ADVERTISEMENT

ಡಬ್ಲ್ಯುಎಫ್‌ಐ ಬೆಂಬಲಕ್ಕೆ ನಿಂತ ವಿಶ್ವ ಕುಸ್ತಿ ಸಂಸ್ಥೆ

ಪಿಟಿಐ
Published 8 ಮಾರ್ಚ್ 2024, 15:47 IST
Last Updated 8 ಮಾರ್ಚ್ 2024, 15:47 IST
<div class="paragraphs"><p>ಸಾಂದರ್ಭಿಕ ಚಿತ್ರ</p></div>

ಸಾಂದರ್ಭಿಕ ಚಿತ್ರ

   

ನವದೆಹಲಿ: ವಿಶ್ವ ಕುಸ್ತಿ ಸಂಸ್ಥೆಯಾದ ಯುನೈಟೆಡ್‌ ವಲ್ಡ್‌ ರೆಸ್ಲಿಂಗ್‌ (ಯುಡಬ್ಲ್ಯುಡಬ್ಲ್ಯು) ಶುಕ್ರವಾರ ಭಾರತ ಕುಸ್ತಿ ಫೆಡರೇಷನ್‌ (ಡಬ್ಲ್ಯುಎಫ್‌ಐ) ಬೆನ್ನಿಗೆ ನಿಂತಿದ್ದು, ಫೆಡರೇಷನ್‌ ಮೂಲಕ ಬಂದ ಪ್ರವೇಶಗಳಿಗಷ್ಟೇ ತಾನು ಒಪ್ಪಿಗೆ ನೀಡುವುದಾಗಿ ಹೇಳಿದೆ. ಫೆಡರೇಷನ್‌ ವಹಿಸುವ ಪಾತ್ರವನ್ನು ಬೇರೆ ಯಾವುದೇ ಸಮಿತಿ ವಹಿಸುವಂತಿಲ್ಲ ಎಂದೂ ಸ್ಪಷ್ಟ ಮಾತುಗಳಲ್ಲಿ ಹೇಳಿದೆ.

ಮುಂಬರುವ ಏಷ್ಯನ್ ಚಾಂಪಿಯನ್‌ಷಿಪ್ ಮತ್ತು ಒಲಿಂಪಿಕ್‌ ಕ್ವಾಲಿಫೈಯರ್ಸ್‌ಗೆ ದೆಹಲಿಯಲ್ಲಿ ಮಾರ್ಚ್‌ 10 ಮತ್ತು 11ರಂದು ಟ್ರಯಲ್ಸ್‌ ನಡೆಸುವುದಾಗಿ ಹೊರಡಿಸಿರುವ ತನ್ನ ಸುತ್ತೋಲೆಯನ್ನು ಹಿಂದಕ್ಕೆ ಪಡೆಯುವುದಾಗಿ ಡಬ್ಲ್ಯುಎಫ್‌ಐ ಗುರುವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿತ್ತು. ಇದರ ಬೆನ್ನಲ್ಲೇ ಐಒಎ ನೇಮಕ ಮಾಡಿದ ಅಡ್‌ಹಾಕ್‌ ಸಮಿತಿಗೆ ಟ್ರಯಲ್ಸ್ ನಡೆಸಲು ನ್ಯಾಯಾಲಯ ಹೇಳಿತ್ತು. ಇದಾಗಿ ಒಂದು ದಿನದಲ್ಲೇ ಯುಡಬ್ಲ್ಯುಡಬ್ಲ್ಯು ಹೇಳಿಕೆ ಹೊರಬಿದ್ದಿದೆ.

ADVERTISEMENT

ಕ್ರೀಡಾ ಸಚಿವಾಲಯವು ಫೆಡರೇಷನ್‌ಅನ್ನು ಅಮಾನತಿನಲ್ಲಿಟ್ಟಿರುವ ಕಾರಣ ಅದು ಟ್ರಯಲ್ಸ್ ನಡೆಸುವಂತಿಲ್ಲ ಎಂದು ದೇಶದ ಪ್ರಮುಖ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ, ವಿನೇಶಾ ಫೋಗಾಟ್‌ ಮತ್ತು ಸಾಕ್ಷಿ ಮಲ್ಲಿಕ್ ದೆಹಲಿ ಹೈಕೋರ್ಟ್‌ ಮೊರೆ ಹೋಗಿದ್ದರು. ಈ ಅರ್ಜಿಯ ವಿಚಾರಣೆ ವೇಳೆ ಟ್ರಯಲ್ಸ್ ನಡೆಸುವ ವಿಚಾರ ಚರ್ಚೆಗೆ ಬಂದಿತ್ತು.

ಯುಡಬ್ಲ್ಯುಡಬ್ಲ್ಯುನಿಂದ ಮಾನ್ಯತೆ ಪಡೆದ ಡಬ್ಲ್ಯುಎಫ್‌ಐ ಮಾತ್ರ ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಪ್ರವೇಶಗಳನ್ನು ಕಳುಹಿಸಬಹುದು ಎಂದು ಅದರ ಅಧ್ಯಕ್ಷ ನೆನಾಡ್‌ ಲಾಲೊವಿಕ್‌, ಫೆಡರೇಷನ್ ಅಧ್ಯಕ್ಷ ಸಂಜಯ್ ಸಿಂಗ್ ಅವರಿಗೆ ತಿಳಿಸಿದ್ದಾರೆ. ಯುಡಬ್ಲ್ಯಡಬ್ಲ್ಯು ಇತ್ತೀಚೆಗಷ್ಟೇ ಫೆಡರೇಷನ್‌ನ ಮೇಲಿನ ಅಮಾನತನ್ನು (ಚುನಾವಣೆ ನಡೆಸಿದ ಕಾರಣ) ವಾಪಸು ಪಡೆದಿತ್ತು.

ಇದುವರೆಗೆ ಒಬ್ಬರು ಮಾತ್ರ– ಮಹಿಳೆಯರ 53 ಕೆ.ಜಿ. ವಿಭಾಗದಲ್ಲಿ ಅಂತಿಮ್‌ ಪಂಘಲ್– ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅವಕಾಶ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.