್ರಾ ವಿರುದ್ಧ ನಿರಾಯಾಸವಾಗಿ ಗೆದ್ದರು.
ಪುರುಷರ ಡಬಲ್ಸ್‌ನಲ್ಲಿಯೂ ಆತಿಥೇಯ ಆಟಗಾರರು ಪಾರಮ್ಯ ಮೆರೆದರು. ಪವನ್ ಎಸ್. ಹಾಗೂ ಪುನೀತ್ ಎಸ್. ಅವರು 21–16, 21–13ರಿಂದ ಕೇರಳದ ಕಮಲ್ ಕೃಷ್ಣನ್ ಎಸ್.– ಶಂಕರ್‌ಪ್ರಸಾದ್ ಉದಯಕುಮಾರ್ ಜೋಡಿಯನ್ನು ಮಣಿಸಿ, ಚಾಂಪಿಯನ್ ಆದರು.
ಅಗ್ರ ಶ್ರೇಯಾಂಕದ ಆಟಗಾರ್ತಿ ಮಾನಸಿ ಅವರು ರೋಚಕವಾಗಿದ್ದ ಮಹಿಳೆಯರ ಸಿಂಗಲ್ಸ್ ಫೈನಲ್ ಹಣಾಹಣಿಯಲ್ಲಿ 21–16, 16–21, 21–10ರಿಂದ ಮಹಾರಾಷ್ಟ್ರದ ಶ್ರುತಿ ಎಂ. ಎದುರು ಜಯ ಸಾಧಿಸಿದರು. ಮಹಿಳೆಯರ ಡಬಲ್ಸ್‌ನಲ್ಲಿ ಅಧಿತಿ ಭಟ್ (ಉತ್ತರಾಖಂಡ)– ಶ್ರಾವಣಿ ವಾಳೆಕರ್ (ಮಹಾರಾಷ್ಟ್ರ) ಜೋಡಿಯು 21–9, 21–13ರಿಂದ ಅಮೃತಾ ಪಿ. (ಕರ್ನಾಟಕ) ಹಾಗೂ ಲಿಖಿತ ಶ್ರೀವಾಸ್ತವ (ದೆಹಲಿ) ಅವರನ್ನು ಮಣಿಸಿ, ಪ್ರಶಸ್ತಿ ಎತ್ತಿಹಿಡಿಯಿತು.
ಮಿಶ್ರ ಡಬಲ್ಸ್ ಫೈನಲ್‌ನಲ್ಲಿ ದೆಹಲಿಯ ನಿತಿನ್ ಕುಮಾರ್ ಮತ್ತು ಲಿಖಿತಾ ಅವರು 19–21, 21–17, 21–16ರಿಂದ ಆರ್ಯನ್ ಎಸ್. (ಹರಿಯಾಣ)– ಅಶ್ವಿನಿ ಪೊನ್ನಪ್ಪ (ಪೆಟ್ರೋಲಿಯಂ ಕ್ರೀಡಾ ಮಂಡಳಿ) ಜೋಡಿಯನ್ನು ಸೋಲಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.