ADVERTISEMENT

ವಿಶ್ವಕಪ್‌ ಹಾಕಿ: ಭಾರತ– ಇಂಗ್ಲೆಂಡ್‌ ಪಂದ್ಯ ಡ್ರಾ

ಪಿಟಿಐ
Published 3 ಜುಲೈ 2022, 17:01 IST
Last Updated 3 ಜುಲೈ 2022, 17:01 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಆಮ್‌ಸ್ಟೆಲ್ವೀನ್‌, ನೆದರ್ಲೆಂಡ್ಸ್: ಚುರುಕಿನ ಪ್ರದರ್ಶನ ನೀಡಿದ ಭಾರತ ತಂಡದವರು ವಿಶ್ವಕಪ್‌ ಮಹಿಳಾ ಹಾಕಿ ಟೂರ್ನಿಯ ಪಂದ್ಯದಲ್ಲಿ ಇಂಗ್ಲೆಂಡ್‌ ಜತೆ 1–1 ಗೋಲುಗಳ ಡ್ರಾ ಸಾಧಿಸಿದರು.

ಭಾನುವಾರ ನಡೆದ ಪಂದ್ಯದ 9ನೇ ನಿಮಿಷದಲ್ಲಿ ಇಸಾಬೆಲ ಪೀಟರ್‌ ಅವರು ಇಂಗ್ಲೆಂಡ್‌ಗೆ ಮುನ್ನಡೆ ತಂದಿತ್ತರು. ವಂದನಾ ಕಟಾರಿಯಾ 28ನೇ ನಿಮಿಷದಲ್ಲಿ ಭಾರತಕ್ಕೆ ಸಮಬಲದ ಗೋಲು ತಂದಿತ್ತರು.

ಪಂದ್ಯದ ನಾಲ್ಕು ಕ್ವಾರ್ಟರ್‌ಗಳಲ್ಲೂ ಉಭಯ ತಂಡಗಳು ಸಮಬಲದ ಪೈಪೋಟಿ ನಡೆಸಿದವು. ಭಾರತಕ್ಕೆ ಹಲವು ಪೆನಾಲ್ಟಿ ಕಾರ್ನರ್‌ ಅವಕಾಶಗಳು ಲಭಿಸಿದರೂ ಅವುಗಳನ್ನು ಗೋಲಾಗಿ ಪರಿವರ್ತಿಸಲು ಆಗಲಿಲ್ಲ.

ADVERTISEMENT

ಮೂರನೇ ಕ್ವಾರ್ಟರ್‌ನಲ್ಲಿ ಇಂಗ್ಲೆಂಡ್‌ ತಂಡ ಗೋಲು ಗಳಿಸುವ ಕೆಲವೊಂದು ಉತ್ತಮ ಅವಕಾಶಗಳನ್ನು ಹಾಳುಮಾಡಿಕೊಂಡಿತು.

56ನೇ ನಿಮಿಷದಲ್ಲಿ ಶರ್ಮಿಳಾ ದೇವಿ ಅವರು ಚೆಂಡನ್ನು ಗುರಿ ಸೇರಿಸುವ ಅವಕಾಶವನ್ನು ಕಳೆದುಕೊಂಡರು. ಇದಾದ ಎರಡು ನಿಮಿಷಗಳ ಪೆನಾಲ್ಟಿ ಕಾರ್ನರ್‌ ಲಭಿಸಿದರೂ, ಇಂಗ್ಲೆಂಡ್‌ ರಕ್ಷಣಾ ವಿಭಾಗ ಭಾರತದ ಪ್ರಯತ್ನವನ್ನು ವಿಫಲಗೊಳಿಸಿತು.

ಸವಿತಾ ಪೂನಿಯಾ ಬಳಗ ‘ಬಿ’ ತನ್ನ ಎರಡನೇ ಪಂದ್ಯದಲ್ಲಿ ಮಂಗಳವಾರ ಚೀನಾ ತಂಡದ ಸವಾಲು ಎದುರಿಸಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.