ADVERTISEMENT

ಪ್ಯಾರಾಲಿಂಪಿಕ್ಸ್‌: ಸಾಗರ ತಳ, ಪರ್ವತ ಶ್ರೇಣಿಯಲ್ಲಿ ಕ್ರೀಡಾಜ್ಯೋತಿಯ ಪಯಣ

​ಪ್ರಜಾವಾಣಿ ವಾರ್ತೆ
Published 24 ಆಗಸ್ಟ್ 2024, 23:30 IST
Last Updated 24 ಆಗಸ್ಟ್ 2024, 23:30 IST
<div class="paragraphs"><p>ರಾಯಿಟರ್ಸ್ ಚಿತ್ರ</p></div>

ರಾಯಿಟರ್ಸ್ ಚಿತ್ರ

   

ಪ್ಯಾರಿಸ್‌: ಪ್ಯಾರಿಸ್‌ ಒಲಿಂಪಿಕ್ಸ್‌ ಜ್ಯೋತಿ ಆರಿ ಎರಡು ವಾರಗಳಾಗುತ್ತಿರುವಂತೆ ಪ್ಯಾರಾಲಿಂಪಿಕ್ಸ್‌  ಕ್ರೀಡಾಜ್ಯೋತಿಗೆ ಚಾಲನೆ ದೊರಕಿದೆ. ವಾಯುವ್ಯ ಲಂಡನ್‌ನ ಸ್ಟೋಕ್‌ ಮಾಂಡ್‌ವಿಲೆಯಲ್ಲಿ ಶನಿವಾರ ಪ್ಯಾರಾಲಿಂಪಿಕ್ಸ್‌ ಜ್ಯೋತಿ ಬೆಳಗಲಾಯಿತು.

ಸ್ಟೋಕ್‌ ಮಾಂಡ್‌ವಿಲೆಯನ್ನು ಪ್ಯಾರಾಲಿಂಪಿಕ್ಸ್‌ನ ಉಗಮತಾಣ ಎಂದು ಪರಿಗಣಿಸಲಾಗಿತ್ತಿದೆ. ಈ ಜ್ಯೋತಿ ಅಲ್ಲಿಂದ ಇಂಗ್ಲಿಷ್‌ ಕಡಲ್ಗಾಲುವೆ ಮೂಲಕ ಫ್ರಾನ್ಸ್‌ಗೆ ಪಯಣಿಸಲಿದೆ. ಅಟ್ಲಾಂಟಿಕ್ ಸಾಗರ ತೀರಪ್ರದೇಶಗಳ ಮೂಲಕ ಮೆಡಿಟರೇನಿಯನ್ ಕಿನಾರೆಗಳು, ಪಿರೆನೀಸ್‌ನಿಂದ ಆಲ್ಫ್ಸ್‌ ಪರ್ವತಶ್ರೇಣಿಗಳಲ್ಲಿ ಸಂಚರಿಸಲಿದೆ.

ADVERTISEMENT

ಜ್ಯೋತಿಯಾತ್ರೆಯಲ್ಲಿ 1,000 ಮಂದಿ ಭಾಗವಹಿಸಲಿದ್ದಾರೆ. ಮಾಜಿ ಪ್ಯಾರಾಲಿಂಪಿಯನ್ಸ್‌, ಯುವ ಪ್ಯಾರಾ ಅಥ್ಲೀಟುಗಳು, ತಂತ್ರಜ್ಞಾನದ ಕ್ಷೇತ್ರದ ಸಂಶೋಧಕರು ಇವರಲ್ಲಿ ಒಳಗೊಂಡಿದ್ದಾರೆ.

ಕ್ರೀಡಾ ಪ್ಯಾರಾಲಿಂಪಿಕ್ಸ್‌ ಜ್ಯೋತಿ ಆಗಸ್ಟ್‌ 28ರಂದು ಪ್ಯಾರಿಸ್‌ ತಲುಪಲಿದೆ. ಅಂದು ಪ್ಯಾರಾಲಿಂಪಿಕ್ಸ್‌ ಕ್ರೀಡೆಗಳ ಉದ್ಘಾಟನೆಯಾಗಲಿದೆ. ವಿಶೇಷವಾಗಿ ಸಿದ್ಧಪಡಿಸಿದ ಕಾಲ್ಡ್ರನ್‌ನಲ್ಲಿ (ಕಡಾಯಿಯಂಥ ರಚನೆ) ಜ್ಯೋತಿ ಬೆಳಗಿಸಲಾಗುವುದು. ಈ ವೇದಿಕೆಯ ಮೇಲೆ ಸ್ಪರ್ಧೆಗಳ 11 ದಿನ ಸಂಜೆ ವೇಳೆ ಬಿಸಿಗಾಳಿ ತುಂಬಿದ ಬಲೂನು ಹಾಡಾಡಲಿದೆ.

ಇತಿಹಾಸ

1948ರಲ್ಲಿ ಮೊದಲ ಬಾರಿ ವೀಲ್‌ ಚೇರ್‌ ಅಥ್ಲೀಟುಗಳಿಗೆ ಸ್ಟೋಕ್‌ ಮಾಂಡ್‌ವಿಲೆ ಕ್ರೀಡೆಗಳನ್ನು  ನಡೆಸಲಾಯಿತು. ಎರಡನೇ ವಿಶ್ವಯುದ್ಧದ ವೇಳೆ ಬೆನ್ನುಹುರಿಯ ಗಾಯಕ್ಕೆ ಒಳಗಾದವರು ಇದರಲ್ಲಿ ಭಾಗವಹಿಸಿದ್ದರು.

ಜರ್ಮನಿ ಮೂಲದ ಇಂಗ್ಲೆಂಡ್‌ನ ನರರೋಗ ತಜ್ಞ ಲುಡ್ವಿಗ್‌ ಗುಟ್‌ಮ್ಯಾನ್ (1899–1980) ಈ ರೀತಿಯ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು. ಅವರನ್ನು ಉತ್ತೇಜಿಸಲು ಕ್ರೀಡೆಗಳನ್ನು ನಡೆಸಲಾಯಿತು. ಇದು ಮುಂದೆ ಮೊದಲ ಪ್ಯಾರಾಲಿಂಪಿಕ್ಸ್‌ ಆರಂಭಕ್ಕೆ ಕಾರಣವಾಯಿತು. 1960ರಲ್ಲಿ ರೋಮ್‌ ಒಲಿಂಪಿಕ್ಸ್‌ ನಂತರ ಮೊದಲ ಪ್ಯಾರಾಲಿಂಪಿಕ್ಸ್ ನಡೆಯಿತು. ಸ್ಟೋಕ್‌ ಮಾಂಡ್‌ವಿಲೆಯಲ್ಲಿ ಜ್ಯೋತಿ ಬೆಳಗುವ ಸಂಪ್ರದಾಯ 2012ರ ಲಂಡನ್ ಪ್ಯಾರಾಲಿಂಪಿಕ್ಸ್‌ನಿಂದ ಆರಂಭವಾಯಿತು.

50 ಕಿ.ಮೀ. (30 ಮೈಲಿ) ಸುರಂಗಮಾರ್ಗದಲ್ಲಿ 24 ಬ್ರಿಟಿಷ್‌ ಅಥ್ಲೀಟುಗಳ ಗುಂಪು ಕ್ರೀಡಾಜ್ಯೋತಿಯೊಡನೆ ಓಡಲಿದೆ. ಅರ್ಧಭಾಗ ಕ್ರಮಿಸಿದ ನಂತರ ಇನ್ನೊಂದು ಕಡೆಯಿಂದ ಬರುವ ಫ್ರಾನ್ಸ್‌ನ 24 ಅಥ್ಲೀಟುಗಳ ಗುಂಪಿಗೆ ಜ್ಯೋತಿ ಹಸ್ತಾಂತರ ನಡೆಯಲಿದೆ. 12 ಪಂಜುಗಳನ್ನು ಬೆಳಗಿಸಲಾಗುವುದು.

ಜ್ಯೋತಿಯು ಪ್ಯಾರಿಸ್‌ ತಲುಪುವ ಹಾದಿಯಲ್ಲಿ 50 ನಗರಗಳನ್ನು ಹಾದುಹೋಗಿದೆ. ಅಂಗವಿಕಲರ ಅಭ್ಯುದಯಕ್ಕೆ ಮತ್ತು ಅವರನ್ನು ಒಳಗೊಳ್ಳುವ ಪ್ರಕ್ರಿಯೆಯಲ್ಲಿ ತೊಡಗಿರುವವರಿಗೆ ಉತ್ತೇಜಿಸುವುದು, ಜಾಗೃತಿ ಮೂಡಿಸುವುದು ಈ ಜ್ಯೋತಿ ಪಯಣದ ಉದ್ದೇಶ.

ಎರಡನೇ ವಿಶ್ವಸಮರದ ವೇಳೆ ನಾಜಿ ಜರ್ಮನಿಯ ಹಿಡಿತದಿಂದ ಫ್ರಾನ್ಸ್‌ ರಾಜಧಾನಿಯನ್ನು ಮುಕ್ತಗೊಳಿಸಿದ 80ನೇ ವರ್ಷದ ನೆನಪಿಗಾಗಿ ವಿಶೇಷ ಜ್ಯೋತಿಯೊಂದನ್ನು ಭಾನುವಾರ ಬೆಳಗಿಸಲಾಗುವುದು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.