ADVERTISEMENT

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌: 16ರ ಘಟ್ಟಕ್ಕೆ ನಿಖತ್, ಮನೀಷಾ

ಮಹಿಳೆಯರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಷಿಪ್‌

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2023, 19:12 IST
Last Updated 19 ಮಾರ್ಚ್ 2023, 19:12 IST
ಎದುರಾಳಿಗೆ ಪಂಚ್‌ ಮಾಡಿದ ಭಾರತದ ನಿಖತ್ ಜರೀನ್‌ (ಎಡ)–ಪಿಟಿಐ ಚಿತ್ರ
ಎದುರಾಳಿಗೆ ಪಂಚ್‌ ಮಾಡಿದ ಭಾರತದ ನಿಖತ್ ಜರೀನ್‌ (ಎಡ)–ಪಿಟಿಐ ಚಿತ್ರ   

ನವದೆಹಲಿ (ಪಿಟಿಐ): ಬಿರುಸಿನ ಪಂಚ್‌ಗಳ ಮೂಲಕ ಎದುರಾಳಿಯನ್ನು ಕಂಗೆಡಿಸಿದ ಭಾರತದ ನಿಖತ್ ಜರೀನ್ ಮತ್ತು ಮನೀಷಾ ಮೌನ್ ಅವರು ಮಹಿಳೆಯರ ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಷಿಪ್‌ನ ಪ್ರೀಕ್ವಾರ್ಟರ್‌ಫೈನಲ್ ತಲುಪಿದರು.

ಇಲ್ಲಿಯ ಕೆ.ಡಿ. ಜಾಧವ್ ಒಳಾಂಗಣದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ 50 ಕೆಜಿ ವಿಭಾಗದ 32ರ ಘಟ್ಟದ ಬೌಟ್‌ನಲ್ಲಿ ನಿಖತ್‌ 5–0ಯಿಂದ ಅಲ್ಜೀರಿಯಾದ ಬೌಲಾಮ್‌ ರೌಮಾಯಸ ಅವರನ್ನು ಮಣಿಸಿದರು.

ವಿಶ್ವ ಚಾಂಪಿಯನ್‌ ನಿಖತ್ ಅವರಿಗೆ ಟೂರ್ನಿಯಲ್ಲಿ ಇದು ಎರಡನೇ ಗೆಲುವು.

ADVERTISEMENT

ಈ ಬೌಟ್‌ನ ಆರಂಭದಲ್ಲಿ ನಿಖತ್‌ ಮತ್ತು ಆಫ್ರಿಕಾದ ಹಾಲಿ ಚಾಂಪಿಯನ್‌ ಬೌಲಾಮ್‌ ಡಿಫೆನ್ಸ್ ತಂತ್ರಗಳ ಮೊರೆ ಹೋದರು. ಮೊದಲ ಪಾಯಿಂಟ್‌ ಗಳಿಸಿದ ಭಾರತದ ಬಾಕ್ಸರ್‌ ಸ್ಪರ್ಧೆಯು ತೀವ್ರತೆ ಪಡೆಯಲು ಕಾರಣರಾದರು.

ಕೆಲವು ಪಂಚ್‌ಗಳ ಮಿಶ್ರ ಪ್ರಯೋಗ ಮಾಡಿದ ನಿಖತ್‌ ಮೊದಲ ಸುತ್ತನ್ನು ತಮ್ಮದಾಗಿಸಿಕೊಂಡರು. ಈ ವೇಳೆ ಎದುರಾಳಿಯು ಚೇತರಿಸಿಕೊಳ್ಳಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ.

‘ಬೌಲಾಮ್ ಪ್ರಮುಖ ಬಾಕ್ಸರ್ ಆಗಿರುವುದರಿಂದ ಅವರ ವಿರುದ್ಧ ಪ್ರಾಬಲ್ಯ ಸಾಧಿಸುವ ಯತ್ನ ಮಾಡಿದೆ. ಅವರ ಈ ಹಿಂದಿನ ಬೌಟ್‌ಗಳನ್ನು ವೀಕ್ಷಿಸಿದ್ದೆ. ಶರೀರಕ್ಕೆ ಹತ್ತಿರವಿದ್ದರೆ ಬೌಲಾಮ್ ಹೆಚ್ಚು ಆಕ್ರಮಣಕಾರಿಯಾಗುತ್ತಾರೆ. ಹೀಗಾಗಿ ನಾನು ಉದ್ದೇಶಪೂರ್ವಕವಾಗಿ ದೂರ ನಿಂತು ಪಂಚ್‌ಗಳನ್ನು ಪ್ರಯೋಗಿಸಿದೆ‘ ಎಂದು ಬೌಟ್‌ ಮುಗಿದ ಬಳಿಕ ನಿಖತ್ ನುಡಿದರು.

ಕಳೆದ ಆವೃತ್ತಿಯ ಕಂಚಿನ ಪದಕ ವಿಜೇತೆ ಮನೀಷಾ ಮೌನ್, 57 ಕೆಜಿ ವಿಭಾಗದ ಸ್ಪರ್ಧೆಯಲ್ಲಿ 5–0ಯಿಂದ ಆಸ್ಟ್ರೇಲಿಯಾದ ರಹೀಮಿ ಟಿನಾ ಅವರನ್ನು ಮಣಿಸಿದರು. ಬೌಟ್‌ನಲ್ಲಿ ಆಕ್ರಮಣಕಾರಿ ಆರಂಭ ಮಾಡಿದ ಅವರು ಬಳಿಕವೂ ಪಾರಮ್ಯ ಮೆರೆದರು. ಪ್ರೇಕ್ಷಕರ ಬೆಂಬಲವೂ ಅವರ ಆತ್ಮವಿಶ್ವಾಸ ಇಮ್ಮಡಿಯಾಗಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.