ADVERTISEMENT

ಯುಟಿಟಿ ಯೂತ್‌ ಕಂಟೆಂಡರ್‌ ಇಂದಿನಿಂದ: ಕಣದಲ್ಲಿ ಕರ್ನಾಟಕದ ಯಶಸ್ವಿನಿ, ತನಿಷ್ಕಾ

ಪಿಟಿಐ
Published 1 ಜನವರಿ 2026, 23:30 IST
Last Updated 1 ಜನವರಿ 2026, 23:30 IST
ಯಶಸ್ವಿನಿ ಘೋರ್ಪಡೆ
ಯಶಸ್ವಿನಿ ಘೋರ್ಪಡೆ   

ವಡೋದರಾ: ವಿಶ್ವ ಟೇಬಲ್‌ ಟೆನಿಸ್‌ (ಯುಟಿಟಿ) ಯೂತ್‌ ಕಂಟೆಂಡರ್‌ ಮತ್ತು ಯುಟಿಟಿ ಫೀಡರ್‌ ಸರಣಿಯು ಇಲ್ಲಿನ ಸಮಾ ಒಳಾಂಗಣ ಕ್ರೀಡಾ ಸಂಕೀರ್ಣದಲ್ಲಿ ಶುಕ್ರವಾರ ಆರಂಭಗೊಳ್ಳಲಿದೆ. ಹತ್ತು ದೇಶಗಳಿಂದ 334 ಮಂದಿ ಸ್ಪರ್ಧಾ ಕಣದಲ್ಲಿದ್ದಾರೆ.

11ರಿಂದ 19 ವರ್ಷದೊಳಗಿನವರ ವಿಭಾಗಗಳನ್ನು ಒಳಗೊಂಡ ಯೂತ್‌ ಕಂಟೆಂಡರ್‌ನ ಎರಡನೇ ಆವೃತ್ತಿಯು ಇದೇ 2ರಿಂದ 5 ರವರೆಗೆ ನಡೆಯಲಿದೆ. ಇದೇ 7ರಿಂದ 11ರವರೆಗೆ ಫೀಡರ್ ಸರಣಿಯನ್ನು ಆಯೋಜಿಸಲಾಗಿದೆ. ಕರ್ನಾಟಕದ ಯಶಸ್ವಿನಿ ಘೋರ್ಪಡೆ ಮತ್ತು ತನಿಷ್ಕಾ ಕಾಲಭೈರವ ಕೂಟಕ್ಕೆ ವೈಲ್ಡ್‌ಕಾರ್ಡ್‌ ಪ್ರವೇಶ ಪಡೆದಿದ್ದಾರೆ.

ಯೂತ್‌ ಕಂಟೆಂಡರ್‌ನಲ್ಲಿ ನಾಲ್ಕು ದೇಶಗಳಿಂದ 226 ಮಂದಿ ಸ್ಪರ್ಧಿಸಲಿದ್ದಾರೆ. ಕೂಟದ ಮೊದಲ ದಿನ 13 ವರ್ಷದೊಳಗಿನವರ ಮತ್ತು 17 ವರ್ಷದೊಳಗಿನವರ ಸಿಂಗಲ್ಸ್‌ ಸ್ಪರ್ಧೆ ನಡೆಯಲಿದೆ. ಜ.4 ಮತ್ತು 5ರಂದು 11, 15 ಮತ್ತು 19 ವರ್ಷದೊಳಗಿನವರ ಸ್ಪರ್ಧೆಗಳು ನಿಗದಿಯಾಗಿವೆ. 

ADVERTISEMENT

ಕಳೆದ ವರ್ಷ ಯೂತ್‌ ಕಂಟೆಂಡರ್‌ ವಿಭಾಗದಲ್ಲಿ ಭಾರತವು ಪ್ರಾಬಲ್ಯ ಸಾಧಿಸಿತ್ತು, ಅಂಕುರ್ ಭಟ್ಟಾಚಾರ್ಜಿ ಮತ್ತು ಸಿಂಡ್ರೆಲಾ ದಾಸ್ ಅವರು ಕ್ರಮವಾಗಿ 19 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದರು.

ದಿವ್ಯಾಂಶಿ ಭೌಮಿಕ್ ಅವರು 15 ಮತ್ತು 17 ವರ್ಷದೊಳಗಿನವರ ಬಾಲಕಿಯರ ಸಿಂಗಲ್ಸ್ ಚಾಂಪಿಯನ್‌ ಆಗಿದ್ದರು. ಈ ವರ್ಷ ದಿವ್ಯಾಂಶಿ ಅವರು 17 ಮತ್ತು 19 ವರ್ಷದೊಳಗಿನವರ ವಿಭಾಗಗಳಲ್ಲಿ ಸ್ಪರ್ಧಿಸಲಿದ್ದಾರೆ. ಮತ್ತೊಂದೆಡೆ ಸಿಂಡ್ರೆಲಾ ತನ್ನ ಪ್ರಶಸ್ತಿ ಉಳಿಸಿಕೊಳ್ಳುವ ಗುರಿ ಹೊಂದಿದ್ದಾರೆ.

ಫೀಡರ್‌ ಸರಣಿಯಲ್ಲಿ ಹತ್ತು ದೇಶಗಳಿಂದ 108 ಸ್ಪರ್ಧಿಗಳು ಭಾಗವಹಿಸಲಿದ್ದಾರೆ. ಸಿಂಡ್ರೆಲಾ ಮತ್ತು ದಿವ್ಯಾಂಶಿ ಅವರು ಫೀಡರ್‌ ಸರಣಿಯಲ್ಲೂ ಕಣಕ್ಕೆ ಇಳಿಯುವರು. ಮಹಿಳಾ ಸಿಂಗಲ್ಸ್‌ನಲ್ಲಿ ಭಾರತದ ಸವಾಲನ್ನು ಅನುಭವಿಗಳಾದ ಸುತೀರ್ಥ ಮುಖರ್ಜಿ, ಐಹಿಕಾ ಮುಖರ್ಜಿ ಮತ್ತು ಕರ್ನಾಟಕದ ಯಶಸ್ವಿನಿ ಘೋರ್ಪಡೆ ಮುನ್ನಡೆಸಲಿದ್ದಾರೆ. 20 ವರ್ಷದ ಯಶಸ್ವಿನಿ ಅವರು ವೈಲ್ಡ್‌ ಕಾರ್ಡ್‌ ಪ್ರವೇಶ ಪಡೆದಿದ್ದು, ವಿಶ್ವ ರ‍್ಯಾಂಕಿಂಗ್‌ನಲ್ಲಿ 85ನೇ ಸ್ಥಾನದಲ್ಲಿದ್ದಾರೆ. 

ಪುರುಷರ ಸಿಂಗಲ್ಸ್‌ನಲ್ಲಿ ಮಾನುಷ್ ಶಾ, ಹರ್ಮೀತ್ ದೇಸಾಯಿ, ಸ್ನೇಹಿತ್ ಎಸ್ ಮತ್ತು ಅಂಕುರ್ ಭಟ್ಟಾಚಾರ್ಜಿ ಅವರು ತವರಿನ ಸವಾಲನ್ನು ಮುನ್ನಡೆಸಲಿದ್ದಾರೆ. ಮಾನುಷ್‌ ಅವರು ದಿಯಾ ಚಿತ್ತಾಲೆ ಅವರೊಂದಿಗೆ ಋತುವಿನ ಅಂತ್ಯದ ಡಬ್ಲ್ಯುಟಿಟಿ ಫೈನಲ್ಸ್‌ಗೆ ಅರ್ಹತೆ ಪಡೆದ ಭಾರತದ ಮೊದಲ ಮಿಶ್ರ ಡಬಲ್ಸ್ ಜೋಡಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದರು.

ತನಿಷ್ಕಾ ಕಾಲಭೈರವ

ಕರ್ನಾಟಕದ ಉದಯೋನ್ಮುಖ ಆಟಗಾರ್ತಿ ತನಿಷ್ಕಾ ಕಾಲಭೈರವ ಅವರೂ ಮಹಿಳೆಯರ ಸಿಂಗಲ್ಸ್‌ ಮತ್ತು ಮಹಿಳೆಯರ ಡಬಲ್ಸ್‌ಗೆ ವೈಲ್ಡ್‌ ಕಾರ್ಡ್‌ ಪಡೆದಿದ್ದಾರೆ. 14 ವರ್ಷದ ತನಿಷ್ಕಾ ಅವರು ಮಹಿಳೆಯರ ಸಿಂಗಲ್ಸ್‌ನಲ್ಲಿ ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ. ಡಬಲ್ಸ್‌ನ ಮುಖ್ಯ ಸುತ್ತಿನಲ್ಲಿ ಅವರು ಮರಿಯಾ ರೋನಿ ಅವರೊಂದಿಗೆ ಕಣಕ್ಕಿಳಿಯಲಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.