ರಾಂಚಿ: ದಕ್ಷಿಣ ಕೊರಿಯಾ ತಂಡದವರ ಸ್ಫೂರ್ತಿಯುತ ಸವಾಲನ್ನು ಮೀರಿನಿಂತ ಚೀನಾ ತಂಡ, ಮಹಿಳೆಯರ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಕಂಚು ಜಯಿಸಿತು.
ಮೂರು ಮತ್ತು ನಾಲ್ಕನೇ ಸ್ಥಾನವನ್ನು ನಿರ್ಣಯಿಸಲು ಭಾನುವಾರ ನಡೆದ ಪಂದ್ಯವನ್ನು ಚೀನಾ 2–1 ಗೋಲುಗಳಿಂದ ಜಯಿಸಿತು.
ಆಕ್ರಮಣಕಾರಿ ಆಟವಾಡಿದ ಚೀನಾ ತಂಡಕ್ಕೆ ಚೆನ್ ಯಿ ಅವರು 3ನೇ ನಿಮಿಷದಲ್ಲಿ ಮೇಲುಗೈ ತಂದಿತ್ತರು. ವಿರಾಮದವರೆಗೂ ಚೀನಾ ಮುನ್ನಡೆಯನ್ನು ಉಳಿಸಿಕೊಂಡಿತು.
ಮರುಹೋರಾಟ ನಡೆಸಿದ ಕೊರಿಯಾ ತಂಡಕ್ಕೆ ಮೂರನೇ ಕ್ವಾರ್ಟರ್‌ನಲ್ಲಿ ಆನ್ ಸುಜಿನ್ (38ನೇ ನಿ.) ಅವರು ಸಮಬಲದ ಗೋಲು ತಂದಿತ್ತರು.
ಜಿದ್ದಾಜಿದ್ದಿನ ಸೆಣಸಾಟ ನಡೆದ ಕೊನೆಯ ಕ್ವಾರ್ಟರ್‌ನಲ್ಲಿ ಲುವೊ ತಿಯಾನ್‌ತಿಯಾನ್ (47ನೇ ನಿ.) ಅವರು ಚೀನಾ ತಂಡಕ್ಕೆ ಗೆಲುವಿನ ಗೋಲು ಗಳಿಸಿಕೊಟ್ಟರು. ಕೊನೆಯ ನಿಮಿಷಗಳಲ್ಲಿ ಸಮಬಲದ ಗೋಲು ಗಳಿಸಲು ಕೊರಿಯಾ ನಡೆಸಿದ ಪ್ರಯತ್ನಗಳನ್ನು ಚೀನಾ ಡಿಫೆಂಡರ್‌ಗಳು ವಿಫಲಗೊಳಿಸಿದರು.
ಚಿನ್ನದ ಪದಕಕ್ಕಾಗಿ ನಡೆಯುವ ಪಂದ್ಯದಲ್ಲಿ ಭಾರತ ಹಾಗೂ ಜಪಾನ್ ತಂಡಗಳು ಹಣಾಹಣಿ ನಡೆಯಲಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.