ADVERTISEMENT

ಕುಸ್ತಿ: ಫೈನಲ್‌ಗೆ ಹನ್ಸಿಕಾ, ಸಾರಿಕಾ

ಪಿಟಿಐ
Published 24 ಅಕ್ಟೋಬರ್ 2025, 23:11 IST
Last Updated 24 ಅಕ್ಟೋಬರ್ 2025, 23:11 IST
ಪ್ರಿಯಾ ಮಲಿಕ್‌
ಪ್ರಿಯಾ ಮಲಿಕ್‌   

ನೋವಿಸಾಡ್‌ (ಸರ್ಬಿಯಾ): ಭಾರತದ ಮಹಿಳಾ ಕುಸ್ತಿಪಟುಗಳು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ಮುಂದುವರಿಸಿದರು. ಹನ್ಸಿಕಾ ಲಂಬಾ ಮತ್ತು ಸಾರಿಕಾ ಮಲಿಕ್ ಅವರು ಶುಕ್ರವಾರ ಚಿನ್ನದ ಪದಕ ಸುತ್ತಿಗೆ ಮುನ್ನಡೆದರೆ, ಇತರ ನಾಲ್ವರು ಕಂಚಿನ ಪದಕ ಗೆದ್ದುಕೊಂಡರು.

53 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ ಹನ್ಸಿಕಾ 11–0ಯಿಂದ ಸ್ಪೇನ್‌ನ ಕಾರ್ಲಾ ಜೌಮ್ ಸೋಲರ್ ಅವರನ್ನು ಮಣಿಸಿದರು. ಅವರು ಫೈನಲ್‌ನಲ್ಲಿ ಜಪಾನಿನ ಹರುನಾ ಮೊರಿಕಾವಾ ಅವರನ್ನು ಎದುರಿಸುವರು. 

ಇದಕ್ಕೂ ಮುನ್ನ ಹನ್ಸಿಕಾ 11–0ಯಿಂದ ವಿಕ್ಟೋರಿಯಾ ವೋಲ್ಕ್ ಅವರನ್ನು ಮಣಿಸಿ ಅಭಿಯಾನ ಆರಂಭಿಸಿದ್ದರು. ಎರಡನೇ ಸುತ್ತಿನಲ್ಲಿ 8–2ರಿಂದ  ಕಜಾಕಸ್ತಾನದ ಜೈನೆಪ್ ಬಯಾನೋವಾ ಅವರನ್ನು ಸೋಲಿಸಿದ್ದರು. ಕ್ವಾರ್ಟರ್‌ ಫೈನಲ್‌ನಲ್ಲಿ 10–0ಯಿಂದ ಉಜ್ಬೇಕಿಸ್ತಾನದ ದಿಲ್ಶೋಡಾ ಮಟ್ನಾಜರೋವಾ ಅವರನ್ನು ಹಿಮ್ಮೆಟ್ಟಿಸಿದರು. 

ADVERTISEMENT

59 ಕೆಜಿ ವಿಭಾಗದ ಸೆಮಿಫೈನಲ್‌ನಲ್ಲಿ 12–6ರಿಂದ ಪೋಲೆಂಡ್‌ನ ಓಲ್ಹಾ ಪಡೋಶುಕ್ ಅವರನ್ನು ಮಣಿಸಿದರು. ಫೈನಲ್‌ನಲ್ಲಿ ಅವರಿಗೆ ಜಪಾನ್‌ನ ರುಕಾ ನಟಾಮಿ ಎದುರಾಳಿ. ಇದಕ್ಕೂ ಮುನ್ನ 4–2ರಿಂದ ಅಮೆರಿಕದ ಅಲೆಕ್ಸಿಸ್ ಜಾನಿಯಾಕ್ ವಿರುದ್ಧ; 5–2ರಿಂದ ನಾರ್ವೆಯ ಒಥೆಲಿ ಹೋಯಿ ವಿರುದ್ಧ ಗೆಲುವು ಸಾಧಿಸಿದ್ದರು. 

57 ಕೆಜಿ ವಿಭಾಗದಲ್ಲಿ ರಿಪೆಷಾಜ್‌ ಮೂಲಕ ಕಂಚಿನ ಪ್ಲೇ ಆಫ್‌ ಸ್ಪರ್ಧೆಗೆ ಅವಕಾಶ ಪಡೆದ ನೇಹಾ ಶರ್ಮಾ 5-0 ಅಂತರದಿಂದ ಹಂಗರಿಯ ರೋಜಾ ಸ್ಜೆಂಟಮಾಸಿ ಅವರನ್ನು ಮಣಿಸಿದರು. 

ಕಂಚಿನ ಪದಕದ ಸ್ಪರ್ಧೆಯಲ್ಲಿ ನಿಶು (55 ಕೆಜಿ) 3–1ರಿಂದ ಉಕ್ರೇನ್‌ನ ಅಲ್ಬಿನಾ ರಿಲಿಯಾ ವಿರುದ್ಧ; ಪುಲ್ಕಿಟ್ (65 ಕೆಜಿ) 8–4ರಿಂದ ಹಂಗರಿಯ ಎನಿಕೊ ಎಲೆಕ್ಸ್ ವಿರುದ್ಧ ಜಯ ಸಾಧಿಸಿದರು. ಸೃಷ್ಟಿ (68 ಕೆಜಿ) 6–1ರಿಂದ ಹಂಗರಿಯ ಕರೋಲಿನಾ ಪೋಕ್ ಅವರನ್ನು ಮಣಿಸಿದರು.

ಗುರುವಾರ ರಾತ್ರಿ ಪ್ರಿಯಾ ಮಲಿಕ್ (76 ಕೆ.ಜಿ) 8–1ರಿಂದ ಮೆಕ್ಸಿಕೊದ ಎಡ್ನಾ ಜಿಮೆನೆಜ್ ವಿಲ್ಲಾಲ್ಬಾ ಅವರನ್ನು ಸೋಲಿಸಿ ಕಂಚಿನ ಪದಕ ಗೆದ್ದಿದ್ದರು. ಅದಕ್ಕೂ ಮುನ್ನ ಗ್ರೀಕೊ ರೋಮನ್ (55 ಕೆಜಿ) ಸ್ಪರ್ಧೆಯಲ್ಲಿ ವಿಶ್ವಜಿತ್‌ ಮೋರೆ ಕಂಚು ಜಯಿಸಿದ್ದರು.

ಪುರುಷರ ಫ್ರೀಸ್ಟೈಲ್ ಸ್ಪರ್ಧೆ ಶುಕ್ರವಾರ ಆರಂಭವಾಯಿತು. ಪ್ರವೀಂದರ್‌ (74 ಕೆಜಿ) ಮೊದಲ ಸುತ್ತಿನಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಅಮೆರಿಕದ ಮಿಚೆಲ್ ಓವನ್ ಮೆಸೆನ್‌ ಬ್ರಿಂಕ್ ಅವರಿಗೆ ಸೋತರು.  ಸಚಿನ್ (92 ಕೆಜಿ) ಕ್ವಾರ್ಟರ್ ಫೈನಲ್ ಹಂತದಲ್ಲಿ ಹೊರಬಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.