ADVERTISEMENT

ವಿಶ್ವಕಪ್ ಹಾಕಿ: ಅಜೇಯ ಭಾರತಕ್ಕೆ ಡಚ್ಚರ ಸವಾಲು

ಪ್ರಬಲ ಪೈಪೋಟಿ ನಿರೀಕ್ಷೆ

ಪಿಟಿಐ
Published 12 ಡಿಸೆಂಬರ್ 2018, 17:14 IST
Last Updated 12 ಡಿಸೆಂಬರ್ 2018, 17:14 IST
ನೆದರ್ಲೆಂಡ್ ತಂಡದ ವಿರುದ್ಧ ಮನಪ್ರೀತ್ ಸಿಂಗ್ ಬಳಗ ಗೆಲುವಿನ ನಿರೀಕ್ಷೆಯಲ್ಲಿದೆ –ಪಿಟಿಐ ಚಿತ್ರ
ನೆದರ್ಲೆಂಡ್ ತಂಡದ ವಿರುದ್ಧ ಮನಪ್ರೀತ್ ಸಿಂಗ್ ಬಳಗ ಗೆಲುವಿನ ನಿರೀಕ್ಷೆಯಲ್ಲಿದೆ –ಪಿಟಿಐ ಚಿತ್ರ   

ಭುವನೇಶ್ವರ: ಗುಂಪು ಹಂತದಲ್ಲಿ ಅಜೇಯವಾಗಿದ್ದ ಭಾರತ ತಂಡ ವಿಶ್ವಕಪ್‌ ಹಾಕಿ ಟೂರ್ನಿಯ ಕ್ವಾರ್ಟರ್ ಫೈನಲ್‌ ಪಂದ್ಯದಲ್ಲಿ ಗುರುವಾರ ಬಲಿಷ್ಠ ನೆದರ್ಲೆಂಡ್ಸ್‌ ವಿರುದ್ಧ ಸೆಣಸಲಿದೆ.

ಆತಿಥೇಯ ಭಾರತ ತಂಡದ ಮೇಲೆ ನಿರೀಕ್ಷೆಯ ಭಾರವಿದೆ. 43 ವರ್ಷಗಳಿಂದ ವಿಶ್ವಕಪ್ ಹಾಕಿಯ ಸೆಮಿಫೈನಲ್ ಹಂತಕ್ಕೇರಲು ವಿಫಲವಾಗಿರುವ ತಂಡ ನೆದರ್ಲೆಂಡ್ಸ್‌ನ ಸವಾಲನ್ನು ಮೀರಿ ನಿಂತು ಕನಸು ನನಾಗಿಸಿಕೊಳ್ಳುವುದೇ ಎಂಬ ಕುತೂಹಲಕ್ಕೆ ಗುರುವಾರ ಕಳಿಂಗ ಕ್ರೀಡಾಂಗಣದಲ್ಲಿ ಉತ್ತರ ಸಿಗಲಿದೆ.

ವಿಶ್ವಕಪ್‌ ಟೂರ್ನಿಯಲ್ಲಿ ಡಚ್ಚರು ಭಾರತದ ಎದುರು ಒಮ್ಮೆಯೂ ಸೋತಿಲ್ಲ. ಈ ಬಾರಿಯ ಟೂರ್ನಿಯಲ್ಲಿ ಬಿಲ್ಲಿ ಬೇಕರ್‌ ಬಳಗ ಮಿಶ್ರ ಫಲ ಕಂಡಿದೆ. ‘ಡಿ’ ಗುಂಪಿನ ಮೊದಲ ಪಂದ್ಯದಲ್ಲಿ ಮಲೇಷ್ಯಾವನ್ನು 7–0ಯಿಂದ ಮಣಿಸಿದ್ದ ತಂಡ ನಂತರ ಜರ್ಮನಿಗೆ 1–4ರಿಂದ ಮಣಿದಿತ್ತು. ಆದರೆ ಪಾಕಿಸ್ತಾನವನ್ನು 5–1ರಿಂದ ಮಣಿಸಿತ್ತು. ಕ್ರಾಸ್ ಓವರ್ ಪಂದ್ಯದಲ್ಲಿ ಕೆನಡಾವನ್ನು 5–0ಯಿಂದ ಸೋಲಿಸಿ ಎಂಟರ ಘಟ್ಟಕ್ಕೆ ಪ್ರವೇಶಿಸಿತ್ತು.

ADVERTISEMENT

ಭಾರತ ಸೋಲರಿಯದೆ ’ಸಿ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸಿದ್ದರಿಂದ ಕ್ರಾಸ್ ಓವರ್ ಪಂದ್ಯ ಆಡದೇ ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಾಲ್ಕು ದಿನಗಳ ವಿಶ್ರಾಂತಿಯ ನಂತರ ತಂಡ ಕಣಕ್ಕೆ ಇಳಿಯಲಿದ್ದು ಗುಂಪು ಹಂತದಲ್ಲಿ ತೋರಿದ ಸಾಮರ್ಥ್ಯ ಮನ‍ಪ್ರೀತ್‌ ಸಿಂಗ್‌ ಬಳಗದ ಬೆಂಬಲಕ್ಕಿದೆ. ರ‍್ಯಾಂಕಿಂಗ್‌ನಲ್ಲಿ ಭಾರತಕ್ಕಿಂತ ಒಂದು ಸ್ಥಾನ ಮೇಲೆ ಇರುವ ನೆದರ್ಲೆಂಡ್ಸ್ ಕೂಡ ಗೆಲುವಿನ ವಿಶ್ವಾಸದಲ್ಲಿದೆ.

ಉಭಯ ತಂಡಗಳು ಕೊನೆಯದಾಗಿ ಮುಖಾಮುಖಿಯಾದದ್ದು ಚಾಂಪಿಯನ್ಸ್ ಟ್ರೋಫಿಯಲ್ಲಿ. ಈ ವರ್ಷದ ಆರಂಭದಲ್ಲಿ ನಡೆದ ಆ ಪಂದ್ಯ 1–1ರಲ್ಲಿ ಡ್ರಾಗೊಂಡಿತ್ತು. ಈ ತಂಡಗಳು ಇಲ್ಲಿಯ ವರೆಗೆ ಒಟ್ಟು 105 ಪಂದ್ಯಗಳನ್ನು ಆಡಿದ್ದು ಭಾರತ 33 ಮತ್ತು ನೆದರ್ಲೆಂಡ್ಸ್ 48ರಲ್ಲಿ ಜಯ ಗಳಿಸಿದೆ. ಉಳಿದ ಪಂದ್ಯಗಳು ಡ್ರಾಗೊಂಡಿದ್ದವು.

ಆಕ್ರಮಣಕಾರಿ ಆಟದ ನಿರೀಕ್ಷೆ: ಎರಡೂ ತಂಡಗಳು ಆಕ್ರಮಣಕ್ಕೆ ಹೆಸರಾಗಿರುವುದರಿಂದ ಗುರುವಾರ ಭಾರಿ ಪೈಪೋಟಿ ನಿರೀಕ್ಷಿಸಲಾಗಿದೆ. ಬಿಲ್ಲಿ ಬೇಕರ್‌, ಸೆವೆ ವ್ಯಾನ್‌ ಆಸ್‌, ಜೆರಾನ್ ಹೆಟ್ಜ್‌ಬರ್ಗ್‌, ಮಿರ್ಕೊ ಪ್ರೂಜ್ಸರ್‌ ಮತ್ತು ರಾಬರ್ಟ್‌ ಕೆಂಪರ್‌ಮನ್ ಅವರಂಥ ಅನುಭವಿ ಆಟಗಾರರು ನೆದರ್ಲೆಂಡ್ಸ್ ಪಾಳಯದಲ್ಲಿದ್ದಾರೆ.

ಭಾರತ ತಂಡ ಮನದೀಪ್ ಸಿಂಗ್‌, ಸಿಮ್ರನ್‌ಜೀತ್ ಸಿಂಗ್‌, ಲಲಿತ್ ಉಪಾಧ್ಯಾಯ ಮತ್ತು ಆಕಾಶ್‌ ದೀಪ್ ಸಿಂಗ್ ಮೇಲೆ ಭರವಸೆ ಇರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.