ಡಿ. ಗುಕೇಶ್
(ಪಿಟಿಐ ಚಿತ್ರ)
ನವದೆಹಲಿ: ವಿಶ್ವ ಚಾಂಪಿಯನ್ ಗುಕೇಶ್, ಹಾಲಿ ವಿಶ್ವಕಪ್ ರನ್ನರ್ ಅಪ್ ಪ್ರಜ್ಞಾನಂದ ಅವರು ಕಲಿತಿರುವ ಚೆನ್ನೈನ ಮೇಲಮ್ಮಾಳ್ ವಿದ್ಯಾಲಯ, ಅಮೆರಿಕದ ವರ್ಜೀನಿಯಾದಲ್ಲಿ ನಡೆದ ವಿಶ್ವ ಶಾಲೆಗಳ ಟೀಮ್ ಚೆಸ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿದೆ.
ಚೆನ್ನೈನಲ್ಲಿ ಚೆಸ್ ಆಟದ ಪ್ರಗತಿಯಲ್ಲಿ ಈ ಶಾಲೆ ಪ್ರಮುಖ ಪಾತ್ರ ವಹಿಸಿದೆ. ಇಲ್ಲಿ ಪ್ರವೇಶ ಪಡೆಯುವ ವಿದ್ಯಾರ್ಥಿಗಳಿಗೆ ತಜ್ಞ ಆಟಗಾರರಿಂದ ತರಬೇತಿ ನೀಡಲಾಗುತ್ತಿದೆ.
‘ಟೀಮ್ ಚಾಂಪಿಯನ್‌ಷಿಪ್‌ನ ಎಂಟು ಸುತ್ತುಗಳನ್ನು ಒಳಗೊಂಡಿತ್ತು. ಐದನೇ ಬೋರ್ಡ್‌ನಲ್ಲಿ ರಿಸರ್ವ್ ಆಟಗಾರನಾಗಿದ್ದ ವೇಲಮ್ಮಾಳ್ ಶಾಲೆಯ ಪ್ರಣವ್ ಕೆ.ಪಿ ಅವರು ಐದನೇ ಬೋರ್ಡ್‌ನಲ್ಲಿ, ಕಜಕಸ್ತಾನದ ಇಮಾಂಗಲಿ ಅಖಿಲ್ಬೆ ಮತ್ತು ಎಡಿಸಾ ಬೆರ್ಡಿಬಯೇವಾ ಅವರು ಎರಡನೇ ಬೋರ್ಡ್‌ನಲ್ಲಿ ಪರಿಪೂರ್ಣ ಎಂಟು ಅಂಕಗಳನ್ನು ಗಳಿಸಿದ್ದಾರೆ ಎಂದು ಫಿಡೆ ಗುರುವಾರ ಪ್ರಕಟಣೆಯಲ್ಲಿ ತಿಳಿಸಿದೆ.
ವೇಲಮ್ಮಾಳ್ ವಿದ್ಯಾಲಯ ಎಂಟು ಸುತ್ತುಗಳಿಂದ 16 ಅಂಕಗಳನ್ನು ಗಳಿಸಿದೆ. ಈ ತಂಡ ಎಲ್ಲ ಎಂಟೂ ಸುತ್ತಿನ ಪಂದ್ಯಗಳನ್ನು ಜಯಿಸಿತು ಎದು ಫಿಡೆ ಪ್ರಶಂಸಿಸಿದೆ.
‘ಚೆಸ್‌ನ ಸರ್ವ ಮಾದರಿಗಳಲ್ಲಿ ಭಾರತ ಅಲೆಗಳನ್ನೆಬ್ಬಿಸುತ್ತಿದೆ. ಆ ದೇಶದ ಪ್ರಶಸ್ತಿಯ ಸಂಗ್ರಹದಲ್ಲಿ ಮತ್ತೊಂದು ಪ್ರಶಸ್ತಿ ಸೇರಿಕೊಂಡಿದೆ’ ಎಂದು ಫಿಡೆ ಮೆಚ್ಚುಗೆ ಸೂಚಿಸಿದೆ.
ಕೇವಲ ಗುಕೇಶ್ ಮತ್ತು ಪ್ರಜ್ಞಾನಂದ ಮಾತ್ರವಲ್ಲ, ಗ್ರ್ಯಾಂಡ್‌ಮಾಸ್ಟರ್‌ಗಳಾದ ಎಸ್.ಪಿ.ಸೇತುರಾಮ್‌ನ, ವಿಷ್ಣು ಪ್ರಸನ್ನ, ಲಿಯಾನ್ ಮೆಂಡೋನ್ಸಾ, ಎನ್.ಆರ್.ವಿಘ್ನೇಶ್, ವಿ.ಪ್ರಣವ್, ಅರ್ಜುನ್ ಕಲ್ಯಾಣ್ ಸೇರಿದಂತೆ ದೇಶದ ಹಲವು ಪ್ರಮುಖ ಆಟಗಾರರು ಈ ಶಾಲೆಯಲ್ಲಿ ಕಲಿತವರು.
ಕಜಕಸ್ತಾನದ ನ್ಯಾಷನಲ್ ಸ್ಕೂಲ್ ಆಫ್ ಫಿಸಿಕ್ಸ್ ಆ್ಯಂಡ್ ಮ್ಯಾಥಮೆಟಿಕ್ಸ್ ತಂಡವು ಬೆಳ್ಳಿ ಮತ್ತು ಅಮೆರಿಕದ ಹಾರ್ಕರ್ ಸ್ಕೂಲ್ ಕಂಚಿನ ಪದಕ ಗೆದ್ದುಕೊಂಡವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.