
ನೋವಿಸಾಡ್ (ಸರ್ಬಿಯಾ): ಭಾರತದ ಪ್ರಿಯಾ ಮಲಿಕ್ ಅವರು 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನ ಮಹಿಳೆಯರ 76 ಕೆ.ಜಿ. ವಿಭಾಗದಲ್ಲಿ ಕಂಚಿನ ಪದಕ ಗೆದ್ದರು.
ಪ್ರಿಯಾ ಅವರು ಗುರುವಾರ ತಡರಾತ್ರಿ ಕಂಚಿನ ಪದಕದ ಸ್ಪರ್ಧೆಯಲ್ಲಿ 8–1ರಿಂದ ಮೆಕ್ಸಿಕೊದ ಎಡ್ನಾ ಜಿಮೆನೆಜ್ ವಿಲ್ಲಾಲ್ಬಾ ಅವರನ್ನು ಸೋಲಿಸಿದರು. ಇದು ಭಾರತಕ್ಕೆ ದೊರೆತ ಎರಡನೇ ಪದಕವಾಗಿದೆ. ಇದಕ್ಕೂ ಮುನ್ನ ಗ್ರೀಕೊ ರೋಮನ್ (55 ಕೆಜಿ) ಸ್ಪರ್ಧೆಯಲ್ಲಿ ವಿಶ್ವಜಿತ್ ಮೋರ್ ಕಂಚು ಜಯಿಸಿದ್ದರು.
ಹನ್ಸಿಕಾ ಲಂಬಾ ಅವರು ಮಹಿಳೆಯರ 53 ಕೆಜಿ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು. ನೇಹಾ ಶರ್ಮಾ ಅವರು 57 ಕೆಜಿ ವಿಭಾಗದ ಕಂಚಿನ ಪದಕಕ್ಕೆ ಸ್ಪರ್ಧಿಸಲು ರಿಪೆಷಾಜ್ ಅವಕಾಶ ಬಳಸಿಕೊಂಡರು. ನಿಶು (55 ಕೆಜಿ), ಪುಲ್ಕಿತ್ (65 ಕೆಜಿ) ಮತ್ತು ಸೃಷ್ಟಿ (68 ಕೆಜಿ) ಅವರು ತಮ್ಮ ತಮ್ಮ ವಿಭಾಗಗಳಲ್ಲಿ ಕಂಚಿನ ಪದಕದ ಸ್ಪರ್ಧೆಗೆ ಅರ್ಹತೆ ಗಳಿಸಿದ್ದಾರೆ.
ಹನ್ಸಿಕಾ ಅವರು 11–0ಯಿಂದ ವಿಕ್ಟೋರಿಯಾ ವೋಲ್ಕ್ ಅವರನ್ನು ಮಣಿಸಿ ಅಭಿಯಾನ ಆರಂಭಿಸಿದ್ದರು. ಎರಡನೇ ಸುತ್ತಿನಲ್ಲಿ 8–2ರಿಂದ ಕಜಾಕಸ್ತಾನದ ಜೈನೆಪ್ ಬಯಾನೋವಾ ಅವರನ್ನು ಸೋಲಿಸಿದ್ದರು. ಕ್ವಾರ್ಟರ್ ಫೈನಲ್‌ನಲ್ಲಿ 10–0ಯಿಂದ ಉಜ್ಬೇಕಿಸ್ತಾನದ ದಿಲ್ಶೋಡಾ ಮಟ್ನಾಜರೋವಾ ಅವರನ್ನು ಹಿಮ್ಮೆಟ್ಟಿಸಿ ನಾಲ್ಕರ ಘಟ್ಟ ಪ್ರವೇಶಿಸಿದರು.
ಪುರುಷರ ಫ್ರೀಸ್ಟೈಲ್ ಸ್ಪರ್ಧೆ ಶುಕ್ರವಾರ ಆರಂಭವಾಯಿತು. ಪ್ರವೀಂದರ್ (74 ಕೆಜಿ) ಮೊದಲ ಸುತ್ತಿನಲ್ಲಿ ತಾಂತ್ರಿಕ ಶ್ರೇಷ್ಠತೆಯ ಆಧಾರದಲ್ಲಿ ಅಮೆರಿಕದ ಮಿಚೆಲ್ ಓವನ್ ಮೆಸೆನ್‌ಬ್ರಿಂಕ್ ಅವರಿಗೆ ಸೋತರು. ಸಚಿನ್ (92 ಕೆಜಿ) ಕ್ವಾರ್ಟರ್ ಫೈನಲ್ ಹಂತದಲ್ಲಿ ಹೊರಬಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.