ADVERTISEMENT

ವಿಶ್ವ ಬ್ಲಿಟ್ಝ್‌ ಚೆಸ್ ಚಾಂಪಿಯನ್‌ಷಿಪ್‌: ಕಾರ್ಲ್‌ಸನ್‌ಗೆ ದಾಖಲೆಯ 9ನೇ ಪ್ರಶಸ್ತಿ

ಪಿಟಿಐ
Published 30 ಡಿಸೆಂಬರ್ 2025, 20:46 IST
Last Updated 30 ಡಿಸೆಂಬರ್ 2025, 20:46 IST
ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ (ಎಡ) –ಎಎಫ್‌ಪಿ ಚಿತ್ರ
ನಾರ್ವೆಯ ಮ್ಯಾಗ್ನಸ್‌ ಕಾರ್ಲ್‌ಸನ್‌ (ಎಡ) –ಎಎಫ್‌ಪಿ ಚಿತ್ರ   

ದೋಹಾ (ಪಿಟಿಐ): ವಿಶ್ವದ ಅಗ್ರಮಾನ್ಯ ಆಟಗಾರ ಮ್ಯಾಗ್ನಸ್‌ ಕಾರ್ಲ್‌ಸನ್‌ ಅವರು ಫಿಡೆ ವಿಶ್ವ ಬ್ಲಿಟ್ಝ್‌ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ದಾಖಲೆಯ 9ನೇ ಬಾರಿ ಪ್ರಶಸ್ತಿ ಗೆದ್ದುಕೊಂಡರು. ಮಂಗಳವಾರ ಮುಕ್ತಾಯಗೊಂಡ ಈ ಚಾಂಪಿಯನ್‌ಷಿಪ್‌ನಲ್ಲಿ ಭಾರತದ ಗ್ರ್ಯಾಂಡ್‌ಮಾಸ್ಟರ್‌ ಅರ್ಜುನ್ ಇರಿಗೇಶಿ ಕಂಚು ಜಯಿಸಿದರು.

34 ವರ್ಷ ವಯಸ್ಸಿನ ಕಾರ್ಲ್‌ಸನ್‌ ಅವರು ಫೈನಲ್‌ನಲ್ಲಿ 2.5-1.5 ರಿಂದ ಉಜ್ಬೇಕಿಸ್ತಾನದ ನಾದಿರ್ಬೆಕ್ ಅಬ್ದುಸತ್ತಾರೋವ್ ಅವರನ್ನು ಸೋಲಿಸಿದರು. ಫೈನಲ್‌ನ ಮೊದಲ‌ ಮೂರು ಆಟಗಳು ಡ್ರಾ ಆದವು. ಅಂತಿಮ ಹಾಗೂ ನಾಲ್ಕನೇ ಆಟದಲ್ಲಿ ಕಾರ್ಲ್‌ಸನ್‌ ನಿರ್ಣಾಯಕ ಜಯ ಸಾಧಿಸಿ, ರಾಜನಾಗಿ ಮೆರೆದರು.

ಸೆಮಿಫೈನಲ್ ಪಂದ್ಯಗಳಲ್ಲಿ ಕಾರ್ಲ್‌ಸನ್‌ 3–1 ರಿಂದ ಅಮೆರಿಕದ ಫ್ಯಾಬಿಯಾನೊ ಕರುವಾನ ಅವರನ್ನು ಹಾಗೂ ಅಬ್ದುಸತ್ತಾರೋವ್ 2.5–0.5 ರಿಂದ ಅರ್ಜುನ್ ಅವರನ್ನು ಮಣಿಸಿದ್ದರು. ಅಬ್ದುಸತ್ತಾರೋವ್ ಮೊದಲ ಎರಡು ಪಂದ್ಯಗಳನ್ನು ಗೆದ್ದು, ಮೂರನೆಯದನ್ನು ಡ್ರಾ ಮಾಡಿಕೊಂಡಿದ್ದರು.

ADVERTISEMENT

ನಾರ್ವೆಯ ಆಟಗಾರ ಕಾರ್ಲ್‌ಸನ್‌ ಹಾಗೂ ವಾರಂಗಲ್‌ನ ಅರ್ಜುನ್ ಎರಡು ದಿನ ಹಿಂದಷ್ಟೇ ವಿಶ್ವ ರ್‍ಯಾಪಿಡ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಚಿನ್ನ ಹಾಗೂ ಕಂಚಿನ ಪದಕ ಗೆದ್ದಿದ್ದರು.

ಕಜಕಸ್ತಾನದ ಬಿಬಿಸಾರಾ ಅಸೌಬಯೇವಾ ಅವರು ಮಹಿಳಾ ವಿಭಾಗದಲ್ಲಿ ಕಿರೀಟ ತಮ್ಮದಾಗಿಸಿಕೊಂಡರು. ಏಳನೇ ಶ್ರೇಯಾಂಕದ ಬಿಬಿಸಾರಾ ಅವರು ಫೈನಲ್‌ನಲ್ಲಿ 2.5-1.5 ರಿಂದ ಉಕ್ರೇನಿನ ಅನ್ನಾ ಮುಝಿಚುಕ್ ವಿರುದ್ಧ ಗೆಲುವು ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.