ADVERTISEMENT

ವಿಶ್ವ ಚಾಂಪಿಯನ್‌ಷಿಪ್‌ ಟ್ರಯಲ್ಸ್‌: ಸೋತರೆ ವಿನೇಶಾ, ಬಜರಂಗ್‌ಗೆ ಸಮಸ್ಯೆ?

​ಪ್ರಜಾವಾಣಿ ವಾರ್ತೆ
Published 25 ಜುಲೈ 2023, 18:47 IST
Last Updated 25 ಜುಲೈ 2023, 18:47 IST
ಬಜರಂಗ್‌ ಪೂನಿಯಾ ಹಾಗೂ ವಿನೇಶಾ ಪೋಗಟ್‌– ಪಿಟಿಐ ಚಿತ್ರಗಳು
ಬಜರಂಗ್‌ ಪೂನಿಯಾ ಹಾಗೂ ವಿನೇಶಾ ಪೋಗಟ್‌– ಪಿಟಿಐ ಚಿತ್ರಗಳು   

ನವದೆಹಲಿ: ಮುಂಬರುವ ವಿಶ್ವ ಚಾಂಪಿಯನ್‌ಷಿಪ್‌ನ ಟ್ರಯಲ್ಸ್‌ನಲ್ಲಿ ಸೋತರೆ, ಬಜರಂಗ್ ಪೂನಿಯಾ ಮತ್ತು ವಿನೇಶಾ ಫೋಗಟ್‌ ಅವರನ್ನು ಏಷ್ಯನ್‌ ಕ್ರೀಡಾಕೂಟದ ತಂಡದಿಂದ ಕೈಬಿಡಬೇಕು ಎಂಬ ಪ್ರಸ್ತಾವವನ್ನು ಭಾರತ ಒಲಿಂಪಿಕ್‌ ಸಂಸ್ಥೆಯ ಅಡಹಾಕ್‌ ಸಮಿತಿ ಮುಂದಿಡಲಾಗುವುದು ಎಂದು ಸಮಿತಿ ಸದಸ್ಯರೊಬ್ಬರು ಮಂಗಳವಾರ ತಿಳಿಸಿದ್ದಾರೆ.

ಪುನಿಯಾ (ಪುರುಷರ 65 ಕೆ.ಜಿ. ಫ್ರೀಸ್ಟೈಲ್‌) ಮತ್ತು ವಿನೇಶಾ ಫೋಗಟ್‌ (ಮಹಿಳೆಯರ 53 ಕೆ.ಜಿ) ಅವರಿಗೆ ಏಷ್ಯನ್‌ ಗೇಮ್ಸ್‌ ತಂಡಕ್ಕೆ ಈಗ ನೇರ ಪ್ರವೇಶ ನೀಡಲಾಗಿದೆ. ಇತರ 16 ತೂಕ ವಿಭಾಗಗಳಲ್ಲಿ ಪೈಲ್ವಾನರನ್ನು ಜುಲೈ 22, 23ರಂದು ಟ್ರಯಲ್ಸ್‌ ಮೂಲಕ ಆಯ್ಕೆ ಮಾಡಲಾಗಿತ್ತು. ಏಷ್ಯನ್‌ ಕ್ರೀಡಾಕೂಟ ಸೆಪ್ಟೆಂಬರ್‌ 23ರಂದು ಚೀನಾದ ಹಾಂಗ್‌ಝೌನಲ್ಲಿ ಆರಂಭವಾಗಲಿದೆ.

ಪೂನಿಯಾ, ಫೋಗಟ್ ಮತ್ತು ಇತರ ನಾಲ್ವರು ಕುಸ್ತಿಪಟುಗಳು ದೆಹಲಿಯ ಜಂತರ್‌ ಮಂಥರ್‌ನಲ್ಲಿ ಮೇ–ಜೂನ್‌ನಲ್ಲಿ ನಡೆದಿದ್ದ ಧರಣಿಯ ನೇತೃತ್ವ ವಹಿಸಿದ್ದರು. ತಮಗೆ ಟ್ರಯಲ್ಸ್‌ಗೆ ಸಜ್ಜಾಗಲು ಆ. 10ರವರೆಗೆ ಕಾಲಾವಕಾಶ ಬೇಕು ಎಂದು ಮನವಿ ಮಾಡಿದ್ದರು. ಆದರೆ, ಆಯ್ಕೆಯಾದ ಕುಸ್ತಿಪಟುಗಳ ಹೆಸರುಗಳನ್ನು ಕಳುಹಿಸಲು ನಿಗದಿಪಡಿಸಿದ ಜುಲೈ 23ರ ಗಡುವನ್ನು ವಿಸ್ತರಿಸಲು ಏಷ್ಯ ಒಲಿಂಪಿಕ್‌ ಕೌನ್ಸಿಲ್‌ (ಒಸಿಎ) ಒಪ್ಪಿರಲಿಲ್ಲ.

ADVERTISEMENT

ಬಳಿಕ, ಪೂನಿಯಾ ಮತ್ತು ಫೋಗಟ್‌ ಅವರಿಗೆ ಟ್ರಯಲ್ಸ್‌ನಿಂದ ವಿನಾಯಿತಿ ನೀಡುವ ಅಡ್‌ಹಾಕ್ ಸಮಿತಿ ನಿರ್ಧಾರಕ್ಕೆ ಕುಸ್ತಿಪಟುಗಳ ವಲಯದಿಂದ ಆಕ್ರೋಶ ವ್ಯಕ್ತವಾಗಿತ್ತು.

ಬಜರಂಗ್ ಮತ್ತು ವಿನೇಶಾ ಅವರು ವಿಶ್ವಚಾಂಪಿಯನ್‌ಷಿಪ್‌ ಟ್ರಯಲ್ಸ್‌ನಲ್ಲಿ ಗೆದ್ದರೆ ಮಾತ್ರ ಅವರನ್ನು ಏಷ್ಯನ್‌ ಗೇಮ್ಸ್‌ಗೆ ಕಳುಹಿಸಬೇಕು. ಇಲ್ಲವಾದರೆ ಬೇಡ. ಬಜರಂಗ್ ಸೋತರೆ ಆ ವಿಭಾಗದಲ್ಲಿ ಈಗ ಏಷ್ಯನ್‌ ಗೇಮ್ಸ್ ಟ್ರಯಲ್ಸ್‌ನಲ್ಲಿ ಸ್ಟ್ಯಾಂಡ್‌ಬೈ ಆಗಿರುವ ವಿಶಾಲ್‌ ಕಾಳಿರಾಮನ್‌ ಅವರಿಗೆ ಅವಕಾಶ ಕೊಡಬೇಕು ಎಂದು ಸಮಿತಿಗೆ ಶಿಫಾರಸು ಮಾಡುತ್ತೇವೆ ಎಂದು ಸದಸ್ಯ ಗ್ಯಾನ್‌ ಸಿಂಗ್ ತಿಳಿಸಿದರು. ಮಹಿಳೆಯರ ವಿಭಾಗದ 53 ಕೆ.ಜಿ. ತೂಕ ಕ್ಲಾಸ್‌ನಲ್ಲಿ ಅಂತಿಮ್ ಪಂಘಲ್ ಅವರು ಸ್ಟ್ಯಾಂಡ್‌ಬೈ ಆಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.