ADVERTISEMENT

ದೂರ ಓಟದ ಸ್ಪರ್ಧೆಗಳ ಸವಾಲು

ದೋಹಾ: ವಿಶ್ವ ಅಥ್ಲೆಟಿಕ್ಸ್‌ ಚಾಂಪಿಯನ್‌ಷಿಪ್‌ಗೆ ಚಾಲನೆ

ಏಜೆನ್ಸೀಸ್
Published 27 ಸೆಪ್ಟೆಂಬರ್ 2019, 19:13 IST
Last Updated 27 ಸೆಪ್ಟೆಂಬರ್ 2019, 19:13 IST
   

ದೋಹಾ: ಕತಾರ್‌ನ ಈ ರಾಜಧಾನಿ ನಗರದಲ್ಲಿ ಶುಕ್ರವಾರ 17ನೇ ವಿಶ್ವ ಅಥ್ಲೆಟಿಕ್‌ ಚಾಂಪಿಯನ್‌ಷಿಪ್‌ ಆರಂಭವಾಯಿತು. ರಣಬಿಸಿಲು ಮತ್ತು ಸೆಕೆಯಿಂದ ಮ್ಯಾರಥಾನ್‌ ಮತ್ತು ದೂರ ಅಂತರದ ಓಟಗಾರರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲು ವ್ಯವಸ್ಥಾಪಕರು ಪಣತೊಟ್ಟಿದ್ದಾರೆ.

ಹತ್ತು ದಿನಗಳ ಈ ಮಹಾ ಅಥ್ಲೆಟಿಕ್‌ ಮೇಳದಲ್ಲಿ 208 ರಾಷ್ಟ್ರಗಳ 1,972 ಅಥ್ಲೀಟುಗಳು ಭಾಗವಹಿಸುತ್ತಿದ್ದಾರೆ.

ಬಹುತೇಕ ಸ್ಪರ್ಧೆಗಳು ಪೂರ್ಣ ಪ್ರಮಾಣದ ಏರ್‌ ಕಂಡೀಷನ್‌ ವ್ಯವಸ್ಥೆಯಿರುವ ಖಲೀಫಾ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಕಾರಣ ಹೆಚ್ಚಿನ ಅಥ್ಲೀಟುಗಳಿಗೆ ಬಿಸಿಲಿನಿಂದ ರಕ್ಷಣೆ ಸಿಗಲಿದೆ.

ADVERTISEMENT

ತಾಪಮಾನ 40 ಡಿಗ್ರಿ ಆಸುಪಾಸಿನಲ್ಲೇ ಇದೆ.

ಮ್ಯಾರಥಾನ್‌ ಮತ್ತು ದೀರ್ಘ ಅಂತರದ ಓಟಗಾರರಿಗೆ ಈ ಪರಿಸ್ಥಿತಿ ಸವಾಲಿನದಾಗಲಿದೆ. ಅಥ್ಲೀಟುಗಳ ಸುರಕ್ಷತೆಯ ಬಗ್ಗೆ ಈಗಾಗಲೇ ಕಳವಳದ ಮಾತುಗಳು ಕೇಳಿಬಂದಿವೆ.ಸೆಕೆ ಕಡಿಮೆಯಾಗುವ ರಾತ್ರಿ ಹೊತ್ತಿನಲ್ಲೇ ಇಂಥ ಸ್ಪರ್ಧೆಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಮೊದಲ ಪದಕಗಳು ನಿರ್ಧಾರವಾಗುವುದು ಮಹಿಳೆಯರ ಮ್ಯಾರಥಾನ್‌ನಲ್ಲಿ. ಸ್ಥಳೀಯ ಕಾಲಮಾನ ರಾತ್ರಿ 11.59ಕ್ಕೆ ಹೊನಲು ಬೆಳಕಿನಡಿ ಈ ಸ್ಪರ್ಧೆ ಆರಂಭವಾಯಿತು.

‘ಮ್ಯಾರಥಾನ್‌ ಓಟಗಾರರು ಇಲ್ಲಿನ ಹವೆಯನ್ನು ಎದುರಿಸಬಲ್ಲರು’ ಎಂಬ ವಿಶ್ವಾಸವನ್ನು ಐಎಎಎಫ್‌ ಅಧ್ಯಕ್ಷ ಸೆಬಾಸ್ಟಿಯನ್‌ ಕೊ ವ್ಯಕ್ತಪಡಿಸಿದರು. ರಾತ್ರಿ ತಾಪಮಾನ 32 ಡಿಗ್ರಿ ಸೆಲ್ಷಿಯಸ್‌ನಷ್ಟು ಇರಲಿದ್ದು, ಸೆಕೆ ಕೂಡ ಹೆಚ್ಚು ಇದೆ.

ವ್ಯವಸ್ಥಾಪಕರು ಅರೆ ವೈದ್ಯಕೀಯ ಸಿಬ್ಬಂದಿ ತಂಡಗಳನ್ನು ಸಜ್ಜುಗೊಳಿಸಿದ್ದಾರೆ. ಓಟದ ಹಾದಿಯಲ್ಲಿ ನಿಯಮಿತ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿದೆ.

ಆದರೆ ಫ್ರಾನ್ಸ್‌ನ ವಿಶ್ವ ಚಾಂಪಿಯನ್‌ ಯೊಹಾನ್ ಡಿನಿಜ್‌ ಸಿಡಿಮಿಡಿಗೊಂಡಿದ್ದು, ‘ಇಲ್ಲಿನ ಪರಿಸ್ಥಿತಿ ಬಗ್ಗೆ ಬೇಜಾರಾಗಿದೆ’ ಎಂದಿದ್ದಾರೆ. ‘ಸ್ಟೇಡಿಯಂನೊಳಗೆ 24–25 ಡಿಗ್ರಿ ಇದೆ. ಆದರೆ ಹೊರಗೆ ಕುಲುಮೆಯಂತಿದೆ’ ಎಂದು 41 ವರ್ಷದ ವಿಶ್ವದಾಖಲೆ ವೀರ ಡಿನಿಜ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.