ನೋವಿಸಾಡ್ (ಸರ್ಬಿಯಾ): ಭಾರತದ ಗ್ರೀಕೊ ರೋಮನ್ ಕುಸ್ತಿಪಟು ವಿಶ್ವಜೀತ್ ಮೋರೆ ಅವರು ಇಲ್ಲಿ ನಡೆಯುತ್ತಿರುವ 23 ವರ್ಷದೊಳಗಿನವರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮಂಗಳವಾರ ಕ್ವಾರ್ಟರ್‌ಫೈನಲ್ ತಲುಪಿದರು. ಆದರೆ, ಕಣದಲ್ಲಿದ್ದ ಭಾರತದ ಇತರ ಮೂವರು ಕುಸ್ತಿಪಟುಗಳು ಮೊದಲ ಸುತ್ತಿನಲ್ಲಿಯೇ ಟೂರ್ನಿಯಿಂದ ಹೊರಬಿದ್ದರು.
21 ವರ್ಷ ವಯಸ್ಸಿನ ಮೋರೆ ಅವರು ಮೊದಲ ಸುತ್ತಿನ ಪಂದ್ಯದಲ್ಲಿ 6–2ರಿಂದ ಕಿರ್ಗಿಸ್ತಾನದ ಡೆನಿಸ‌್ ಫ್ಲೋರಿನ್ ಮಿಹೈ ವಿರುದ್ಧ ಸುಲಭ ಗೆಲುವು ಸಾಧಿಸಿದರು. 16ರ ಘಟ್ಟದಲ್ಲಿ ಅಮೆರಿಕದ ಕೆನೆತ್ ಆ್ಯಂಡ್ರ್ಯೂ ಕ್ರಾಸ್ಬಿ ಅವರನ್ನು 9–1ರಿಂದ ಅಧಿಕಾರಯುತವಾಗಿ ಮಣಿಸಿದರು.
67 ಕೆ.ಜಿ. ವಿಭಾಗದಲ್ಲಿ ಸ್ಪರ್ಧಿಸಿರುವ ನಿಶಾಂತ್ ಅವರು ಕ್ವಾಲಿಫಿಕೇಷನ್ ಸುತ್ತಿನಲ್ಲಿ 3–8ರಿಂದ ಅಜರ್‌ಬೈಜಾನ್‌ನ ಫರೈಮ್ ಮುಸ್ತಾಫಾಯೆವ್ ವಿರುದ್ಧ ಸೋಲು ಕಂಡರು. ಅನಿಲ್ (72 ಕೆ.ಜಿ.) ಅವರು 1–6ರಿಂದ ಅರ್ಮೇನಿಯಾದ ಗ್ಯಾಸ್ಪರ್ ಟರ್ಟೆರ್ಯಾನ್ ಎದುರು ಪರಾಭವಗೊಂಡರು.
97 ಕೆ.ಜಿ. ವಿಭಾಗದಲ್ಲಿ ಅರ್ಮೇನಿಯಾದ ಅರ್ಷಕ್ ಗೆಘಮ್ಯಾನ್ ಅವರು 9–0ಯಿಂದ ತಾಂತ್ರಿಕ ಪರಿಣತಿಯ ಆಧಾರದಲ್ಲಿ ನಮನ್ ವಿರುದ್ಧ ಜಯ ಸಾಧಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.