ADVERTISEMENT

ಕೋವಿಡ್‌–19 ವಿರುದ್ಧ ಹೋರಾಟ: ಮಹಿಳಾ ಹಾಕಿ ತಂಡದಿಂದ ₹ 20 ಲಕ್ಷ ದೇಣಿಗೆ

ಪಿಟಿಐ
Published 4 ಮೇ 2020, 19:45 IST
Last Updated 4 ಮೇ 2020, 19:45 IST
ರಾಣಿ ರಾಂಪಾಲ್‌ 
ರಾಣಿ ರಾಂಪಾಲ್‌    

ಬೆಂಗಳೂರು: ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಭಾರತ ಮಹಿಳಾ ಹಾಕಿ ತಂಡವೂ ನೆರವು ನೀಡಿದೆ. ಫಿಟ್‌ನೆಸ್‌ ಚಾಲೆಂಜ್‌ ಮೂಲಕ ₹ 20 ಲಕ್ಷ ದೇಣಿಗೆಯನ್ನು ಸಂಗ್ರಹಿಸಿದೆ.

ಮೇ 3ರಂದು ಕೊನೆಗೊಂಡ 18 ದಿನಗಳ ಫಿಟ್‌ನೆಸ್‌ ಚಾಲೆಂಜ್‌ ಮೂಲಕ ರಾಣಿ ರಾಂಪಾಲ್‌ ಪಡೆ ₹ 20,01,130 ಕಲೆ ಹಾಕಿದೆ. ಇದನ್ನು ದೆಹಲಿ ಮೂಲದ ಎನ್‌ಜಿಒ ಉದಯ್‌ ಫೌಂಡೇಶನ್‌ಗೆ ನೀಡಿದೆ.

ವಿವಿಧ ಪ್ರದೇಶಗಳಲ್ಲಿರುವ ಕೊರೊನಾ ಸೋಂಕಿತರಿಗೆ, ವಲಸೆ ಕಾರ್ಮಿಕರಿಗೆ ಹಾಗೂ ಕೊಳೆಗೇರಿ ನಿವಾಸಿಗಳ ಮೂಲಭೂತ ಅವಶ್ಯಕತೆಗಳನ್ನು ಪೂರೈಸಲು ಈ ಹಣವನ್ನು ಬಳಸಲಾಗುತ್ತದೆ.

ADVERTISEMENT

‘ನಾವು ನೀಡಿದ ಫಿಟ್‌ನೆಸ್‌ ಸವಾಲಿಗೆ ವ್ಯಾಪಕ ಸ್ಪಂದನೆ ಸಿಕ್ಕಿತು. ವಿಶ್ವದಾದ್ಯಂತ ಇರುವ ಭಾರತ ಹಾಕಿ ತಂಡಗಳ ಅಭಿಮಾನಿಗಳು ಸವಾಲಿನಲ್ಲಿ ಭಾಗವಹಿಸಿ ದೇಣಿಗೆ ನೀಡಿದರು. ಬಡವರಿಗೆ ನೆರವಾಗುವ ಈ ಕಾರ್ಯಕ್ಕೆ ಕೈಜೋಡಿಸಿದವರಿಗೆ ವಂದನೆಗಳು’ ಎಂದು ಭಾರತ ಮಹಿಳಾ ಹಾಕಿ ತಂಡದ ನಾಯಕಿ ರಾಣಿ ಹೇಳಿದ್ದಾರೆ.

ಪ್ರತಿದಿನ ಒಬ್ಬ ಆಟಗಾರ್ತಿ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹೊಸ ಫಿಟ್‌ನೆಸ್‌ ಸವಾಲು ನೀಡುತ್ತಿದ್ದರು ಮತ್ತು ಅದನ್ನು 10 ಮಂದಿಗೆ ಟ್ಯಾಗ್‌ ಮಾಡುತ್ತಿದ್ದರು. ಸವಾಲು ಸ್ವೀಕರಿಸಿದ ಪ್ರತಿಯೊಬ್ಬರು ₹ 100 ದೇಣಿಗೆ ನೀಡುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.