ADVERTISEMENT

ಕುಸ್ತಿ ಫೆಡರೇಷನ್ ಅಧ್ಯಕ್ಷರಿಂದ ಲೈಂಗಿಕ ಶೋಷಣೆ; ವಿನೇಶಾ ಆರೋಪ

​ಪ್ರಜಾವಾಣಿ ವಾರ್ತೆ
Published 18 ಜನವರಿ 2023, 16:54 IST
Last Updated 18 ಜನವರಿ 2023, 16:54 IST
ಕಣ್ಣೀರಿಟ್ಟ ವಿನೇಶಾ ಪೋಗಟ್
ಕಣ್ಣೀರಿಟ್ಟ ವಿನೇಶಾ ಪೋಗಟ್   

ನವದೆಹಲಿ: ‘ಭಾರತ ಕುಸ್ತಿ ಫೆಡರೇಷನ್ ಅಧ್ಯಕ್ಷ ಬ್ರಿಜ್ ಭೂಷಣ್ ಶರಣ್‌ ಸಿಂಗ್ ಅವರು ಬಹಳ ವರ್ಷಗಳಿಂದ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗುತ್ತಿದ್ದಾರೆ’ ಎಂದು ಒಲಿಂಪಿಯನ್ ಕುಸ್ತಿಪಟು ವಿನೇಶಾ ಪೋಗಟ್ ಆರೋಪಿಸಿದ್ದಾರೆ.

ಭಾರತೀಯ ಜನತಾಪಕ್ಷದ ಸಂಸದರೂ ಆಗಿರುವ ಸಿಂಗ್ ಅವರ ವಿರುದ್ಧ ಬುಧವಾರ ಖ್ಯಾತನಾಮ ಕುಸ್ತಿಪಟುಗಳು ಜಂತರ್‌ ಮಂಥರ್‌ನಲ್ಲಿ ಪ್ರತಿಭಟನೆ ಆರಂಭಿಸಿದ್ದಾರೆ. ಈ ಸಂದರ್ಭದಲ್ಲಿ ವಿನೇಶಾ ಈ ಆರೋಪ ಮಾಡಿದ್ದಾರೆ.

‘ನನ್ನೊಂದಿಗೆ ಅಂತಹ ಯಾವುದೇ ದೌರ್ಜನ್ಯ ಪ್ರಕರಣ ನಡೆದಿಲ್ಲ. ಆದರೆ, ಆದರೆ ಶೋಷಣೆಗೊಳಗಾದ ಒಬ್ಬ ಮಹಿಳಾ ಕುಸ್ತಿಪಟು ಈ ಧರಣಿಯಲ್ಲಿ ನಮ್ಮೊಂದಿಗಿದ್ದಾರೆ’ ಎಂದೂ ವಿನೇಶಾ ಸ್ಪಷ್ಟಪಡಿಸಿದರು.

ADVERTISEMENT

‘ಲಖನೌನಲ್ಲಿ ನಡೆದ ರಾಷ್ಟ್ರೀಯ ತರಬೇತಿ ಶಿಬಿರಗಳಲ್ಲಿ ಕೆಲವು ಕೋಚ್‌ಗಳೂ ಮಹಿಳಾ ಪಟುಗಳನ್ನು ಲೈಂಗಿಕವಾಗಿ ಶೋಷಣೆ ಮಾಡಿದ್ದಾರೆ. ಫೆಡರೇಷನ್ ಅಧ್ಯಕ್ಷರ ಆಜ್ಞೆಯನ್ನು ಪಾಲಿಸುವ ಕೆಲವು ಮಹಿಳಾ ಕುಸ್ತಿಪಟುಗಳೂ ಈ ಶಿಬಿರದಲ್ಲಿದ್ದಾರೆ’ ಎಂದು 28 ವರ್ಷದ ವಿನೇಶಾ ಆಪಾದಿಸಿದ್ದಾರೆ.

ಈ ಸಂದರ್ಭದಲ್ಲಿ ಹಾಜರಿದ್ದ ಒಲಿಂಪಿಕ್ ಪದಕವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ, ‘ಕೇಂದ್ರ ಗೃಹ ಸಚಿವರನ್ನು ಭೇಟಿಯಾಗಿ ಎಲ್ಲ ವಿಷಯಗಳನ್ನೂ ತಿಳಿಸಿದ್ದೇವೆ. ಸಮಸ್ಯೆಯನ್ನು ಪರಿಹರಿಸಿ, ನ್ಯಾಯ ನೀಡಲಾಗುವುದೆಂದು ಅವರು ಭರವಸೆ ನೀಡಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.