ಬೆಂಗಳೂರಿನ ಐಟಿಸಿ ಗಾರ್ಡೇನಿಯಾ ಹೋಟೆಲ್‌ನಲ್ಲಿ ಬುಧವಾರ ‘ಉಲ್ಲಾಸ್ ಯುವಿಪೆಪ್ ಬ್ಯಾಸ್ಕೆಟ್‌ಬಾಲ್ ಅಕಾಡೆಮಿ’ಗೆ ಫಿಬಾ ಏಷ್ಯಾ ಅಧ್ಯಕ್ಷ ಕೆ.ಗೋವಿಂದರಾಜ್ ಚಾಲನೆ ನೀಡಿದರು. ಅಕಾಡೆಮಿ ಸಿಇಒ ಅಜಿತ್ ಕುಮಾರ್, ಅಕಾಡೆಮಿ ಮುಖ್ಯಸ್ಥ, ಬ್ಯಾಸ್ಕೆಟ್‌ಬಾಲ್ ಆಟಗಾರ ಉಲ್ಲಾಸ್ ಕೆ.ಎಸ್. ಚಿತ್ರದಲ್ಲಿದ್ದಾರೆ
ಬೆಂಗಳೂರು: ಭಾರತದ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಟಗಾರ ಉಲ್ಲಾಸ್ ಕೆ.ಎಸ್. ಸಾರಥ್ಯದ ‘ಉಲ್ಲಾಸ್ ಯುವಿಪೆಪ್ ಬ್ಯಾಸ್ಕೆಟ್‌ಬಾಲ್ ಅಕಾಡೆಮಿ’ಗೆ (ಯುವೈಬಿಎ) ಫಿಬಾ ಏಷ್ಯಾ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಗೌರವ ಕಾರ್ಯದರ್ಶಿ ಕೆ.ಗೋವಿಂದರಾಜ್ ಬುಧವಾರ ನಗರದಲ್ಲಿ ಚಾಲನೆ ನೀಡಿದರು.
‘ರಾಜ್ಯ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಮೂಲಕ ರಾಜ್ಯದಲ್ಲಿ ಬ್ಯಾಸ್ಕೆಟ್‌ಬಾಲ್ ಕ್ರೀಡೆಗೆ ಉತ್ತೇಜನ ನೀಡಲಾಗುತ್ತಿದೆ. ಅದಕ್ಕೆ ಪೂರಕವಾಗಿ ನುರಿತ ಕೋಚ್‌ಗಳನ್ನು ಒಳಗೊಂಡ ಯುವೈಬಿಎ ಸಂಸ್ಥೆಯು ರಾಜ್ಯದಲ್ಲಿ ಆರಂಭಗೊಂಡಿರುವುದು ಉತ್ತಮ ಬೆಳಗವಣಿಗೆ. ಸೂಪ್ತ ಪ್ರತಿಭೆಗಳು ಬೆಳಕಿಗೆ ಬರಲು ಇದು ಸಹಕಾರಿಯಾಗಲಿದೆ’ ಎಂದು ಗೋವಿಂದರಾಜ್ ಅಭಿಪ್ರಾಯಪಟ್ಟರು.
‘ರಾಜ್ಯ ಸರ್ಕಾರವೂ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಪೊಲೀಸ್ ಮತ್ತು ಅರಣ್ಯ ಇಲಾಖೆಯ ನೇಮಕಾತಿಯಲ್ಲಿ ಶೇ 3ರಷ್ಟು ಮತ್ತು ಇತರ ಇಲಾಖೆಗಳಲ್ಲೂ ಶೇ 2ರಷ್ಟು ಉದ್ಯೋಗಗಳನ್ನು ಕ್ರೀಡಾಪಟುಗಳಿಗೆ ರಾಜ್ಯ ಸರ್ಕಾರ ಮೀಸಲಿಟ್ಟಿದೆ. ರಾಷ್ಟ್ರ ಮತ್ತು ರಾಜ್ಯ ತಂಡಕ್ಕೆ ಆಯ್ಕೆಯಾಗುವ ಕ್ರೀಡಾಪಟುಗಳಿಗೆ ಶಾಲಾ ಹಾಜರಾತಿಯಲ್ಲಿ ಶೇ 25ರಷ್ಟು ವಿನಾಯಿತಿ ಕಲ್ಪಿಸಿದೆ’ ಎಂದು ಹೇಳಿದರು.
ಯುರೋಪ್‌ನಲ್ಲಿ ವೃತ್ತಿಪರ ಬ್ಯಾಸ್ಕೆಟ್‌ಬಾಲ್ ಆಡಿದ ಭಾರತದ ಮೊದಲ ಆಟಗಾರನಾಗಿರುವ ಉಲ್ಲಾಸ್ ಅವರು ದೇಶದಲ್ಲಿ ಬ್ಯಾಸ್ಕೆಟ್‌ಬಾಲ್ ತರಬೇತಿಯನ್ನು ಉನ್ನತೀಕರಿಸುವ ಗುರಿಯೊಂದಿಗೆ ಯುವೈಬಿಎ ಆರಂಭಿಸಿದ್ದಾರೆ. ತಮಿಳುನಾಡಿನ 24 ವರ್ಷ ವಯಸ್ಸಿನ ಉಲ್ಲಾಸ್, ರಾಷ್ಟ್ರೀಯ ತಂಡ ಮತ್ತು ಅಂತರರಾಷ್ಟ್ರೀಯ ಲೀಗ್‌ಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ.
‘ಬೆಂಗಳೂರು ಮತ್ತು ನವದೆಹಲಿಯನ್ನು ಕೇಂದ್ರವಾಗಿಟ್ಟುಕೊಂಡು ಸದ್ಯ ಅಕಾಡೆಮಿ ಆರಂಭಿಸಲಾಗಿದೆ. ಮುಂದಿನ ದಿನಗಳಲ್ಲಿ ದೇಶದಾದ್ಯಂತ ವಿಸ್ತರಿಸುವ ಗುರಿ ಹೊಂದಲಾಗಿದೆ. ಬೆಂಗಳೂರು ಎಲೆಕ್ಟ್ರಾನಿಕ್ ಸಿಟಿಯ ಬಿಎಸ್ ಇಂಟರ್‌ನ್ಯಾಷನಲ್ ಸ್ಕೂಲ್ ಮತ್ತು ಕೆಂಗೇರಿಯ ಬಿಜಿಎಸ್ ಶಾಲೆಯೊಂದಿಗೆ ಈಗಾಗಲೇ ಒಪ್ಪಂದ ಮಾಡಿಕೊಳ್ಳಲಾಗಿದೆ. ವಿಶ್ವಮಟ್ಟದ ತರಬೇತಿಗಾಗಿ ಸರ್ಬಿಯಾದ ಮಿಲಾನ್ ಗುರುವಿಕ್ ಅಕಾಡೆಮಿ ಮತ್ತು ಅಮೆರಿಕದ ಸ್ಟಾಕ್‌ಟನ್ ಯೂನಿವರ್ಸಿಟಿ ಅಂಡ್ ಸ್ಟೈರ್ ಅಕಾಡೆಮಿಯೊಂದಿಗೂ ಪಾಲುದಾರಿಕೆ ಒಪ್ಪಂದ ಮಾಡಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.