ADVERTISEMENT

ತೂಕ ಇಳಿಸಿಕೊಳ್ಳಲು ಇಲ್ಲಿದೆ ಮಾಹಿತಿ

ಪೃಥ್ವಿರಾಜ್ ಎಂ ಎಚ್
Published 15 ಸೆಪ್ಟೆಂಬರ್ 2019, 20:00 IST
Last Updated 15 ಸೆಪ್ಟೆಂಬರ್ 2019, 20:00 IST
   

‘ಮುಂದಿನ ತಿಂಗಳು ಮದುವೆ ಇದೆ, ಅಷ್ಟರೊಳಗೆ ತೂಕ ಇಳಿಸಿಕೊಂಡರೆ ಚೆನ್ನಾಗಿರುತ್ತದೆ. ಕೆಲವೇ ದಿನಗಳಲ್ಲಿ ಸಮಾರಂಭವಿದೆ ಅಷ್ಟರಲ್ಲಿ ದೇಹ ಸಪೂರವಾಗಬೇಕು... ಇಂತಹ ಯೋಚನೆಗಳು, ತೂಕ ಹೆಚ್ಚಾಗಿರುವವರಿಗೆ ಕಾಡುವುದು ಸಹಜ. ‘ಜೀರೊ ಸೈಜ್‌’ ವ್ಯಾಮೋಹ ಹೆಚ್ಚಾದ ಮೇಲೆ ಹಲವರಿಗೆ ದೇಹದ ತೂಕದ್ದೇ ಚಿಂತೆ. ಕಡಿಮೆ ಅವಧಿಯಲ್ಲಿ ಪರಿಣಾಮಕಾರಿಯಾಗಿ ದೇಹದ ತೂಕ ಇಳಿಸಿಕೊಳ್ಳುವುದಕ್ಕೆ ಒಂದಿಷ್ಟು ಮಾಹಿತಿ ಇಲ್ಲಿದೆ.

ಅಂಕಿ–ಸಂಖ್ಯೆಗಳ ಮಾಹಿತಿ ಇರಲಿ

ತೂಕ ಇಳಿಸಿಕೊಳ್ಳಬೇಕೆಂದು ನಿರ್ಧರಿಸುವವರು, ಮೊದಲು ದೇಹದ ತೂಕ ಎಷ್ಟಿದೆ. ಎಷ್ಟು ಪ್ರಮಾಣದಲ್ಲಿ ಇಳಿಸಿಕೊಳ್ಳಬೇಕು ಎಂಬ ಬಗ್ಗೆ ಸ್ಪಷ್ಟತೆ ಹೊಂದಿರಬೇಕು. ದೇಹದಲ್ಲಿ ಕೊಬ್ಬಿನ ಪ್ರಮಾಣ ಎಷ್ಟಿದೆ. ಎಂತಹ ವ್ಯಾಯಾಮಗಳನ್ನು ಮಾಡಿದರೆ ಕೊಬ್ಬು ಕರಗುತ್ತದೆ ಎಂಬುದನ್ನು ತಜ್ಞರ ಮೂಲಕ ತಿಳಿದುಕೊಂಡು ಅಂತಹ ವ್ಯಾಯಾಮಗಳನ್ನು ನಿತ್ಯ ಅಭ್ಯಾಸ ಮಾಡುವುದಕ್ಕೆ ಅಣಿಯಾಗಬೇಕು.

ADVERTISEMENT

ತಿಂಡಿಗಳಿಂದ ದೂರವಿರಿ

ಜಿಮ್‌ನಲ್ಲಿ ಹೆಚ್ಚು ಹೊತ್ತು ಬೆವರು ಹರಿಸಿದಷ್ಟೂ ಹಸಿವು ಹೆಚ್ಚಾಗುತ್ತದೆ. ಹೀಗಾಗಿ ಲಭ್ಯವಿರುವ ತಿಂಡಿಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುವ ಪ್ರಯತ್ನ ಮಾಡುವುದು ಸಹಜ. ಇದರಿಂದ ಕರಗಿದ ಕ್ಯಾಲೊರಿಗಳು ಮತ್ತೆ ದೇಹದಲ್ಲಿ ಶೇಖರಣೆಯಾಗುವ ಸಾಧ್ಯತೆ ಇರುತ್ತದೆ. ತೂಕ ಇಳಿಸಿಕೊಳ್ಳುವುದೇ ನಿಮ್ಮ ಗುರಿಯಾದರೆ ಬಾಯಿ ಕಟ್ಟುವುದು ಉತ್ತಮ ಪರಿಹಾರ. ಇದರ ಬದಲಿಗೆ ಫಿಟ್‌ನೆಸ್‌ ಹೆಚ್ಚಿಸುವ ಮತ್ತು ಆರೋಗ್ಯ ಕಾಪಾಡುವಂತಹ ತಿಂಡಿಗಳನ್ನು ಅಗತ್ಯವಿದ್ದಾಗ ತಿನ್ನುವುದು ಉತ್ತಮ.

ಕಾರ್ಬೊಹೈಡ್ರೇಟ್‌ಗಳು ಹೆಚ್ಚು ಬೇಡ

ಸಾಧ್ಯವಾದಷ್ಟು ದೇಹ ದಂಡಿಸಲು ಪ್ರಯತ್ನಿಸಿದ ಮೇಲೆ ಕಾರ್ಬೊಹೈಡ್ರೇಟ್ಸ್‌ಗಳು ಹೆಚ್ಚಾಗಿರುವಂತಹ ಆಹಾರ ಸೇವಿಸುವುದು ಬೇಡ. ಇದು ದೇಹದಲ್ಲಿ ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ನೀರು ಶೇಖರಣೆಯಾಗುವಂತೆ ಮಾಡಿ ತೂಕ ಹೆಚ್ಚಿಸುತ್ತದೆ. ಇದರ ಸೇವನೆ ಕಡಿಮೆ ಮಾಡಿದರೆ ಕಡಿಮೆ ಅವಧಿಯಲ್ಲಿ ತೂಕ ಇಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ. ಬದಲಿಗೆ ಪ್ರೊಟೀನ್‌ಯುಕ್ತ ಆಹಾರ ಸೇವಿಸಿದರೆ ದೇಹದ ಮಾಂಸಖಂಡಗಳು ದೃಢವಾಗುವುದಕ್ಕೆ ನೆರವಾಗುತ್ತದೆ.

ತಾಜಾ ತರಕಾರಿ

'ಹಸಿ ತಾಜಾ ತರಕಾರಿಯನ್ನು ಹೆಚ್ಚು ಸೇವಿಸುವುದು ದೇಹದ ಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ನೆರವಾಗುತ್ತದೆ. ಆದರೆ, ಅಗತ್ಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೇವಿಸಿದರೆ, ದೇಹ ಸಪೂರಗೊಳಿಸಿಕೊಳ್ಳಬೇಕು ಎಂಬ ನಿಮ್ಮ ಬಯಕೆಗೆ ತಡೆಯಾಗುತ್ತದೆ. ಹಸಿ ತರಕಾರಿ ಜೀರ್ಣವಾಗುವುದಕ್ಕೆ ಹೆಚ್ಚು ಸಮಯ ಬೇಕಾಗುತ್ತದೆ. ಇದರಿಂದ ಅಸೌಕರ್ಯದ ಭಾವನೆಯೂ ಕಾಡುತ್ತಿರುತ್ತದೆ. ಹೀಗಾಗಿ ವ್ಯಾಯಾಮದ ನಂತರ ಹೆಚ್ಚಿನ ಪ್ರಮಾಣದಲ್ಲಿ ಹಸಿ ತರಕಾರಿ ಸೇವಿಸುವುದು ಬೇಡ.

ಫಿಟ್‌ನೆಸ್ ಟ್ರ್ಯಾಕರ್‌

ಆಗಾಗ್ಗೆ ತೂಕ ಪರಿಶೀಲಿಸಿಕೊಂಡು ವ್ಯಾಯಾಮ ಮಾಡುವುದು ಒಳ್ಳೆಯದೇ ಆದರೂ, ಉತ್ತಮ ಫಿಟ್‌ನೆಸ್ ಟ್ರ್ಯಾಕರ್‌ ಅಥವಾ ಬ್ಯಾಂಡ್‌ಗಳನ್ನು ಧರಿಸಿದ್ದರೆ ಹೆಚ್ಚು ಅನುಕೂಲವಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿರುವ ಕೆಲವು ಉತ್ತಮ ಟ್ರ್ಯಾಕರ್‌ಗಳು, ನಾಡಿ ಮಿಡಿತ, ಹೃದಯ ಬಡಿತ, ವ್ಯಾಯಾಮದ ನಂತರ ಕರಗಿದ ಕ್ಯಾಲರಿಗಳ ಪ್ರಮಾಣ... ಹೀಗೆ ಹಲವು ಮಾಹಿತಿ ನೀಡುತ್ತವೆ. ಹೀಗಾಗಿ ಉತ್ತಮ ಫಿಟ್‌ನೆಸ್‌ ಟ್ರ್ಯಾಕರ್ ಧರಿಸಿ ವ್ಯಾಯಾಮ ಮಾಡುವುದರಿಂದ ಹೆಚ್ಚು ಅನುಕೂಲವಾಗುತ್ತದೆ. ಇನ್ನೂ ಕೆಲವು ಟ್ರ್ಯಾಕರ್‌ಗಳು ದಿನದಲ್ಲಿ ಎಷ್ಟು ತೂಕ ಇಳಿಸಿಕೊಂಡಿದ್ದೇವೆ. ಗುರಿ ಎಷ್ಟಿತ್ತು, ಯಾವ ವ್ಯಾಯಾಮ ಸೂಕ್ತ ಎಂಬ ಮಾಹಿತಿಯನ್ನೂ ನೀಡುತ್ತವೆ. ಇದರಿಂದ ಯೋಜನಾಬದ್ಧವಾಗಿ ತೂಕ ಇಳಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.

ದೇಹ ದಂಡಿಸುವ ರೀತಿ ಉತ್ತಮವಾಗಿರಲಿ

ತಜ್ಞರ ಅಥವಾ ಫಿಟ್‌ನೆಸ್‌ ತರಬೇತುದಾರರ ಸಲಹೆ ಪಡೆದು ಉತ್ತಮ ವಿಧಾನದಲ್ಲಿ ದೇಹ ದಂಡಿಸಿಬೇಕು. ಇದಕ್ಕಾಗಿ ತುಸು ಹೆಚ್ಚಿನ ಅವಧಿ ಮೀಸಲಿಟ್ಟರೆ, ದೇಹದಲ್ಲಿ ಚಯಾಪಚಯ ಕ್ರಿಯೆಗಳು ಹೆಚ್ಚಾಗುತ್ತವೆ. ಇದರಿಂದ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಆಮ್ಲಜನಕ ಪೂರೈಕೆಯಾಗುತ್ತದೆ. ಗ್ರೆಲಿನ್ ಹಾರ್ಮೊನು ಬಿಡುಗಡೆ ಪ್ರಮಾಣವೂ ಕಡಿಮೆಯಾಗುತ್ತದೆ.

ಈ ಮಾಹಿತಿ ತೂಕ ಇಳಿಸಿಕೊಳ್ಳುವುದಕ್ಕೆ ಸಾಧ್ಯವಾದಷ್ಟು ನೆರವಾಗುತ್ತವೆ. ಆದರೆ ಸೀಮಿತಾವಧಿಯ ಫಲಿತಾಂಶಗಳು, ದೀರ್ಘಾವಧಿ ಶ್ರಮದಿಂದ ದೊರೆಯುವ ಫಲಿತಾಂಶದಷ್ಟು ಉತ್ತಮವಾಗಿರುವುದಿಲ್ಲ. ನಿತ್ಯ ವ್ಯಾಯಾಮ ಮಾಡುವುದು, ಉತ್ತಮ ಆಹಾರ ಪದ್ಧತಿಗಳನ್ನು ರೂಢಿಸಿಕೊಂಡರೆ ದೀರ್ಘಾವಧಿವರೆಗೆ ಆರೋಗ್ಯವನ್ನು ಮತ್ತು ದೇಹದ ಫಿಟ್‌ನೆಸ್ ಕಾಪಾಡಿಕೊಳ್ಳುವುದಕ್ಕೆ ನೆರವಾಗುತ್ತದೆ.

ತಜ್ಞರು ಸೂಚಿಸಿದ ಆಹಾರ ಸೇವಿಸಿ

ವ್ಯಾಯಾಮ ಮಾಡುವುದನ್ನು ಆರಂಭಿಸಿದ ಮೇಲೆ ಶಕ್ತಿಗಾಗಿ ಸೂಕ್ತ ಆಹಾರ ಸೇವಿಸುವುದು ಉತ್ತಮ. ಇದು ದೇಹ ಬಳಲದಂತೆ ನೆರವಾಗುತ್ತದೆ. ಆದರೆ ಬಹುತೇಕರು ವ್ಯಾಯಾಮ ಮಾಡಿದ ಕೆಲವು ಗಂಟೆಗಳ ನಂತರ ಊಟ ಮಾಡುವುದನ್ನು ರೂಢಿಸಿಕೊಂಡಿರುತ್ತಾರೆ. ಹೀಗಾಗಿ ತಜ್ಞರು ಅಥವಾ ತರಬೇತುದಾರರ ಸೂಚನೆ ಪಡೆದು ಆಹಾರ ಅಭ್ಯಾಸಗಳನ್ನು ಅಳವಡಿಸಿಕೊಳ್ಳಿ. ವ್ಯಾಯಾಮ ಆರಂಭಿಸುವುದಕ್ಕೂ ಮುನ್ನ ಬಾಳೆಹಣ್ಣು ಸೇವಿಸುವುದು ಉತ್ತಮ ಎಂಬುದು ಹಲವರ ಸಲಹೆ. ಇದು ದೇಹಕ್ಕೆ ಬೇಕಾಗುವ ಶಕ್ತಿ ನೀಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.