
ಟೋಕಿಯೊ: ಅಮೆರಿಕದ ಓಟಗಾರ ನೋವಾ ಲೈಲ್ಸ್ ಅವರು ಸತತ ನಾಲ್ಕನೇ ಬಾರಿ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನ 200 ಮೀ. ಓಟದಲ್ಲಿ ಚಿನ್ನ ಗೆಲ್ಲುವ ಮೂಲಕ ದಿಗ್ಗಜ ಅಥ್ಲೀಟ್ ಉಸೇನ್ ಬೋಲ್ಟ್ ಅವರ ದಾಖಲೆಯನ್ನು ಸರಿಗಟ್ಟಿದರು. ನ್ಯಾಷನಲ್ ಸ್ಟೇಡಿಯಮ್‌ನಲ್ಲಿ ಶುಕ್ರವಾರ ನಡೆದ ಈ ಸ್ಪರ್ಧೆಯಲ್ಲಿ ಲೈಲ್ಸ್ 19.52 ಸೆ.ಗಳಲ್ಲಿ ಗುರಿಮುಟ್ಟಿದರು.
ಜಮೈಕದ ದಂತಕಥೆ ಉಸೇನ್ ಬೋಲ್ಟ್ 200 ಮೀ. ಓಟದಲ್ಲಿ ಸತತ ನಾಲ್ಕು ಬಾರಿ ಚಿನ್ನ ಗೆದ್ದಿದ್ದರು. 2009 ರಿಂದ 2015ರ ಅವಧಿಯಲ್ಲಿ ಅವರು ವಿಶ್ವ ಕೂಟದಲ್ಲಿ 100 ಮೀ ಮತ್ತು 200 ಮೀ. ಓಟದಲ್ಲಿ ಪಾರಮ್ಯ ಮೆರೆದಿದ್ದರು. ವಿಶ್ವ ಕೂಟದಲ್ಲಿ 11 ಚಿನ್ನ ಮತ್ತು ಒಲಿಂಪಿಕ್ಸ್‌ನಲ್ಲಿ ಎಂಟು ಚಿನ್ನ ಬಾಚಿದ್ದರು.
ಈ ಕೂಟದ 100 ಮೀ. ಓಟದಲ್ಲಿ ಲೈಲ್ಸ್ ಕಂಚಿನ ಪದಕ ಗೆದ್ದುಕೊಂಡಿದ್ದು, 200 ಮೀ. ಓಟವನ್ನು ನಿರೀಕ್ಷೆಯಂತೆ ಗೆದ್ದರು. ಸ್ವದೇಶದ ಕೆನ್ನಿ ಬೆಡ್ನಾರೆಕ್ 19.58 ಸೆ.ಗಳಲ್ಲಿ ಗುರಿತಲುಪಿ ಬೆಳ್ಳಿ ಗೆದ್ದರೆ, ಜಮೈಕಾದ ಬ್ರಯಾನ್ ಲೆವೆಲ್ (19.64 ಸೆ.) ಕಂಚಿನ ಪದಕ ಗೆದ್ದುಕೊಂಡರು.
ಒಲಿಂಪಿಕ್ ಚಾಂಪಿಯನ್, ಬೋಟ್ಸ್‌ವಾನಾದ ಲೆಟ್ಸಿಲಿ ಟೆಬಾಗೊ ಸೆಕೆಂಡಿನ ನೂರನೇ ಒಂದು ಭಾಗದಿಂದ ಪದಕ ಕಳೆದುಕೊಂಡರು. ಕಣದಲ್ಲಿದ್ದ 20 ವರ್ಷದೊಳಗಿನ ಏಕೈಕ ಅಥ್ಲೀಟ್ ಅಂಗಿಲ್ಲಾ (ಪೂರ್ವ ಕೆರಿಬಿಯನ್ ಭಾಗ) ಸಂಜಾತ ಬ್ರಿಟನ್‌ನ ಝರ್ನೆಲ್ ಹ್ಯೂಸ್ (19.78 ಸೆ.) ಐದನೇ ಸ್ಥಾನ ಪಡೆದರು.
28 ವರ್ಷ ವಯಸ್ಸಿನ ‘ಷೋ ಮ್ಯಾನ್’ ಲೈಲ್ಸ್, ಸೆಮಿಫೈನಲ್‌ನಲ್ಲಿ ದಾಖಲೆಯ 19.51 ಸೆ.ಗಳಲ್ಲಿ ಓಡಿದ್ದರು. ಫೈನಲ್‌ನಲ್ಲಿ ಆರನೇ ಲೇನ್‌ನಲ್ಲಿ ಓಡಿ, ಗುರಿಮುಟ್ಟಿದ ತಕ್ಷಣ, ಕೈಗಳನ್ನು ಮೇಲೆತ್ತಿ ಅರೆಕ್ಷಣ ಮುಗಿಲಿನತ್ತ ದಿಟ್ಟಿಸಿದರು.
ಮೆಲಿಸಾಗೆ ಸ್ಪ್ರಿಂಟ್ ಡಬಲ್: ಅಮೆರಿಕದ ಮೆಲಿಸ್ಸಾ ಜೆಫರ್ಸನ್–ವೂಡೆನ್ ಅವರು ಮಹಿಳೆಯರ 200 ಮೀ. ಓಟವನ್ನು 21.68 ಸೆ.ಗಳಲ್ಲಿ ಪೂರೈಸಿ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಸ್ಪ್ರಿಂಟ್ ಡಬಲ್ (100 ಮತ್ತು 200 ಮೀ. ಓಟ) ಸಾಧಿಸಿದರು. ಅವರು ಕೂಟದ ಮೂರನೇ ದಿನ 100 ಮೀ. ಓಟದಲ್ಲಿ ವಿಜೇತರಾಗಿದ್ದರು.
ಶೆಲ್ಲಿ–ಆ್ಯನ್ ಫ್ರೇಸರ್–ಪ್ರೈಸ್ 2013ರಲ್ಲಿ ಸ್ಪ್ರಿಂಟ್ ಡಬಲ್ ಸಾಧಿಸಿದ್ದರು. ನಂತರ ಮೆಲಿಸ್ಸಾ ಈ ಸಾಧನೆಗೆ
ಪಾತ್ರರಾಗಿದ್ದಾರೆ.
ಬೋಲ್‌ಗೆ ಚಿನ್ನ: ಡಚ್ ಓಟಗಾರ್ತಿ ಫೆಮ್ಕೆ ಬೋಲ್ ಅವರು ಮಹಿಳೆಯರ 400 ಮೀ. ಹರ್ಡಲ್ಸ್ ಓಟದ ಸ್ಪರ್ಧೆಯನ್ನು 51.54 ಸೆ.ಗಳಲ್ಲಿ ಓಡಿ ಗೆಲ್ಲುವ ಮೂಲಕ ಚಿನ್ನದ ಪದಕವನ್ನು ತಮ್ಮಲ್ಲೇ ಉಳಿಸಿಕೊಂಡರು.
ಎರಡು ಬಾರಿಯ ಒಲಿಂಪಿಕ್ ಚಾಂಪಿಯನ್ ಹಾಗೂ ವಿಶ್ವದಾಖಲೆ ಹೊಂದಿರುವ ಸಿಡ್ನಿ ಮೆಕ್‌ಲಾಫ್ಲಿನ್ ಲೆವ್ರೊನ್ ಸ್ಪರ್ಧೆಯಿಂದ ಹಿಂದೆಸರಿದರು. ಅವರು 400 ಮೀ.ಫೈನಲ್ ಓಟದ ಕಡೆ ಗಮನ ಕೇಂದ್ರೀಕರಿಸುವ ಸಲುವಾಗಿ ಹರ್ಡಲ್ಸ್‌ನಿಂದ ಹಿಂದೆಸರಿದಿದ್ದರು.
ಬೋಲ್‌ಗೆ ತೀವ್ರ ಪೈಪೋಟಿ ನೀಡಿದ ಅಮೆರಿಕದ ಜಾಸ್ಮಿನ್ ಜೋನ್ಸ್ (52.03 ಸೆ.) ಬೆಳ್ಳಿ ಪದಕ ಗೆದ್ದರು. ಸ್ಲೊವಾಕಿಯಾದ ಎಮ್ಮಾ ಝಪ್ಲೆಟಲೊವಾ (53.00 ಸೆ.) ಮೂರನೇ ಸ್ಥಾನ ಗಳಿಸಿದರು.
ಪುರುಷರ ವಿಭಾಗದಲ್ಲಿ ಒಲಿಂಪಿಕ್ ಚಾಂಪಿಯನ್ ರಾಯ್ ಬೆಂಜಮಿನ್ 46.52 ಸೆ.ಗಳಲ್ಲಿ ಗುರಿತಲುಪಿ ಚಿನ್ನ ಗೆದ್ದುಕೊಂಡರು. ಜೊತೆಗೆ ಅನರ್ಹತೆ ಆತಂಕದಿಂದ ಬಚಾವಾದರು.
ಅಮೆರಿಕದ 28 ವರ್ಷ ವಯಸ್ಸಿನ ಓಟಗಾರ, ಅಂತಿಮ ತಡೆ ದಾಟುವಾಗ ಹರ್ಡಲ್ಸ್ ಬಿದ್ದು, ಇತರ ಅಥ್ಲೀಟುಗಳ ಓಟದ ಮೇಲೆ ಪರಿಣಾಮವಾಯಿತು. ಆದರೆ ಅಂತಿಮವಾಗಿ ಫಲಿತಾಂಶ ಪ್ರಕಟವಾದಾಗ ಅವರು ಹೆಸರು ಅಗ್ರಸ್ಥಾನದಲ್ಲೇ ಉಳಿಯಿತು.
ಬ್ರೆಜಿಲ್‌ನ ಅಲಿಸನ್ ಡಾಸ್ ಸಂಟೋಸ್ (46.84 ಸೆ.) ಎರಡನೇ ಸ್ಥಾನ ಪಡೆದರೆ, ಕತಾರಿನ ಅಬ್ದರೆಹಮಾನ್ ಸಂಬಾ (47.06 ಸೆ.) ಕಂಚಿನ ಪದಕ ತಮ್ಮದಾಗಿಸಿಕೊಂಡರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.