ADVERTISEMENT

ವಿಶ್ವ ಆರ್ಚರಿ: ಭಾರತಕ್ಕೆ ನಿರಾಸೆ

ಪಿಟಿಐ
Published 8 ಸೆಪ್ಟೆಂಬರ್ 2025, 15:21 IST
Last Updated 8 ಸೆಪ್ಟೆಂಬರ್ 2025, 15:21 IST
ಆರ್ಚರಿ
ಆರ್ಚರಿ   

ಗ್ವಾಂಗ್‌ಜು (ದಕ್ಷಿಣ ಕೊರಿಯಾ): ವಿಶ್ವ ಆರ್ಚರಿ ಚಾಂಪಿಯನ್‌ಷಿಪ್‌ನ ಪುರುಷರ ಕಾಂಪೌಂಡ್ ಸ್ಪರ್ಧೆಯಲ್ಲಿ ಭಾರತದ ಕನಸಿನ ಓಟವು ಸೋಮವಾರ ನಿರಾಸೆಯೊಂದಿಗೆ ಕೊನೆಗೊಂಡಿತು.

ತಂಡ ವಿಭಾಗದಲ್ಲಿ ಚಾರಿತ್ರಿಕ ಚಿನ್ನದ ಪದಕ ಗೆದ್ದ ರಿಷಭ್ ಯಾದವ್, ಅಮನ್ ಸೈನಿ ಮತ್ತು ಪ್ರಥಮೇಶ್ ಫುಗೆ ಅವರು ವೈಯಕ್ತಿಕ ವಿಭಾಗದ ಕ್ವಾರ್ಟರ್ ಫೈನಲ್‌ನಲ್ಲಿ ಸೋತು ಹೊರಬಿದ್ದರು.

ತಂಡ ವಿಭಾಗದಲ್ಲಿ ಭಾರತಕ್ಕೆ ಮೊದಲ ಬಾರಿ ಸ್ವರ್ಣ ಗೆದ್ದುಕೊಟ್ಟ ಬಿಲ್ಗಾರರ ಮೇಲೆ ನಿರೀಕ್ಷೆ ಹೆಚ್ಚಿಗಿತ್ತು. 2023ರಲ್ಲಿ ಬರ್ಲಿನ್‌ನಲ್ಲಿ ನಡೆದ ಆವೃತ್ತಿಯಲ್ಲಿ ಓಜಸ್ ದೇವತಾಳೆ ಚಿನ್ನದ ಪದಕ ಗೆದ್ದಿದ್ದರು. ಆದರೆ, ಈ ಬಾರಿ ಅವರಿಗೆ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಲಿಲ್ಲ. 

ADVERTISEMENT

ಪ್ರಥಮೇಶ್ ಫುಗೆ ಕ್ವಾರ್ಟರ್‌ ಫೈನಲ್‌ನಲ್ಲಿ 148–148ರಿಂದ ವಿಶ್ವದ ಎರಡನೇ ಕ್ರಮಾಂಕದ ಮಥಿಯಾಸ್ ಫುಲ್ಲರ್ಟನ್ ಅವರಿಗೆ ಸಮಬಲ ಪೈಪೋಟಿ ನೀಡಿದರು. ಆದರೆ, ಶೂಟ್‌ಆಫ್‌ನಲ್ಲಿ ಡೆನ್ಮಾರ್ಕ್‌ನ ಬಿಲ್ಗಾರ 10–9ರಿಂದ ಮೇಲುಗೈ ಸಾಧಿಸಿದರು.

ಭಾರತದ ಅಗ್ರಮಾನ್ಯ ಬಿಲ್ಗಾರ ರಿಷಭ್‌ ಒಂದು ಅಂಕಗಳಿಂದ (145–146) ವಿಶ್ವ ಚಾಂಪಿಯನ್‌ ಫ್ರಾನ್ಸ್‌ನ ನಿಕೋಲಸ್‌ ಗಿರಾರ್ಡ್ ಅವರಿಗೆ ಸೋತರು. ಅಮನ್‌ 144–147ರಿಂದ ಅಮೆರಿಕದ ಕರ್ಟಿಸ್ ಬ್ರಾಡ್ನಾಕ್ಸ್ ಅವರ ವಿರುದ್ಧ ಪರಾಭವಗೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.